ಅಂಬೇಡ್ಕರ್ ನಾಮಫಲಕ ವಿಚಾರವಾಗಿ ಎರಡು ಕೋಮುಗಳ ನಡುವೆ ಗಲಾಟೆ ನಡೆದಿದ್ದು, ಮನೆಗಳಿಗೆ ಕಲ್ಲು ತೂರಾಟ ನಡೆಸಿ, ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಜಖಂ ಮಾಡಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ.
ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ್ದ ಪೊಲೀಸರ ಮೇಲೂ ಉದ್ರಿಕ್ತರ ಗುಂಪು ಕಲ್ಲುತೂರಿದ್ದರಿಂದ ನಂಜನಗೂಡು ಗ್ರಾಮಾಂತರ ಠಾಣೆ ಪಿಎಸ್ಐ ಗೋಪಾಲಕೃಷ್ಣ ಸೇರಿದಂತೆ ಮೂವರು ಪೊಲೀಸರಿಗೆ ಗಾಯಗಳಾಗಿದ್ದು, ಗಾಯಗೊಂಡ ಎಲ್ಲರನ್ನು ತುರ್ತು ವಾಹನದ ಮೂಲಕ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಲುತೂರಾಟದಲ್ಲಿ ನಾಲ್ವರು ಪೊಲೀಸರು ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಗಾಯಗೊಂಡಿದ್ದು, 30ಕ್ಕೂ ಹೆಚ್ಚು ವಾಹನಗಳು ಜಖಂಗೊಳಿಸಲಾಗಿದೆ.
ಹಲ್ಲರೆ ಗ್ರಾಮದಿಂದ ಹುರ ಕಡೆಗೆ ತೆರಳುವ ರಸ್ತೆಗೆ ಹೆಸರಿಡುವ ಸಂಬಂಧ ಒಂದು ಗುಂಪಿನ ಕೆಲ ಯುವಕರು ಸ್ಥಳೀಯ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಪಿಡಿಒ ಅವರಿಂದ ಅನುಮತಿ ಪಡೆದುಕೊಂಡಿದ್ದರು. ಆದರೆ ನಾಮಫಲಕ ಅಳವಡಿಕೆಗೆ ಸಂಬಂಧಿಸಿದಂತೆ ಕಳೆದ ಐದು ದಿನಗಳ ಹಿಂದೆ ಮತ್ತೊಂದು ಗುಂಪಿನ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ನಾಮಫಲಕ ಅಳವಡಿಕೆ ಮುಂದೂಡಲಾಗಿತ್ತು. ಸೋಮವಾರ ಸಂಜೆ ಗ್ರಾಮದಲ್ಲಿಈ ಸಂಬಂಧ ಮತ್ತೆ ಎರಡು ಗುಂಪಿನ ಜನರ ನಡುವೆ ವಾಗ್ವಾದ ಉಂಟಾಗಿದೆ.