ನವದೆಹಲಿ: ಭಾರತ ನಡೆಸಿದ ಆಪರೇಷನ್ ಸಿಂಧೂರ ದಾಳಿಯಲ್ಲಿ ಮೃತಪಟ್ಟ ಭಯೋತ್ಪಾದಕರ ಹೆಸರು ಬಹಿರಂಗವಾಗಿದೆ. ಇವರ ಅಂತ್ಯಕ್ರಿಯೆಯಲ್ಲಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ಜೈಷ್–ಎ–ಮೊಹಮ್ಮದ್ ಸಂಘಟನೆಯ ಸ್ಥಾಪಕ ಮೌಲಾನ ಮಸೂದ್ ಅಜರ್ನ ಹಿರಿಯ ಸಹೋದರ ಹಫೀಜ್ ಮೊಹಮ್ಮದ್ ಜಮೀಲ್ ಕೂಡ ಸಿಂಧೂರ ದಾಳಿಯಲ್ಲಿ ಹತನಾಗಿದ್ದಾನೆ. ಇವನು ಬವಾಲ್ಪುರದಲ್ಲಿರುವ ಸುಭಾನ್ ಅಲ್ಲಾ ಮರ್ಕಾಜ್ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಜತೆಗೆ ಸಂಘಟನೆಗೆ ಹಣ ಸಂಗ್ರಹ ಮಾಡುವುದು ಮತ್ತು ಭಯೋತ್ಪಾದನೆ ತರಬೇತಿಗೆ ಯುವಕರನ್ನು ಸೇರಿಸುತ್ತಿದ್ದ ಎಂದು ತಿಳಿದು ಬಂದಿದೆ. ಮೌಲಾನ ಮಸೂದ್ ಅಜರ್ನ ಅಳಿಯ ಕೂಡ ಸಿಂಧೂರ ದಾಳಿಯಲ್ಲಿ ಅಸು ನೀಗಿದ್ದಾನೆ ಎಂದು ವರದಿಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ದಾಳಿಗಳನ್ನು ಮಾಡಿದ್ದ ಲಷ್ಕರ್-ಎ-ತಯಬಾದ ಖಾಲಿದ್ ಅಲಿಯಾಸ್ ಅಬು ಹಾಗೂ ಜೈಷ್–ಎ–ಮೊಹಮ್ಮದ್ ಸಂಘಟನೆಗೆ ಸೇರಿದ್ದ ಮೊಹಮ್ಮದ್ ಹಸನ್ ಖಾನ್ ಆಪರೇಷನ್ ಸಿಂಧೂರಕ್ಕೆ ಬಲಿಯಾಗಿದ್ದಾರೆ.
ಮುಡಾಸ್ಸರ್ ಅಂತ್ಯಕ್ರಿಯೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಮರಿಯಂ ನವಾಜ್, ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಂ ಮುನೀರ್ ಪರವಾಗಿ ಪಂಜಾಬ್ ಪ್ರಾಂತ್ಯದ ಪೊಲೀಸ್ ಮತ್ತು ಸೇನಾ ಅಧಿಕಾರಿಗಳು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ಈ ವೇಳೆ ಅಂತರರಾಷ್ಟ್ರೀಯ ಉಗ್ರ ಹಫೀಜ್ ಅಬ್ದುಲ್ ರೌಫ್ ಕೂಡ ಭಾಗಿಯಾಗಿದ್ದ. ಮುರ್ಡಿಕೆಯಲ್ಲಿನ ಸರ್ಕಾರಿ ಶಾಲೆ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು ಎಂದು ವರದಿಯಾಗಿದೆ.