Tuesday, May 20, 2025

ನ್ಯಾಯಾಂಗ ಸೇವೆಗೆ ಸೇರಲು ಕನಿಷ್ಠ 3 ವರ್ಷಗಳ ವಕೀಲಿ ವೃತ್ತಿ ಕಡ್ಡಾಯ: ಸುಪ್ರೀಂಕೋರ್ಟ್‌

Most read

ನವದೆಹಲಿ: ನ್ಯಾಯಾಂಗ ಸೇವೆಗೆ ಸೇರಲು ಅಭ್ಯರ್ಥಿಯು ಕನಿಷ್ಠ ಮೂರು ವರ್ಷಗಳ ವಕೀಲಿ ವೃತ್ತಿಯ ಅನುಭವ ಹೊಂದಿರಬೇಕು ಎಂದು ಇಂದು ಸುಪ್ರೀಂ ಕೋರ್ಟ್ ನೀಡಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಎ.ಜಿ ಮಸಿಹ್ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ತ್ರಿಸದಸ್ಯ ಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.

ಸಿವಿಲ್ ನ್ಯಾಯಾಧೀಶರ (ಜೂನಿಯರ್ ವಿಭಾಗ) ಪರೀಕ್ಷೆಗೆ ಹಾಜರಾಗುವ ಯಾವುದೇ ಅಭ್ಯರ್ಥಿಯು ಕನಿಷ್ಠ ಮೂರು ವರ್ಷಗಳ ವಕೀಲಿ ವೃತ್ತಿಯ ಅನುಭವ ಹೊಂದಿರಬೇಕು ಎಂಬುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯ ಸರ್ಕಾರಗಳು ನಿಯಮಗಳನ್ನು ತಿದ್ದುಪಡಿ ಮಾಡಬೇಕು. ಇದನ್ನು ಬಾರ್‌ ಕೌನ್ಸಿಲ್‌ ನಲ್ಲಿ 10 ವರ್ಷಗಳ ಅನುಭವ ಹೊಂದಿರುವ ವಕೀಲರು ಪ್ರಮಾಣೀಕರಿಸಬೇಕು ಮತ್ತು ಅನುಮೋದಿಸಬೇಕು. ನ್ಯಾಯಾಧೀಶರಿಗೆ ಕಾನೂನು ಗುಮಾಸ್ತರಾಗಿ ಅನುಭವ ಹೊಂದಿರುವುದನ್ನೂ ಪರಿಗಣಿಸಬಹುದಾಗಿದೆ. ನ್ಯಾಯಾಧೀಶರಾಗಿ ಕೆಲಸ ಆರಂಭಿಸುವ ಮುನ್ನ ಒಂದು ವರ್ಷದ ತರಬೇತಿಯನ್ನೂ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಮೂರು ವರ್ಷಗಳ ಅನುಭವ ಹೊಂದಿರಬೇಕು ಎಂಬ ಆದೇಶವು ಪ್ರಸ್ತುತ ನಡೆಯುತ್ತಿರುವ ನ್ಯಾಯಾಂಗ ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ. ಆದರೆ ಭವಿಷ್ಯದ ನೇಮಕಾತಿಗಳಿಗೆ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹೈಕೋರ್ಟ್‌ ಗಳು ಈಗಾಗಲೇ ಸಿವಿಲ್ ನ್ಯಾಯಾಧೀಶರ (ಕಿರಿಯ ವಿಭಾಗ) ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರೆ, ಆ ನೇಮಕಾತಿಗಳಿಗೆ ಶೈಕ್ಷಣಿಕ ಅರ್ಹತೆ ಅನ್ವಯಿಸುವುದಿಲ್ಲ. ಮುಂದಿನ ನೇಮಕಾತಿಗಳಿಗೆ ಅನ್ವಯಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಆಗಷ್ಟೇ ಕಾನೂನು ಪದವಿ ಪಡೆದವರನ್ನು ನ್ಯಾಯಾಧೀಶರನ್ನಾಗಿ ನೇಮಿಸುವುದರಿಂದ ಬಹಳಷ್ಟು ಸಮಸ್ಯೆಗಳಾಗುತ್ತಿವೆ ಎನ್ನುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ನ್ಯಾಯಾಂಗ ಅಧಿಕಾರಿಗಳಿಗೆ ವಹಿಸಲಾಗುವ ಪ್ರಮುಖ ಜವಬ್ದಾರಿಗಳನ್ನು ನಿರ್ವಹಿಸಲು ಅನನುಭವಿ ಕಾನೂನು ಪದವೀಧರರು ಸಮರ್ಪಕವಾಗಿ ಸಜ್ಜಾಗಿಲ್ಲದಿರುವುದು ಕಾರಣವಾಗಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

More articles

Latest article