ಕರ್ನೂಲ್ : ಆಂಧ್ರಪ್ರದೇಶದ ಕರ್ನೂಲ್ ಸಮೀಪ ರಸ್ತೆ ವಿಭಜಕಕ್ಕೆ ಕಾರು ಗುದ್ದಿ ಸ್ಥಳದಲ್ಲಿಯೇ ಬಿಜೆಪಿ ಮುಖಂಡ ಸೇರಿ ಮೂವರು ಸಾವನ್ನಪ್ಪಿದ್ದು, ಇನ್ನೂ ಮೂವರಿಗೆ ಗಾಯಗಳಾಗಿವೆ. ಇವರೆಲ್ಲರೂ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಕೆಂಕೆರೆ ಗ್ರಾಮದ ನವೀನ್, ಸಂತೋಷ್ ಹಾಗೂ ಲೋಕೇಶ್ ಎಂದು ತಿಳಿದು ಬಂದಿದೆ.
ನವೀನ್ ಚಿಕ್ಕನಾಯಕನಹಳ್ಳಿ ತಾಲೂಕಿನ ಬಿಜೆಪಿ ಮುಖಂಡರಾಗಿದ್ದು, ತಾಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದಾರೆ. ಸಂತೋಷ್ ಅವರೂ ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿದ್ದಾರೆ.
ಇವರೆಲ್ಲರೂ ಸಂತೋಷ್ ಹುಟ್ಟುಹಬ್ಬದ ಆಚರಣೆ ಪ್ರಯುಕ್ತ ಆಂಧ್ರಪ್ರದೇಶದ ಪ್ರವಾಸಕ್ಕೆ ತೆರಳಿದ್ದರು. ಮಂತ್ರಾಲಯದಲ್ಲಿ ದರ್ಶನ ಮುಗಿಸಿ ಶ್ರೀಶೈಲಕ್ಕೆ ಹೋಗುವ ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಕರ್ನೂಲ್ ಬಳಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.