ನವದೆಹಲಿ: ಪಾಕಿಸ್ತಾನದ ಮೇಲಿನ ವಾಯುದಾಳಿಯನ್ನು ತೀವ್ರಗೊಳಿಸಿರುವ ಭಾರತ ಸೇನಾಪಡೆಗಳು ಶುಕ್ರವಾರ ತಡರಾತ್ರಿ ಪಾಕ್ ನ ಪ್ರಮುಖ ವಾಯು ನೆಲೆಗಳಾದ ನೂರ್ ಖಾನ್, ಮುರಿದ್ ಮತ್ತು ರಫಿಕಿ ವಾಯುನೆಲೆಗಳನ್ನು ಧ್ವಂಸಗೊಳಿಸಿದೆ. ಪಾಕಿಸ್ತಾನ ಗಡಿನಿಯಂತ್ರಣ ರೇಖೆಯಲ್ಲಿ ಭಾರತದ 26 ಸ್ಥಳಗಳ ಮೇಲೆ ದಾಳಿನಡೆಸಿದ ಬೆನ್ನಲ್ಲೇ, ಪಾಕಿಸ್ತಾನಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದ್ದು, ಪಾಕಿಸ್ತಾನದ ಮೂರು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿಗಳನ್ನು ನಡೆಸಿದೆ.
ನೂರ್ ಖಾನ್ ಮತ್ತು ಮುರಿದ್ ಮತ್ತು ರಫೀಕಿ ವಾಯುನೆಲೆಗಳ ಮೇಲೆ ದಾಳಿಯನ್ನು ಮಾಡಿದ್ದು ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಹತ್ವ ಪಡಡೆದುಕೊಂಡಿದೆ
ರಾವಲ್ಪಿಂಡಿಯ ಚಕ್ಲಾಲಾದಲ್ಲಿರುವ ನೂರ್ ಖಾನ್ ವಾಯುನೆಲೆ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ನಿಂದ ಕೇವಲ 10 ಕಿ.ಮೀ ದೂರದಲ್ಲಿದೆ. ಇದು ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿಯ ಪಕ್ಕದಲ್ಲಿಯೇ ಇರುವ ಕಾರಣ ರಾಜತಾಂತ್ರಿಕವಾಗಿ ಮಹತ್ವ ಪಡೆದುಕೊಂಡಿದೆ. ಇಲ್ಲಿ ಪಾಕಿಸ್ತಾನಿ ವಾಯುಪಡೆಯ ಐದರಿಂದ ಆರು ಸ್ಕ್ವಾಡ್ರನ್ ಗಳು ವಿಮಾನ ನಿಲ್ದಾಣದಲ್ಲಿ ನೆಲೆಗೊಂಡಿವೆ ಮತ್ತು ಪ್ರಮುಖ ಯುದ್ಧ ವಿಮಾನಗಳಿವೆ. ಈ ನೆಲೆಯಲ್ಲಿ ರಾಜಕೀಯ ಮತ್ತು ಮಿಲಿಟರಿ ನಾಯಕರು ಬಳಸುವ ವಿಐಪಿ ಸಾರಿಗೆ ವಿಮಾನಗಳಿವೆ.
ಮುರಿದ್ ವಾಯುನೆಲೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಚಕ್ವಾಲ್ ಜಿಲ್ಲೆಯಲ್ಲಿದ್ದು, ಪಾಕ್ ವಾಯುಪಡೆ ನಿರ್ವಹಿಸುತ್ತಿದೆ. ಈ ನೆಲೆಯು 9,000 ಅಡಿ ಎತ್ತರದಲ್ಲಿರುವ ರನ್ವೇಯನ್ನು ಹೊಂದಿದೆ. ಈ ವಾಯುನೆಲೆಯು ಪಾಕಿಸ್ತಾನದ ಮಾನವರಹಿತ ವೈಮಾನಿಕ ಕಾರ್ಯಾಚರಣೆಗಳಲ್ಲಿ ಅತ್ಯಗತ್ಯ ಕೇಂದ್ರವಾಗಿದೆ. ಇದು ಹಲವಾರು ಯುಎವಿ (ಮಾನವರಹಿತ ವೈಮಾನಿಕ ವಾಹನ) ಮತ್ತು ಯುಸಿಎವಿ (ಮಾನವರಹಿತ ಯುದ್ಧ ವೈಮಾನಿಕ ವಾಹನ) ಸ್ಕ್ವಾಡ್ರನ್ ಗಳನ್ನು ಹೊಂದಿದೆ.