ಪ್ರಧಾನಿ ಮೋದಿ ಟೀಕಿಸಿ ಅಂಕಣ; ʼಗುಜರಾತ್ ಸಮಾಚಾರ್’ ಪತ್ರಿಕೆ ಮಾಲೀಕರನ್ನು ಬಂಧಿಸಿದ ಜಾರಿ ನಿರ್ದೇಶನಾಲಯ

Most read

ಅಹಮದಾಬಾದ್: ಗುಜರಾತ್‌ ನ ಪ್ರಮುಖ ದಿನಪತ್ರಿಕೆಯಾದ  ‘ಗುಜರಾತ್ ಸಮಾಚಾರ್’ನ ಮಾಲೀಕರಲ್ಲಿ ಒಬ್ಬರಾದ ಬಾಹುಬಲಿ ಶಾ ಅವರನ್ನು ವಂಚನೆ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಇಂದು ಬಂಧಿಸಿದ್ದಾರೆ.

ಹಳೆಯ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಬಾಹುಬಲಿ ಶಾ ಅವರನ್ನು ಬಂಧಿಸಲಾಗಿದೆ. ಆದರೆ ಆರೋಪದ ವಿವರಗಳನ್ನು ಇದುವರೆಗೂ ಇ.ಡಿ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ನಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಶ್ರೇಯಂಶ್ ಶಾ ಆರೋಪಿಸಿದ್ದಾರೆ.

 ‘ಗುಜರಾತ್ ಸಮಾಚಾರ್’ ದಿನಪತ್ರಿಕೆ 1932ರಲ್ಲಿ ರಲ್ಲಿ ಆರಂಭಿಸಲಾಗಿದೆ. ಗುಜರಾತ್‌ ನಲ್ಲಿ ಅತಿ ಹೆಚ್ಚು ಪ್ರಸರಣವಾಗುತ್ತಿರುವ ಸ್ಥಳೀಯ ಭಾಷೆಯ ಪತ್ರಿಕೆಗಳಲ್ಲಿ ಇದೂ  ಒಂದಾಗಿದೆ. ಈ ಪತ್ರಿಕೆಯನ್ನು ಬಾಹುಬಲಿ ಶಾ ಮತ್ತು ಅವರ ಸಹೋದರ ಶ್ರೇಯಂಶ್ ಶಾ ನಡೆಸಿಕೊಂಡು ಬರುತ್ತಿದ್ದಾರೆ.

ಆದಾಯ ತೆರಿಗೆ ಇಲಾಖೆಯಿಂದ (ಐಟಿ) ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಜಾರಿ ನಿರ್ದೇಶನಾಲಯ ಬಾಹುಬಲಿ ಶಾ ಅವರನ್ನು ಬಂಧಿಸಿದೆ. ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ಪತ್ರಿಕೆಯಲ್ಲಿ ಪ್ರಕಟವಾದ ವಿಮರ್ಶಾತ್ಮಕ ಬರಹವೇ ಬಾಹುಬಲಿ ಶಾ ಬಂಧನಕ್ಕೆ ಕಾರಣ ಎಂದು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಶಕ್ತಿಸಿನ್ಹ್ ಗೋಹಿಲ್ ಟೀಕಿಸಿದ್ದಾರೆ.

ಗುಜರಾತ್ ಸಮಾಚಾರ್’ ಸುದ್ದಿ ವಾಹಿನಿಯಲ್ಲಿ ಚರ್ಚಾ ಕಾರ್ಯಕ್ರಮವನ್ನು ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ ಗುಜರಾತ್ ಅಧ್ಯಕ್ಷ ಇಸುದನ್ ಗಧ್ವಿ ಮಾತನಾಡಿ, ಐಟಿ ಮತ್ತು ಇ.ಡಿ ನಡೆಸಿದ ದಾಳಿಗಳನ್ನು ಖಂಡಿಸಿದ್ದಾರೆ. ಜತೆಗೆ, ಇದು ಪತ್ರಿಕೆಯನ್ನು ನಿರ್ಭೀತ ಪತ್ರಿಕೋದ್ಯಮವನ್ನು ಅನುಸರಿಸದಂತೆ ಬೆದರಿಸುವ ಪ್ರಯತ್ನವಾಗಿದೆ ಎಂದೂ ಅವರು ಆರೋಪಿಸಿದ್ದಾರೆ. ಅನೇಕ ಪ್ರತಿಪಕ್ಷಗಳೂ ಬಿಜೆಪಿ ಮತ್ತು ಇಡಿ ಕ್ರಮವನ್ನು ಕಟು ಶಬ್ದಗಳಲ್ಲಿ ಖಂಡಿಸಿವೆ.

More articles

Latest article