ಬೆಂಗಳೂರು: ಕನ್ನಡ, ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ನಡೆಯಿತು ಎಂದು ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಖ್ಯಾತ ಗಾಯಕ ಸೋನು ನಿಗಮ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರ ರಜಾ ಪೀಠದ ಮುಂದೆ ಅರ್ಜಿ ಸಲ್ಲಿಸಲಾಗಿದ್ದು, ವಿಚಾರಣೆಯನ್ನು ಮುಂದೂಡಲಾಗಿದೆ.
ಏನಿದು ಪ್ರಕರಣ?
ಏಪ್ರಿಲ್ 25 ರಂದು ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಸೋನು ನಿಗಮ್ ಹಾಡುತ್ತಿದ್ದಾಗ ಅಭಿಮಾನಿಯೊಬ್ಬರು ಕನ್ನಡ ಹಾಡನ್ನು ಹಾಡುವಂತೆ ಕೇಳಿಕೊಂಡರು. ಆದರೆ ಸೋನು ನಿಗಮ್ ಖೊರಿಕೆಯನ್ನು ನಿರಾಕರಿಸಿ ಕನ್ನಡ, ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ನಡೆಯಿತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಘಟನೆಯಿಂದ ರೊಚ್ಚಿಗೆದ್ದ ಕನ್ನಡಿಗರು ಸೋನು ನಿಗಂ ವಿರುದಧ ಆಕ್ರೋಶಗೊಂಡು ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಪಡಿಸಿದ್ದರು.
ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಜಿಲ್ಲಾ ಘಟಕದ ಮುಖ್ಯಸ್ಥ ಧರ್ಮರಾಜ್ ಎ. ಅವರು ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸೋನು ನಿಗಮ್ ಅವರು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹ ಮತ್ತು ಭಾಷಾ ಗುಂಪುಗಳ ನಡುವೆ ದ್ವೇಷ ಹುಟ್ಟಿಸುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದರು. ಕರ್ನಾಟಕದಲ್ಲಿ ಭಾಷಾ ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸಿವೆ. ಇದರಿಂದ ಹಿಂಸಾಚಾರಕ್ಕೂ ಕಾರಣವಾಗಬಹುದು ಎಂದು ದೂರಿನಲ್ಲಿ ಹೇಳಿದ್ದರು.
ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 351(2), 352(I), ಮತ್ತು 353 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಹಲವಾರು ಎರಡು ಮೂರು ಬಾರಿ ಸ್ಪಷ್ಟನೆ ನೀಡಿದ ನಂತರ ಸೋನು ನಿಗಂ ಅಂತಿಮವಾಗಿ ಕ್ನನಡಿಗರ ಕ್ಷಮೆ ಕೋರಿದ್ದರು.