ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ವಿರುದ್ಧ ನಡೆಸಿದ ಆಪರೇಷನ್ ಸಿಂದೂರ ನಂತರ ಭಾರತ-ಪಾಕಿಸ್ತಾನ ಮಧ್ಯೆ ಯುದ್ಧ ನಡೆಯುತ್ತಿದೆ. ಈ ಬಗ್ಗೆ ಇಂದು ಮತ್ತೆ ಮಹಿಳಾ ಸೇನಾಧಿಕಾರಿಗಳು ವಿದೇಶಾಂಗ ಇಲಾಖೆ ಕಾರ್ಯದರ್ಶಿಗಳಾದ ವಿಕ್ರಮ್ ಮಿಸ್ರಿ ಅವರ ಜೊತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನಿ ಸೇನೆಯು ದೇಶದ ಪಶ್ಚಿಮ ಗಡಿಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಭಾರತದ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಲು ಡ್ರೋಣ್ ಗಳು, ದೀರ್ಘ ಶ್ರೇಣಿಯ ಶಸ್ತ್ರಾಸ್ತ್ರಗಳು, ಯುದ್ಧಸಾಮಗ್ರಿಗಳು ಮತ್ತು ಫೈಟರ್ ಜೆಟ್ ಗಳನ್ನು ಬಳಸಿದೆ. ಆದರೆ ಭಾರತದ ಸೇನೆ ಪಾಕ್ ಪ್ರಯತ್ನಗಳನ್ನು ವಿಫಲಗೊಳಿಸಿದೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿಗಳಾದ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.
ಕೆಲವೇ ಕ್ಷಣಗಳ ಹಿಂದೆ ಅವರು ಸುದ್ದಿಗೋಷ್ಠಿ ನಡೆಸಿ ಬಾರತ ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದ ಮಾಹಿತಿ ನೀಡಿದರು.
ದೇಶದ 36ಕ್ಕೂ ಹೆಚ್ಚು ಸ್ಥಳಗಳಲ್ಲಿ ವಾಯುದಳದ ಮೂಲಕ ಪಾಕ್ ನುಸುಳಲು ಪ್ರಯತ್ನಿಸಿತು. ಉಧಮ್‌ಪುರ, ಭುಜ್, ಪಠಾಣ್‌ಕೋಟ್, ಬಟಿಂಡಾದಲ್ಲಿನ ವಾಯುಪಡೆಯ ನೆಲೆಗಳಲ್ಲಿ ನಮ್ಮ ಸೇನಾ ಉಪಕರಣಗಳನ್ನು ಹಾನಿಗೊಳಿಸಿ ಸಿಬ್ಬಂದಿಗೆ ತೊಂದರೆ ನೀಡುತ್ತಿದ್ದಾರೆ. ಪಂಜಾಬ್‌ನ ವಾಯುನೆಲೆಯನ್ನು ಗುರಿಯಾಗಿಸಲು ಬೆಳಗಿನ ಜಾವ 1.40 ಕ್ಕೆ ಹೈಸ್ಪೀಡ್ ಕ್ಷಿಪಣಿಗಳನ್ನು ಬಳಸಿದೆ.ಜಮ್ಮು-ಕಾಶ್ಮೀರದ ಆರೋಗ್ಯ ಸೌಲಭ್ಯಗಳು ಮತ್ತು ಶಾಲೆಗಳ ಮೇಲೂ ದಾಳಿ ಮಾಡಿದ್ದಾರೆ ಎಂದು ಕರ್ನಲ್ ಸೋಫಿಯಾ ಖುರೇಷಿ ತಿಳಿಸಿದ್ದಾರೆ.
ಭಾರತದ ಏರ್ ಬೇಸ್ ಗಳು ಸುರಕ್ಷಿತವಾಗಿವೆ. ಪಾಕಿಸ್ತಾನ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಪಾಕಿಸ್ತಾನ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಬಳಸುತ್ತಿದೆ. ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆ ಜಮಾವಣೆ ಮಾಡುತ್ತಿದೆ. ಎಂತಹುದ್ದೇ ಪರಿಸ್ಥಿತಿ ಎದುರಾದರೂ ಎದುರಿಸಲು ಭಾರತ ಸನ್ನದ್ದವಾಗಿದೆ ಎಂದು ಸುಳ್ಳು ಸುದ್ದಿ ಹರಡಿದ್ದ ಪಾಕ್ ಗೆ ದಾಖಲೆ ಸಹಿತ ವ್ಯೋಮಿಕಾ ಸಿಂಗ್ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನ ಸುಮಾರು 300 ರಿಂದ 400 ಡ್ರೋಣ್ ಗಳನ್ನು ಬಳಸಿದೆ. ಡ್ರೋಣ್ ಗಳ ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತನಿಖೆ ನಡೆಸಲಾಗುತ್ತಿದೆ. ಆರಂಭಿಕ ವರದಿಗಳು ಅವು ಟರ್ಕಿಶ್ ಆಸಿಸ್ ಗಾರ್ಡ್ ಸೊಂಗಾರ್ ಡ್ರೋಣ್ ಗಳು ಎಂದು ತಿಳಿದು ಬಂದಿದೆ ಎಂದರು.
ಈ ಮಧ್ಯೆ, ಅಂತಾರಾಷ್ಟ್ರೀಯ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತಿಕ್ರಿಯೆಯಾಗಿ, ಜಮ್ಮುವಿನ ಅಖ್ನೂರ್ ಎದುರಿನ ಭಯೋತ್ಪಾದಕ ಲಾಂಚ್ ಪ್ಯಾಡ್ ಅನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ಬಿ ಎಸ್ ಎಫ್ ಹೇಳಿದೆ. ಪಾಕಿಸ್ತಾನದ ಸಿಯಾಲ್‌ಕೋಟ್ ಜಿಲ್ಲೆಯ ಲೂನಿಯಲ್ಲಿ ಈ ನೆಲೆ ಇತ್ತು ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.