ಇರಾನ್‌ ಅಣುಕೇಂದ್ರದ ಮೇಲೆ ಮತ್ತೆ ಇಸ್ರೇಲ್‌ ದಾಳಿ: ಉತ್ಪಾದನಾ ಸಾಮರ್ಥ್ಯಕ್ಕೆ ಹೊಡೆತ

Most read

ಜೆರುಸಲೇಂ: ಇರಾನ್ ಮೇಲಿನ ದಾಳಿಯ ಎರಡನೇ ಹಂತದಲ್ಲಿ ಇಸ್ಫಹಾನ್ ಅಣು ಕೇಂದ್ರದಲ್ಲಿರುವ ಎರಡು ಸೆಂಟ್ರಿಫ್ಯೂಜ್ ಉತ್ಪಾದನಾ ಕೇಂದ್ರಗಳ ಮೇಲೆ ಕಳೆದ ರಾತ್ರಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ನ ಸೇನಾ ಅಧಿಕಾರಿಗಳು ಇಂದು ತಿಳಿಸಿದ್ದಾರೆ. ನಮ್ಮ ಕಾರ್ಯಾಚರಣೆಯ ಮೊದಲ 24 ಗಂಟೆಯಲ್ಲಿ ನಾವು ಇಸ್ಫಹಾನ್ ಅನ್ನು ಗುರಿಯಾಗಿಸಿಕೊಂಡಿದ್ದೆವು. ಕಳೆದ ರಾತ್ರಿ ನಾವು ಎರಡನೇ ಹಂತದ ದಾಳಿ ನಡೆಸಿದ್ದು, ಅಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ ಎಂದು ಸೇನಾ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾವು ಸೆಂಟ್ರಿಫ್ಯೂಜ್ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ್ದೆವು. ಈ ದಾಳಿ ಅದರ ಮುಂದುವರೆದ ಭಾಗವಾಗಿದೆ. ಸೆಂಟ್ರಿಫ್ಯೂಜ್ ಘಟಕಗಳ ಮೇಲೆ ಇಸ್ರೇಲಿ ವಾಯುಪಡೆಗಳಿಂದ ಸತತ ದಾಳಿಯು ಉತ್ಪಾದನಾ ಸಾಮರ್ಥ್ಯಕ್ಕೆ ಗಂಭೀರ ಹೊಡೆತ ಬಿದ್ದಿದೆ ಎಂದು ಅವರು ಹೇಳಿದ್ದಾರೆ. ನಾಗರಿಕ ಹಾಗೂ ಮಿಲಿಟರಿ ಬಳಕೆಗೆ ಯುರೇನಿಯಂ ಅನ್ನು ಉತ್ಕೃಷ್ಟಗೊಳಿಸಲು ಸೆಂಟ್ರಿಫ್ಯೂಜ್‌ ಗಳನ್ನು ಬಳಸಲಾಗುತ್ತದೆ. ಕೇಂದ್ರ ಇರಾನ್‌ನಲ್ಲಿರುವ ಇಸ್ಫಹಾನ್ ಅಣು ಕೇಂದ್ರದಲ್ಲಿ ಯುರೇನಿಯಂ ಪರಿವರ್ತನಾ ವ್ಯವಸ್ಥೆ ಇದೆ ಎಂದು ನಂಬಲಾಗಿದೆ.

ಅಲ್ಲದೇ ಅಲ್ಲಿ ಅಣು ಇಂಧನಾ ಉತ್ಪಾದನಾ ಘಟಕವೂ ಇದ್ದು, ಇದನ್ನು 2009ರಲ್ಲಿ ಉದ್ಘಾಟಿಸಲಾಗಿತ್ತು. 2022ರಲ್ಲಿ ಅಲ್ಲಿ ಹೊಸ ಸಂಶೋಧನಾ ರಿಯಾಕ್ಟರ್‌ ನಿರ್ಮಿಸುವುದಾಗಿಯೂ ಘೋಷಿಸಿತ್ತು.

More articles

Latest article