ನವದೆಹಲಿ: ಈ ವರ್ಷದ ಫೆಬ್ರುವರಿಯಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್, ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳು ಖರ್ಚು ಮಾಡಿದ ಹಣಕಾಸಿನ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು, 70 ಕ್ಷೇತ್ರಗಳ ಪೈಕಿ 68 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 68 ಅಭ್ಯರ್ಥಿಗಳಿಗೆ ಬಿಜೆಪಿ ತಲಾ ರೂ.25 ಲಕ್ಷದಂತೆ ರೂ.17 ಕೋಟಿ ನೀಡಿದೆ. ಎಎಪಿ ಪಕ್ಷವು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ರೂ. 10 ಲಕ್ಷ ಸೇರಿದಂತೆ 70 ಅಭ್ಯರ್ಥಿಗಳ ಪೈಕಿ 23 ಅಭ್ಯರ್ಥಿಗಳಿಗೆ ರೂ. 2.23 ಕೋಟಿ ನೀಡಿದೆ.
ಚುನಾವಣಾ ಪ್ರಚಾರಕ್ಕಾಗಿ ಎಎಪಿ ಒಟ್ಟು 14.51 ಕೋಟಿ ರೂ, ಕಾಂಗ್ರೆಸ್ 46.18 ಕೋಟಿ ರೂ. ವೆಚ್ಚ ಮಾಡಿದೆ. ಆದರೆ ಬಿಜೆಪಿ ಇನ್ನೂ ಖರ್ಚು ವೆಚ್ಚದ ವರದಿಯನ್ನು ಸಲ್ಲಿಸಿಲ್ಲ. ಆಮ್ ಆದ್ಮಿ ಪಕ್ಷವು, ಜಾಹೀರಾತು, ಪೋಸ್ಟರ್ ಮತ್ತು ನೋಟಿಸ್ ಸೇರಿದಂತೆ ಚುನಾವಣಾ ಪ್ರಚಾರಕ್ಕಾಗಿ ರೂ.12.12 ಕೋಟಿ ಖರ್ಚು ಮಾಡಿದೆ. ಪತ್ರಿಕೆಗಳಲ್ಲಿ ಜಾಹೀರಾತು ನೀಡಲು ರೂ.16 ಲಕ್ಷ, ಗೂಗಲ್ ಜಾಹೀರಾತುಗಳಿಗಾಗಿ ರೂ.2.24 ಕೋಟಿ ಮತ್ತು ಫೇಸ್‌ಬುಕ್ ಪ್ರಚಾರಕ್ಕಾಗಿ 73.57 ಲಕ್ಷ ರೂ. ವೆಚ್ಚ ಮಾಡಿದೆ.
ಎಎಪಿಪಕ್ಷವು ಕೇಜ್ರಿವಾಲ್ ಅವರಿಗೆ ರೂ.10 ಲಕ್ಷ, ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಆತಿಶಿ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ತಲಾ ರೂ.20 ಲಕ್ಷ, ಗೋಪಾಲ್ ರೈ ಗೆ ರೂ.24.75 ಲಕ್ಷ, ಸೌರಭ್ ಭಾರದ್ವಾಜ್ 22.8 ಲಕ್ಷ ರೂ. ಮತ್ತು ಸತ್ಯೇಂದರ್ ಜೈನ್ ಗೆ 23 ಲಕ್ಷ ರೂ ನೀಡಲಾಗಿತ್ತು.
ಕಾಂಗ್ರೆಸ್ ಪಕ್ಷವು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರಕ್ಕಾಗಿ ಸುಮಾರು ರೂ.5.94 ಕೋಟಿ ಖರ್ಚು ಮಾಡಿದ್ದರೆ, ಮಾಧ್ಯಮ ಜಾಹೀರಾತುಗಳಿಗೆ ರೂ.17.93 ಕೋಟಿ, ಪೋಸ್ಟರ್ ಮತ್ತು ಇತರ ಪ್ರಚಾರ ಸಾಮಗ್ರಿಗಳಿಗಾಗಿ ರೂ.18 ಕೋಟಿ, ಸಾರ್ವಜನಿಕ ಸಮಾರಂಭಗಳಿಗೆ ರೂ.4.85 ಕೋಟಿ ವೆಚ್ಚ ಮಾಡಿದೆ. ಸ್ಟಾರ್ ಪ್ರಚಾರಕರ ವೆಚ್ಚಕ್ಕಾಗಿ ರೂ.37,104 ವೆಚ್ಚ ಮಾಡಿದೆ.