ನವದೆಹಲಿ: ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ಮಾಧ್ಯಮಗೋಷ್ಠಿ ನಡೆಸಿದ್ದ ಕರ್ನಲ್ ಸೋಫಿಯಾ ಖುರೇಷಿ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮಧ್ಯ ಪ್ರದೇಶ ಬಿಜೆಪಿ ಮುಖಂಡ, ಸಚಿವ ವಿಜಯ್ ಶಾ ವಿರುದ್ಧ ಸುಪ್ರೀಂ ಕೋರ್ಟ್ ಮತ್ತೆ ಗರಂ ಆಗಿದೆ. ಶಾ ಸಲ್ಲಿಸಿದ್ದ ಕ್ಷಮೆಯಾಚನೆಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ವಿಜಯ್ ಶಾ ವಿರುದ್ಧ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಎಸ್ಐಟಿ ರಚಿಸಲು ಆದೇಶ ನೀಡಿದೆ. ಈ ವಿಶೇಷ ತನಿಖಾ ತಂಡದಲ್ಲಿ ಮಹಿಳಾ ಆಧಿಕಾರಿ ಸೇರಿ ಮೂವರು ಅಧಿಕಾರಿಗಳಿರಬೇಕು, ಡಿಜಿಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಬೇಕು, ನಾಳೆ ಬೆಳಗ್ಗೆಯೊಳಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ಆದೇಶ ನೀಡಿದೆ. ಹಾಗೆಯೇ ಈ ತಂಡದಲ್ಲಿರುವವರು ಎಸ್ ಪಿ ಅಥವಾ ಅದಕ್ಕಿಂತ ಉನ್ನತ ಶ್ರೇಣಿಯವರಾಗಿರಬೇಕು, ಅಧಿಕಾರಿಗಳು ಮಧ್ಯಪ್ರದೇಶ ಮೂಲದವರಾಗಿರಬಾರದು, ಆರೋಪಿ ವಿಜಯ್ ಶಾ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಬೇಕು. ತನಿಖೆ ಪೂರ್ಣವಾಗುವವರೆಗೂ ಆರೋಪಿಯನ್ನು ಬಂಧಿಸಬಾರದು. ಎಸ್ಐಟಿ ತನಿಖೆಯ ವರದಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ‘ಕಾನೂನು ಕ್ರಮಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು “ಮೊಸಳೆ ಕಣ್ಣೀರು” ಸುರಿಸುತ್ತಿದ್ದಾರೆ ಎಂದು ಟೀಕಿಸಿದೆ. ಶಾ ಅವರ ಅಸಭ್ಯ ಹೇಳಿಕೆಗಳನ್ನು ಖಂಡಿಸಿದ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ‘ಇದು ಪ್ರಾಮಾಣಿಕ ಕ್ಷಮೆಯಾಚನೆಯಲ್ಲ. ಇದು ನ್ಯಾಯಾಲಯದ ಆದೇಶವನ್ನು ಅನುಸರಿಸುತ್ತಿದೆ ಎಂಬ ಭಾವನೆಯನ್ನು ನೀಡಿದೆ ಅಷ್ಟೇ ಎಂದು ಹೇಳಿದ್ದಾರೆ.