ಹೆಣ್ಣೊಂದು ಕಲಿತರೆ ನಾಡು ನುಡಿಗೆ ಗೌರವ ದೊರೆತಂತೆ…

Most read

ಬದುಕಿನ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಜನಸಮುದಾಯಕ್ಕೆ ತನ್ನ ಸೇವೆಯನ್ನು ಮಾಡುತ್ತಲೇ ಪಡೆದ ಬುಕರ್ ಪ್ರಶಸ್ತಿ  ಭಾನು ಮೇಡಂ ಅವರ ಸಾಹಿತ್ಯಕ್ಕೆ ಸಂದ ಪ್ರಶಸ್ತಿ ಮಾತ್ರವಲ್ಲ  ಹೆಣ್ಣನ್ನು ದಮನಿಸುವ ಪುರುಷ ಪ್ರಧಾನ ವ್ಯವಸ್ಥೆ ವಿರುದ್ಧ ಎತ್ತಿದ ದನಿಗೆ ಸಂದ ಪ್ರಶಸ್ತಿಯು ಹೌದುರೇಶ್ಮಾ ಗುಳೇದಗುಡ್ಡಾಕಾರ್‌,ಕವಯಿತ್ರಿ.

ಹಿರಿಯ ಲೇಖಕಿ ,ಹೋರಾಟಗಾರ್ತಿ, ನ್ಯಾಯವಾದಿ ಬಾನು ಮುಷ್ತಾಕ್ ಅವರಿಗೆ ಹಾಗೂ ದೀಪಾ ಭಾಸ್ತಿ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯು ಮುಡಿಗೇರಿದೆ.

ಭಾರತದಲ್ಲಿ ಬುಕರ್ ಪ್ರಶಸ್ತಿ ಇತರ ಭಾಷೆಗಳಲ್ಲಿ ಸದ್ದು ಮಾಡಿದಾಗ ಯಾವಾಗ ನಮ್ಮ ಕನ್ನಡಕ್ಕೆ ಈ ಅವಕಾಶ ಲಭಿಸುತ್ತದೆ ಎಂದು  ನೀರೀಕ್ಷೆ  ಮಾಡಿದ್ದ ದಿನಗಳು ಇದ್ದವು.

ಒಂದು ಜಾತಿ ಅಥವಾ ಒಂದು ಸಮುದಾಯಕ್ಕೆ ಒಂದು ಭಾಷೆ ಎಂದು ಸೀಮಿತವಾಗಿ ನೋಡುವವರಿಗೆ, ಕನ್ನಡವನ್ನು ಯಾಕೆ ಮಾತನಾಡುತ್ತೀರಿ? ಎಂದು ಕನ್ನಡ ಮನೆಮಾತು ಅಲ್ಲದವರಿಗೆ ಕೇಳುವವರಿಗೆ, ಅನ್ಯಭಾಷಿಕರು ಕನ್ನಡವನ್ನು ಬಳಕೆ ಮಾಡಿದರೆ ತಪ್ಪು ಎಂದುಕೊಳ್ಳುವ ಎಲ್ಲರಿಗೂ ಬಾನು ಅವರ ಬುಕರ್ ಪ್ರಶಸ್ತಿ ಉತ್ತರ ನೀಡಿದೆ.

ಇತರ ಭಾಷೆಗಳ ಬಗ್ಗೆ ನಮಗೆ ಪ್ರಶ್ನೆ ಇಲ್ಲ. ಆದರೆ ನಮ್ಮ ನೆಲದ ನಮ್ಮ ಭಾಷೆಯನ್ನು ಹೆಮ್ಮೆಯಿಂದ ಮಾತನಾಡಲು ಅದನ್ನು ಬಳಸಲು ನಮಗಿರುವ ಅಂಜಿಕೆ, ಅಳುಕು, ಆತಂಕ ಏಕೆ? ಎಂಬುದು ಇಂದಿಗೂ ಗೊತ್ತಾಗುತ್ತಿಲ್ಲ. ಆದರೆ ಈ ಭಾಷಾತಲ್ಲಣ ದಿನ ದಿನಕ್ಕೂ ಸಮುದಾಯಗಳಲ್ಲಿ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು, ಸ್ವಾತಂತ್ರ್ಯವನ್ನು, ಗೌರವವನ್ನು  ನೀಡಲು  ಪುರುಷ ಪ್ರಧಾನ ವ್ಯವಸ್ಥೆ ಬಹಳಷ್ಟು ಹಿಂದೇಟು ಹಾಕುತ್ತದೆ. ಇದಕ್ಕೆ ಮುಸ್ಲಿಂ ಸಮುದಾಯ ಹೊರತಲ್ಲ.

ಅಲ್ಲೊಂದು ಇಲ್ಲೊಂದು ಓದಿರುವ ಪ್ರಗತಿಪರ ಕುಟುಂಬ ಅಥವಾ ಹೆಣ್ಣು ಇಡೀ ಮುಸ್ಲಿಂ ಸಮುದಾಯದ ಪ್ರತಿನಿಧಿ ಆಗುವುದಿಲ್ಲ. ವಾಸ್ತವ ಚಿತ್ರಣ ಬೇರೆಯೇ ಇದೆ .

ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳಿಗೆ ಬಾನು ಮೇಡಂ ದೀಪಾ ಭಾಸ್ತಿ ಜೋಡಿ ಬುಕರ್ ಪ್ರಶಸ್ತಿ ಪುರಸ್ಕೃತವಾಗಿದೆ.  ಅದೇ ದಿಕ್ಕಿನಲ್ಲಿ ನೋಡಿದರೆ ಎಷ್ಟು ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣ ಪಡೆದಿದ್ದಾರೆ,  ಎಷ್ಟು ಉತ್ತಮ ಸಾಮಾಜಿಕ ಹಾಗೂ ಸಾಂಸಾರಿಕ ಬದುಕು  ಸವೆಸಿದ್ದಾರೆ ಎಂದರೆ ಅಲ್ಲಿ ನಮಗೆ ಪ್ರಗತಿ ಇರಲಿ ಒಂದು ಸಕಾರಾತ್ಮಕ ವಿಕಾಸದ ಬೆಳವಣಿಗೆಯೇ ಕಾಣುವುದಿಲ್ಲ, ಧರ್ಮದ ಪಾಲನೆಯ ರಾಯಭಾರಿಯಾಗಿ ಹೆಣ್ಣುಮಕ್ಕಳನ್ನು ರೂಪಿಸುವಲ್ಲಿ  ಮುಸ್ಲಿಂ ಸಮುದಾಯ ಹೊರಟಿದೆ. ವಿಪರ್ಯಾಸ ಎಂದರೆ ಇದು ಗಂಡಿಗೆ ಅನ್ವಯವಾಗುವುದೇ ಇಲ್ಲ.

ಆತನ ಉಡುಪು, ವಿದ್ಯೆ, ವೃತ್ತಿ, ವಿವಾಹ ಎಲ್ಲವನ್ನು ಗಂಡು ತಾನೇ ಆಯ್ಕೆ ಮಾಡಬಹುದು. ಆತ ಯಾವ ಉದ್ಯೋಗದಲ್ಲಿದ್ದರೂ ಆತ ತನ್ನ ಉಡುಪುಗಳನ್ನು ತನಗೆ ಬೇಕಾದಂತೆ ಹಾಕಿಕೊಳ್ಳಬಹುದು. ಆದರೆ ಹೆಣ್ಣು ಹಾಗಲ್ಲವಲ್ಲ..

ಇಂತವುಗಳನ್ನು ಯಾವ ಮುಸ್ಲಿಂ ಹೆಣ್ಣು ಮಕ್ಕಳೂ ಪ್ರಶ್ನಿಸುವುದಿಲ್ಲ. ಚರ್ಚೆ ಮಾಡುವುದೂ ಇಲ್ಲ. ಈ ವಿಚಾರ ಮುನ್ನಲೆಗೆ ಬರುವುದೇ ಇಲ್ಲ. ನೀನು ನಮಾಜ್ ಮಾಡು, ನೀನು ಕುರಾನ್ ಓದು, ಸಾಧ್ಯವಾದರೆ ಹೋಟೆಲಿಗಿಂತಲೂ ಹೆಚ್ಚು ರುಚಿಕರವಾಗಿ ಅಡುಗೆಗಳನ್ನು ಬೇಯಿಸು ಎಂಬುದಷ್ಟೇ ಅವಳ ಪಾಲಿಗೆ ಒದಗಿ ಬರುತ್ತದೆ. ಅವಳು ಯಾವುದೇ ವೃತ್ತಿಯಲ್ಲಿದ್ದರೂ ಸರಿಯೇ ಯಾವುದೇ ಪರಿಸ್ಥಿತಿಯಲ್ಲಿ ಇದ್ದರೂ ಸರಿಯೇ. ಹೆಚ್ಚೆಂದರೆ ಅವಳು ಒಡವೆಗಳನ್ನು ಹೇರಿಕೊಂಡು ದುಬಾರಿಯಾದ ಬಟ್ಟೆಗಳನ್ನು ಧರಿಸಿಕೊಂಡು ಓಡಾಡಬೇಕು. ಇದು ಪುರುಷನ ಅಥವಾ ಅವರ ಮನೆಯ ಘನತೆಯನ್ನು  ಹೆಚ್ಚಿಸಿ ಕೊಡಬೇಕು.  ಆದರೆ ಅವಳು ಅಪ್ಪಿ ತಪ್ಪಿಯೂ ತನ್ನ ಮಾತುಗಳನ್ನು  ಯಾರೊಂದಿಗೂ ಹಂಚಿಕೊಳ್ಳುವ ಹಾಗಿಲ್ಲ. ಯಾವ  ಸಮಾರಂಭಗಳಿಗೆ  ಹೋಗಬೇಕು ಅಥವಾ ಯಾರೊಂದಿಗೆ ಮಾತನಾಡಬೇಕು ಎಂಬುದನ್ನು ಗಂಡ ಅಥವಾ ಮಾವ  ನಿರ್ಧರಿಸುವ ಪರಿಸ್ಥಿತಿಗಳೂ ಇವೆ.

 ಈ ವಿವಾಹ ಎನ್ನುವುದು ಗಂಡ ಅತ್ತೆ ಮಾವ ಮಕ್ಕಳ ಚಾಕರಿ ಮಾಡಿಕೊಂಡು ಸಾಧ್ಯವಾದರೆ ಒಂದು ಕೆಲಸಕ್ಕೆ ಹೋಗಿ ಬಂದು ಹೊತ್ತು ಹೊತ್ತಿಗೆ ಸರಿಯಾಗಿ ಊಟ ಮಾಡಲು ಸಮಯ ಸಿಗದ ಹೆಣ್ಣು ಮಕ್ಕಳು  ನಮ್ಮ ನಡುವೆ ಇದ್ದಾರೆ. ಇವರಿಗೆ ಓದು -ಬರಹ ಎನ್ನುವುದು ದೂರದ ಮಾತೇ ಸರಿ. ವಿದ್ಯೆ ಮತ್ತು ಅವಕಾಶಗಳು  ಈಗಲೂ ಸಹ ಹಲವಾರು ಹೆಣ್ಣು ಮಕ್ಕಳಿಗೆ ಗಗನ ಕುಸುಮವೇ ಆಗಿದೆ.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತನ್ನು ಈಗ ಹೆಣ್ಣು ಮಕ್ಕಳು ಬರೆದರೆ ನಾಡು ನುಡಿಗೆ ಗೌರವ ದೊರೆಯುತ್ತದೆ ಎಂದು  ಮನಗಾಣ ಬೇಕಿದೆ .

ಬಾನು ಮೇಡಂ ಅವರ ಎದೆಯ ಹಣತೆ ಕಥೆಯಲ್ಲಿ ವ್ಯಕ್ತವಾಗಿರುವ ಕಥಾವಸ್ತುವಿನ ಸ್ಥಿತಿ  ಇಂದಿಗೂ ಹೆಚ್ಚೇನು ಬದಲಾಗಿಲ್ಲ . ಹೆಣ್ಣಿನ ಬದುಕಿನ ಎಲ್ಲ ಸಮಸ್ಯೆಗಳನ್ನು ಹೆಣ್ಣಿನ ಮೇಲೆ ಹೇರಿ ತಾವು ನಿರಾಳವಾಗುವ ಪುರುಷ ಮನಗಳು ಇದ್ದು ಇಲ್ಲದಂತಿರುವ ಸಂಬಂಧಗಳು  ಇಂದು ತುಸು ಹೆಚ್ಚೇ ಇವೆ.

ಬದುಕಿನ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಜನಸಮುದಾಯಕ್ಕೆ ತನ್ನ ಸೇವೆಯನ್ನು ಮಾಡುತ್ತಲೇ ಪಡೆದ ಬುಕರ್ ಪ್ರಶಸ್ತಿ  ಭಾನು ಮೇಡಂ ಅವರ ಸಾಹಿತ್ಯಕ್ಕೆ ಸಂದ ಪ್ರಶಸ್ತಿ ಮಾತ್ರವಲ್ಲ  ಹೆಣ್ಣನ್ನು ದಮನಿಸುವ ಪುರುಷ ಪ್ರಧಾನ ವ್ಯವಸ್ಥೆ ವಿರುದ್ಧ ಎತ್ತಿದ ದನಿಗೆ ಸಂದ ಪ್ರಶಸ್ತಿಯೂ ಹೌದು. ಭಾನುಅವರ ಈ ನಡೆ ಬಹುಶಃ ಮುಂದಿನ ಪೀಳಿಗೆಗೆ ಮಾದರಿಯಾಗಬಲ್ಲದೆ? ಅಥವಾ ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ ತಮ್ಮ ಅಸ್ತಿತ್ವವನ್ನು ನೆನಪು ಮಾಡಿಕೊಡಬಹುದೇ? ಕಾದುನೋಡಬೇಕಿದೆ.

ಬಾನು ಮತ್ತು ದೀಪ ಜೋಡಿಯು ದೇಶದ  ಸಹಬಾಳ್ವೆಯ ಪ್ರತಿನಿಧಿಯಾಗಿದೆ. ಅನುವಾದವನ್ನು ಮೂಲ ಕೃತಿಗೆ ಧಕ್ಕೆ ಬರದಂತೆ ಅನುವಾದಿಸಿ ಅದನ್ನು ಬುಕರ್ ಅಂಗಳಕ್ಕೂ ಕೊಂಡೊಯ್ದ ದೀಪಾ ಭಾಸ್ತಿ ಅವರಿಗೂ ಮತ್ತೊಮ್ಮೆ ಅಭಿನಂದನೆಗಳು.

ರೇಶ್ಮಾ ಗುಳೇದಗುಡ್ಡಾಕರ್‌
ಕವಯಿತ್ರಿ

ಇದನ್ನೂ ಓದಿ- ಯುದ್ಧದ ದಿನಗಳಲ್ಲಿ ಸೂರ್ಯೋದಯವಾಗುವುದಿಲ್ಲ..

More articles

Latest article