ಬೆಂಗಳೂರು: ಹೈಟೆಕ್ ಸೈಬರ್ ಕ್ರೈಮ್ ವಂಚನೆ ಪ್ರಕರಣಗಳನ್ನು ನಡೆಸುತ್ತಾ ಹಣ ಸಂಪಾದನೆ ಮಾಡುತ್ತಿದ್ದ ಉತ್ತರ ಪ್ರದೇಶದ ಮೂಲದ 12 ಅಂತಾರಾಜ್ಯ ಆರೋಪಿಗಳನ್ನು ಬೆಂಗಳೂರಿನ ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬಲಿಯಾ ಮೂಲದ ಬಿಟೆಕ್ ಪದವೀಧರ ಹರ್ಷವರ್ಧನ್ ಓಝಾ (25) ಮತ್ತು ಮಹಾರಾಷ್ಟ್ರದ ನವಿ ಮುಂಬೈನ ಮೂಲದ ಸೋನು (27) ಪ್ರಮುಖ ಕಿಂಗ್ ಪಿನ್ ಗಳು. ಹೈಸ್ಕೂಲ್ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದ ಸೋನು ಕಾರ್ಮಿಕರನ್ನು ಪೂರೈಕೆ ಮಾಡುವ ಗುತ್ತಿಗೆ ಕೆಲಸ ಮಾಡುತ್ತಿದ್ದ. ಆಕಾಶ್ ಕುಮಾರ್ ಯಾದವ್, ಗೋರಖ್ ನಾಥ್ ಯಾದವ್, ಸಂಜಿತ್ ಕುಮಾರ್ ಆಕಾಶ್ ಕುಮಾರ್, ಅಮಿತ್ ಯಾದವ್, ಗೌರವ್ ಪ್ರತಾಪ್ ಸಿಂಗ್, ಬ್ರಿಜೆಶ್ ಸಿಂಗ್, ರಾಕ್ ಮಿಶ್ರಾ, ತುಷಾರ್ ಮಿಶ್ರಾ ಮತ್ತು ಗೌತಮ್ ಶೈಲೇಶ್ ಬಂಧಿತ ಇತರ ಆರೋಪಿಗಳು. ಸಂಜಿತ್ ಬಿಹಾರ ಮೂಲದವನಾದರೆ ಉಳಿದವರೆಲ್ಲರೂ ಉತ್ತರಪ್ರದೇಶದ ಅಪರಾಧಿಗಳು.
ಆರೋಪಿಗಳಿಂದ 400 ಮೊಬೈಲ್ ಸಿಮ್ ಗಳು, 140 ಎಟಿಎಂ ಕಾರ್ಡ್, 17 ಚೆಕ್ ಪುಸ್ತಕ, 27 ಮೊಬೈಲ್ ಫೋನ್, 22 ವಿವಿಧ ಬ್ಯಾಂಕ್ ಪಾಸ್‌ಬುಕ್, ಆದಾಯ ಮತ್ತು ಖರ್ಚು ವೆಚ್ಚಗಳನ್ನು ನಮೂದಿಸಿರುವ ಸ್ಪೈರಲ್ ಬೈಂಡಿಂಗ್ ಪುಸ್ತಕ ಮತ್ತು 15 ಸಾವಿರ ರೂ.ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎಲ್.ಆರ್. ನಗರದ ನಿವಾಸಿ 42 ವರ್ಷದ ಮಹಿಳೆಯೊಬ್ಬರ ಮೊಬೈಲ್ ಗೆ ಏಪ್ರಿಲ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ವರ್ಕ್ ಫ್ರಮ್ ಹೋಂ ಕೆಲಸ ಇದೆ ಎಂದು ಸಂದೇಶ ಕಳುಹಿಸಿ ಈ ಕೆಲಸಕ್ಕೆ ಕಮಿಷನ್ ನೀಡುವುದಾಗಿ ಆಮಿಷವೊಡ್ಡಿರುತ್ತಾನೆ. ನಂತರ ಸಣ್ಣ ಪ್ರಮಾಣದ ಕೆಲಸ ಮಾಡಿದಾಗ ಪ್ರಾಜೆಕ್ಟ್ ವರ್ಕ್ ಕ್ರೆಡಿಟ್ ಸ್ಕೋರ್ ಬ್ಯಾಲೆನ್ಸ್ ಶೀಟ್ ನೆಗೆಟಿವ್ ಇದೆ ಎಂದು ಹೇಳುತ್ತಾನೆ. ಅದಕ್ಕಾಗಿ ಒಂದಿಷ್ಟು ಹಣವನ್ನು ಕೆಲವು ಖಾತೆಗಳಿಗೆ ವರ್ಗಾಯಿಸಬೇಕು ಎಂದು ನಂಬಿಸಿದ್ದಾನೆ. ಅದರಂತೆ ಮಹಿಳೆಯು ಅವರು ಹೇಳಿದ ಖಾತೆಗೆ ಹಣ ಹಾಕಿ 5 ಲಕ್ಷ ರೂ. ಹಾಕಿದ್ದಾರೆ. ಅಪರಿಚಿತ ವ್ಯಕ್ತಿ ಇನ್ನೂ ರೂ. 3.24 ಲಕ್ಷ ರೂ. ಹಣ ಜಮಾ ಮಾಡಲು ತಿಳಿಸಿದಾಗ ಅನುಮಾನಗೊಂಡು ಮಹಿಳೆ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹಲವು ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಹಣ ವರ್ಗಾವಣೆಯಾಗಿದ್ದ ಫೆಡರಲ್ ಬ್ಯಾಂಕ್, ಉತ್ತರಪ್ರದೇಶ ಶಾಖೆಯ ಕೆವೈಸಿ ವಿವರಗಳನ್ನು ಪಡೆದು ಖಾತೆದಾರರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಈ ಖಾತೆಯನ್ನು ಸೋನು ಆದೇಶದಂತೆ ಕೆಲಸಗಾರರ ಹೆಸರಿನಲ್ಲಿ ತೆಗೆದಿರುತ್ತಾರೆ. ಮುಂಬೈನಲ್ಲಿ ಸೋನುವನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗುತ್ತದೆ. ಪ್ರತಿ ಖಾತೆಗೆ ಸೋನುಗೆ 1,500 ರೂ ಕಮೀಷನ್ ನೀಡಲಾಗುತ್ತಿರುತ್ತದೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾತೆ ಆರಂಭಿಸಿದರೆ 18,000 ರೂ.ನಿಂದ ರೂ. 20,000ರೂ.ವರೆಗೆ ಕಮೀಷನ್ ನೀಡಲಾಗುತ್ತಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಇದೇ ರೀತಿ 22 ಖಾತೆಗಳನ್ನು ಆರಂಭಿಸಿ ಕಮಿಷನ್ ಹಣವನ್ನು ಪಡೆದಿರುವುದಾಗಿ ಸೋನು ತಿಳಿಸಿದ್ದಾನೆ.