ಮಂಗಳೂರು: ಕೊಲೆಗಳು ಆಗುತ್ತಲೇ ಇರುತ್ತವೆ. ಕೊಲೆಯಾದವರ ಮನೆಗಳಿಗೆಲ್ಲಾ ಹೋಗಲೇಬೇಕು ಎಂದೇನೂ ಇಲ್ಲ. ಕೊಲೆ ಏಕೆ ನಡೆಯಿತು ಎನ್ನುವುದಷ್ಟೇ ಮುಖ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಬಂಧಿಸುವ ಮೂಲಕ ತನ್ನ ಜವಾಬ್ದಾರಿ ನಿರ್ವಹಿಸಿದೆ. ಯಾವೊಬ್ಬ ಅಪರಾಧಿಗೂ ರಕ್ಷಣೆ ಕೊಡುವ ಪ್ರಶ್ನೆಯೇ ಇಲ್ಲ ಎಂದರು.
ಕೊಲೆ ಯಾರು ಮಾಡಿದ್ದಾರೆ ಅವರನ್ನು ಬಂಧಿಸಿದ್ದೇವೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿದೆ. ಪ್ರಕರಣದ ತನಿಖೆಯನ್ನು ಎನ್ ಐಎಗೆ ವಹಿಸಬೇಕು ಎಂಬ ಬಿಜೆಪಿಯವರ ಕಪೋಲಕಲ್ಪಿತ ಆರೋಪಗಳಿಗೆ ಉತ್ತರ ಕೊಡಬೇಕಿಲ್ಲ. ಊಹಾಪೋಹದ ಹೇಳಿಕೆ ನೀಡುವುದನ್ನು ಬಿಟ್ಟು ಬಿಜೆಪಿಯವರು ತಮ್ಮ ಬಳಿ ಸ್ಪಷ್ಟ ಮಾಹಿತಿ ಇದ್ದರೆ ನೀಡಲಿ ಎಂದು ತಿರುಗೇಟು ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಹತ್ಯೆಗಳು ನಡೆದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುತ್ತಿದ್ದಾರೆ. ನಕಲಿ ಹೆಸರಲ್ಲಿ ಖಾತೆ ಬಳಸುತ್ತಿದ್ದರೆ ತಕ್ಷಣಕ್ಕೆ ಅವರು ಯಾರು ಎನ್ನುವುದು ತಿಳಿಯುವುದಿಲ್ಲ. ಸಂಬಂಧಪಟ್ಟ ಸಂಸ್ಥೆಗಳಿಗೆ ಪತ್ರ ಬರೆದು ಮಾಹಿತಿ ತಿಳಿದುಕೊಂಡು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಕೋಮು ಪ್ರಚೋದನಾಕಾರಿ ಹೇಳಿಕೆ ನೀಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಪ್ರಕರಣ ದಾಖಲಾಗಿದೆ. ಅವರು ಮಾಡಿರುವ ಟೀಕೆಗಳು ಕೀಳು ಅಭಿರುಚಿಯಿಂದ ಕೂಡಿವೆ. ಅವರ ಮಾತು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಆದ್ದರಿಂದ ಅವರ ಕೀಳು ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯ ಇಲ್ಲ ಎಂದು ಟೀಕಿಸಿದರು.