ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾಕರ ದಾಳಿಗೆ 26 ಪ್ರವಾಸಿಗರು ಅಸುನೀಗಿದ ನಂತರ ಇದೇ ಮೊದಲ ಬಾರಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಶ್ರೀನಗರ ಸೇನಾ ಕಚೇರಿಗೆ ಇಂದು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಗಡಿ ನಿಯಂತ್ರಣಾ ರೇಖೆ ಸೇರಿದಂತೆ ಒಟ್ಟಾರೆ ಭದ್ರತಾ ಪರಿಸ್ಥಿತಿ ಕುರಿತು ಸೇನಾಧಿಕಾರಿಗಳಿಂದ ಮಾಹಿತಿ ಪಡೆದರು.
ಭಾರತ ಯಾವತ್ತೂ ಯುದ್ಧವನ್ನು ಬೆಂಬಲಿಸಿಲ್ಲ. ಆದರೆ ನಮ್ಮ ಸಾರ್ವಭೌಮತ್ವದ ಮೇಲೆ ದಾಳಿಯಾದಾಗ ನಾವು ಪ್ರತಿಕ್ರಿಯೆ ನೀಡದೆ ಬಿಡುವುದಿಲ್ಲ. ಕಳೆದ 35-40 ವರ್ಷಗಳಿಂದ ಭಾರತ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಾ ಬಂದಿದೆ. ಪಹಲ್ಗಾಮ್ ದಾಳಿಯ ಬಳಿಕ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳು ಉಗ್ರರು ಮತ್ತು ಪಾಕಿಸ್ತಾನದ ಮೇಲೆ ತೋರಿಸಿರುವ ಆಕ್ರೋಶದಿಂದಾಗಿ ಶತ್ರುಗಳನ್ನು ಸೆದೆಬಡಿಯಲು ಸಾಧ್ಯವಾಗಿದೆ.ಭಾರತದ ಈ ತಿರುಗೇಟನ್ನು ಪಾಕಿಸ್ತಾನ ಮರೆಯುವುದಿಲ್ಲ ಎಂದು ಭಾವಿಸಿದ್ದೇವೆ ಎಂದರು.
ಆಪರೇಷನ್ ಸಿಂಧೂರ ಉಗ್ರರ ವಿರುದ್ಧದ ಅತಿದೊಡ್ಡ ಕಾರ್ಯಾಚರಣೆಯಾಗಿದೆ. ಭಯೋತ್ಪಾದನೆಗೆ ಕೊನೆ ಹಾಡಲು ಭಾರತ ಯಾವುದೇ ಹಂತಕ್ಕೆ ಬೇಕಾದರೂ ಹೋಗಲಿದೆ ಎನ್ನುವುದು ಸಾಬೀತಾಗಿದೆ. ನಮ್ಮ ಸೇನೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ. ಭಾರತದ ಸೇನೆಗೆ ಪಾಕಿಸ್ತಾನದಲ್ಲಿ ಅಡಗಿರುವ ಭಯೋತ್ಪಾದಕರು ಮತ್ತು ಅವರ ಮಾಸ್ಟರ್ ಮೈಂಡ್‌ಗಳೇ ಗುರಿಯಾಗಿದ್ದಾರೆ ಎಂದರು.
ಭಯೋತ್ಪಾದನೆಯನ್ನು ಬೆಂಬಲಿಸುವ ಪಾಕ್ ಕೈಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವಾಗಿ ಇರುತ್ತವೆಯೇ ಎಂದು ರಾಜ್ ನಾಥ್ ಸಿಂಗ್ ಪ್ರಶ್ನಿಸಿದರು. ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದೂ ಒತ್ತಾಯಿಸಿದರು.