ಜಾತಿಗಣತಿ ಸಮೀಕ್ಷೆಗೆ ಪ್ರತಿಪಕ್ಷಗಳಿಂದ ರಾಜಕೀಯ ಬಣ್ಣ: ಡಿಕೆಶಿ ಆರೋಪ

Most read

ಬೆಂಗಳೂರು: ಜಾತಿಗಣತಿ ಸಮೀಕ್ಷೆಯ ವಿಚಾರದಲ್ಲಿ ಕಾಂಗ್ರೆಸ್‌ಗೆ  ಸಾಮಾಜಿಕ ನ್ಯಾಯ ಬೇಕೇ ಹೊರತು ರಾಜಕೀಯ ಬಣ್ಣ ಬೇಕಿಲ್ಲ. ಆದ್ದರಿಂದ ನಮ್ಮ ಸರ್ಕಾರ ಮತ್ತೊಮ್ಮೆ ಸಮೀಕ್ಷೆ ಮಾಡಲು ತೀರ್ಮಾನಿಸಿದೆ ಎಂದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಮರುಸಮೀಕ್ಷೆಗೆ ಸರ್ಕಾರ ನಿರ್ಧರಿಸಿದ್ದು, ಪ್ರತಿಪಕ್ಷದ ಮುಖಂಡರು ಹಿಂದೆ ಒಂದು, ಮುಂದೆ ಒಂದು ಮಾತನಾಡಿ ರಾಜಕೀಯಬಣ್ಣ ಲೇಪಿಸುತ್ತಿದ್ದಾರೆ. ಈ ಹಿಂದಿನ ವರದಿ ಬಗ್ಗೆ ಟೀಕೆ ಮಾಡಿದ್ದ ವಿರೋಧ ಪಕ್ಷದ ಮುಖಂಡರು ಈಗ ಉಲ್ಟಾ ಮಾತನಾಡುತ್ತಿದ್ದಾರೆ. ಈ ರೀತಿ ಮಾತನಾಡುವ ಬದಲು ಹಳೆಯ ಜಾತಿಗಣತಿ ವರದಿಯನ್ನೇ ಒಪ್ಪಿಕೊಳ್ಳುವಂತೆ ಒತ್ತಾಯಿಸಲಿ ಎಂದು ಸವಾಲು ಹಾಕಿದರು.

2015ರಲ್ಲಿ ನಡೆದ ಸಮೀಕ್ಷೆ 10 ವರ್ಷಗಳಷ್ಟು ಹಳೆಯದ್ದಾಗಿದೆ ಎಂದು ಸಾರ್ವಜನಿಕರು ನ್ಯಾಯಾಲಯದ ಮೆಟ್ಟಿಲೇರಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ 1995 ಸೆಕ್ಷನ್ 11 (2)ರ ಅನುಸಾರ ತಡೆಯಾಜ್ಞೆ ತರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಆದ್ದರಿಂದ ಸರ್ಕಾರ ಸಾರ್ವಜನಿಕರು, ಶಾಸಕರ ಭಾವನೆ, ಅಭಿಪ್ರಾಯ ಅರಿತು ಜಾತಿವಾರು  ಸಮೀಕ್ಷೆಗೆ ಕಾನೂನಾತ್ಮಕವಾಗಿ ಒಪ್ಪಿಗೆ ನೀಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ಲಿಂಗಾಯತ ಮತ್ತು ಒಕ್ಕಲಿಗರಿಂದ ಈ ಹಿಂದೆ ವಿರೋಧ ವ್ಯಕ್ತವಾದ ಬಗ್ಗೆ ಪ್ರಶ್ನಿಸಿದಾಗ, ಆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಹೊಸ ಸಮೀಕ್ಷೆಯಲ್ಲಿ ಸಮಾಜದ ಎಲ್ಲರೂ ಒಳಗೊಳ್ಳುವಂತೆ ಮಾಡುವುದು ನಮ್ಮ ಉದ್ದೇಶ. ಹೊರನಾಡು ಕನ್ನಡಿಗರಿಗೆ ಸಮೀಕ್ಷೆಯಲ್ಲಿ ಭಾಗವಹಿಸಲು ಆನ್‌ ಲೈನ್‌ ಮೂಲಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಡಿಕೆ ಶಿವಕುಮಾರ್‌ ತಿಳಿಸಿದರು.

More articles

Latest article