ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಚಕ್ರವರ್ತಿ: ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿ

Most read

 ಉಡುಪಿ: ಕೇಂದ್ರ ಸರ್ಕಾರದ ತೀರ್ಮಾನದಂತೆ ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇಕಡ 5 ರಷ್ಟು ಏರಿಕೆ ಮಾಡಲಾಗಿದೆ. ಈ ವಿಷಯದಲ್ಲಿ ಬಿಜೆಪಿ ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿ ಕಾರಿದ್ದಾರೆ‌.

ಉಡುಪಿಯಲ್ಲಿ ಮಾತನಾಡಿದ ಅವರು ಬಿಜೆಪಿಯವರಿಗೆ ರಾಜಕಾರಣ ಮಾಡಲು ಬೇರೆ ವಿಚಾರಗಳಿಲ್ಲ. ಮೊದಲು ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿ ಯಶಸ್ವಿ ಆಗುವುದಿಲ್ಲ ಎಂದರು. ನಾವು 136 ಸೀಟು ಗೆದ್ದರೂ ಆರು ತಿಂಗಳು ಸರ್ಕಾರ ಉಳಿಯಲ್ಲ ಎಂದರು. ಇದೀಗ ಜನರ ಭಾವನೆಗಳ ಜೊತೆ ಬಿಜೆಪಿ ಆಟವಾಡುತ್ತದೆ. ಮಾತನಾಡಲು ಅವರಿಗೆ ಬೇರೇನೂ ಉಳಿದಿಲ್ಲ ಎಂದು ದೂರಿದರು.

ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಲಕ್ಷಣ ಇದೆ.‌ ಹೀಗಾಗಿ ಮಳೆ ಅವಾಂತರ ನಿಯಂತ್ರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಉಡುಪಿ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಯಾವುದೇ ಪ್ರಮಾಣದಲ್ಲಿ ಮಳೆ ಬಂದರೂ ನಾವು ಸಿದ್ಧವಾಗಿದ್ದೇವೆ ಎಂದು ಸಚಿವರು ಹೇಳಿದರು.

ಕುಂದಾಪುರದಲ್ಲಿ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸಕ್ಕೆ ಎನ್ ಎಸ್ ಯುಐ ಅಕ್ಷೇಪ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಚಕ್ರವರ್ತಿ. ಬಾಯಿ ತೆರೆದರೆ ರಾಮಾಯಣ, ಭಗವದ್ಗೀತೆ, ಮಹಾಭಾರತ ಹೇಳುತ್ತಾರೆ. ಆದರೆ ಯಾವ ಪ್ರಮಾಣದಲ್ಲಿ ಸುಳ್ಳು ಹೇಳುತ್ತಾರೆ ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತು ಎಂದು ವ್ಯಂಗ್ಯವಾಡಿದರು.

ಇವರು ಕಪ್ಪಗಿರುವುದನ್ನು ಬೆಳ್ಳಗೆ ಮಾಡುವುದರಲ್ಲಿ, ಬೆಳ್ಳಗೆ ಇರುವುದನ್ನು ಕಪ್ಪು ಮಾಡುವುದರಲ್ಲಿ ನಿಸ್ಸೀಮರು. ವಾಕ್ ಸ್ವಾತಂತ್ರ್ಯ ಸೇರಿದಂತೆ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಪಕ್ಷ ಕೊಟ್ಟಿದೆ. ಇಡೀ ದೇಶದ ಇತಿಹಾಸದಲ್ಲಿ ಸಂವಿಧಾನವನ್ನು ಎತ್ತಿ ಹಿಡಿದ ಪಕ್ಷ ಕಾಂಗ್ರೆಸ್ ಎಂದು ಸಚಿವರು ಹೇಳಿದರು.

ನಾವು ಚಕ್ರವರ್ತಿ ಸೂಲಿಬೆಲೆ ಅವರಿಂದ ಪಾಠ ಕೇಳಬೇಕಾಗಿಲ್ಲ. ಮೂರು ದಿನ ಉಡುಪಿ ಜಿಲ್ಲೆಯಲ್ಲಿ ಸೂಲಿಬೆಲೆ ಇರುವ ವಿಚಾರ ಪೊಲೀಸ್ ವರಿಷ್ಠಾಧಿಕಾರಿಗಳಿಂದ ತಿಳಿಯಿತು. ಖಂಡಿತವಾಗಿ ಸೂಲಿಬೆಲೆ ಪ್ರವಾಸ ಮಾಡಬಹುದು. ದ್ವೇಷದ ಭಾಷಣ, ಸುಳ್ಳು ಬಿತ್ತುವ ಕೆಲಸ, ವಿಷ ಬೀಜ ಬಿತ್ತುವ ಕೆಲಸ ಮಾಡದಿರಲಿ. ಏಕೆಂದರೆ ಉಡುಪಿ ಶಾಂತಿ ಪ್ರಿಯರ ಜಿಲ್ಲೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬಿಜೆಪಿ ಮುಖಂಡರು ಒಂದು ಕಡೆ ಕೋಮುವಾದವನ್ನು ಪ್ರಚೋದನೆ ಮಾಡುತ್ತದೆ. ಆದರೆ ನಾವು ಮಾಡುತ್ತಿಲ್ಲ ಎನ್ನುತ್ತಾರೆ. ಇನ್ನೊಂದು ಕಡೆ ಕೋಮು ನಿಗ್ರಹದಳಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ.‌ ಇಂಥ ಮನೋಭಾವನೆಯ ಬಿಜೆಪಿ ಶಾಸಕರನ್ನು ನೋಡಿದರೆ ಅವರ ಮನಸ್ಥಿತಿ ಏನು ಅನ್ನುವುದು ಉಡುಪಿಯ ಜನತೆಗೆ ಅರ್ಥವಾಗುತ್ತೆ ಎಂದು ಸಚಿವರು ಜಿಲ್ಲೆಯ ಬಿಜೆಪಿ ಶಾಸಕರ ವಿರುದ್ಧ ಕಿಡಿ ಕಾರಿದರು.

More articles

Latest article