ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಮೇಲೆ ದಾಳಿ ನಡೆಸಿದ ಮೂವರು ಭಯೋತ್ಪಾದಕರ ಭಾವಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಈ ಉಗ್ರರ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದಕರು ಏಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ 26 ಪ್ರವಾಸಿಗರನ್ನು ಭೀಕರವಾಗಿ ಹತ್ಯೆ ಮಾಡಿದ್ದರು. ಭಯೋತ್ಪದಕರ ಭಾವಚಿತ್ರಗಳ ಪೋಸ್ಟರ್ ಗಳನ್ನು ಅಲ್ಲಲ್ಲಿ ಅಂಟಿಸಿರುವ ಪೊಲೀಸರು ‘ಭಯೋತ್ಪಾದಕ ಮುಕ್ತ ಜಮ್ಮುಕಾಶ್ಮೀರ’ ಎಂದು ಬರೆದಿದ್ದಾರೆ. ಶಂಕಿತ ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದವರ ಮಾಹಿತಿಯನ್ನು ಗೋಪ್ಯವಾಗಿ ಇಡಲಾಗುವುದು ಮತ್ತು ಬಹುಮಾನ ನೀಡುವುದಾಗಿ ಪೊಲೀಸರು ಹೇಳಿದ್ದಾರೆ.
ಪಹಲ್ಲಾಮ್ ನಿಂದ ಕೇವಲ ಆರು ಕಿ.ಮೀ ದೂರದಲ್ಲಿರುವ ಬೈಸರನ್ ಹುಲ್ಲುಗಾವಲಿನಲ್ಲಿ ವಿಹರಿಸುತ್ತಿದ್ದ ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದರು. 26 ಪ್ರವಾಸಿಗರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಕೃತ್ಯಕ್ಕೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಮೇಲೆ ದಾಳಿ ಮಾಡಿ 9 ಉಗ್ರರ ನೆಲೆಗಳನ್ನು ನಾಶಗೊಳಿಸಿತ್ತು. ನಂತರ ಕೆಲವು ದಿನಗಳ ಕಾಲ ಎರಡೂ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಧ್ಯಕ್ಕೆ ಕದನವಿರಾಮ ಜಾರಿಯಲ್ಲಿದ್ದು ಪರಿಸ್ಥಿತಿ ಹತೋಟಿಯಲ್ಲಿದೆ.