ಪಾಕಿಸ್ತಾನದ ಮಿಲಿಟರಿ ಪೋಸ್ಟ್‌, ಡ್ರೋಣ್ ಲಾಂಚ್‌ ಪ್ಯಾಡ್‌ ಹೊಡೆದುರುಳಿಸಿದ ಭಾರತ ಸೇನೆ

Most read

ನವದೆಹಲಿ: ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಪ್ರದೇಶಗಳ ಭಯೋತ್ಪಾದಕರ ಅಟ್ಟಹಾಸವನ್ನುಅಂತ್ಯಗೊಳಿಸಲು ಭಾರತ ಸೇನೆಯು ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯನ್ನು ಬಿರುಸುಗೊಳಿಸಿದೆ.ಈ ಆಪರೇಷನ್‌ ಆರಂಭಿಸಿದ ನಂತರ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದೆ. ಇದರ ಬೆನ್ನಲ್ಲೇ ಪಾಕ್‌ ಸೇನೆ ನಡೆಸಿದ ಡ್ರೋಣ್ ಹಾಗೂ ಕ್ಷಿಪಣಿ ದಾಳಿಗಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಾ ಬಂದಿದೆ.

ಡ್ರೋಣ್ ದಾಳಿಗಳನ್ನು ನಡೆಸಲು ಪಾಕಿಸ್ತಾನ ಬಳಸುತ್ತಿದ್ದ ಮಿಲಿಟರಿ ಪೋಸ್ಟ್‌ ಗಳು ಮತ್ತು ಲಾಂಚ್‌ ಪ್ಯಾಡ್‌ ಗಳನ್ನು ಸೇನಾಪಡೆಗಳು ನಾಶಪಡಿಸಿವೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಪಾಕಿಸ್ತಾನವು ಟ್ಯೂಬ್ ಲಾಂಚ್‌ ಪ್ಯಾಡ್‌ ಅನ್ನು ಡ್ರೋಣ್ ಗಳನ್ನು ಉಡಾಯಿಸಲು ಬಳಸುತ್ತಿತ್ತು. ಜಮ್ಮು ಬಳಿ ನೆಲೆಗೊಂಡಿರುವ ಭಾರತೀಯ ಸೇನಾ ಪಡೆಗಳು ಈ ಕಾರ್ಯಾಚರಣೆಯನ್ನು ನಡೆಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‌ಪಾಕಿಸ್ತಾನ ಸೇನೆಯು ಶುಕ್ರವಾರ ತಡರಾತ್ರಿಯೂ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆ, ಪಂಜಾಬ್‌ನ ಫಿರೋಜ್‌ಪುರ, ರಾಜಸ್ಥಾನದ ಪೋಖ್ರಾನ್ ಮತ್ತಿತರ ಪ್ರದೇಶಗಳಲ್ಲಿ ಡ್ರೋಣ್ ಹಾಗೂ ಕ್ಷಿಪಣಿ ದಾಳಿ ನಡೆಸಿದೆ. ಇವುಗಳನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಭಾಗಗಳಲ್ಲಿ ಬ್ಲ್ಯಾಕ್ ಔಟ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂದು ಬೆಳಗಿನ ಜಾವ ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯಲ್ಲಿ ಸ್ಫೋಟದಂತಹ ಶಬ್ದಗಳು ಕೇಳಿಬಂದಿವೆ ಎಂದು ವರದಿಗಳು ತಿಳಿಸಿವೆ. ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಸ್ಫೋಟದ ಶಬ್ದಗಳು ಕೇಳಿಬಂದವು. ಶುಕ್ರವಾರ ರಾತ್ರಿ ಪಠಾಣ್‌ ಕೋಟ್‌ ನಲ್ಲಿ ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಮನೆಯೊಳಗೆ ಇರುವಂತೆ ಜನರಿಗೆ ಸೂಚಿಸಿದ್ದರು.

ಶುಕ್ರವಾರ ರಾತ್ರಿ ಪಂಜಾಬ್‌ನ ಫಿರೋಜ್‌ಪುರ, ಪಠಾಣ್‌ಕೋಟ್, ಫಜಿಲ್ಕಾ ಮತ್ತು ಅಮೃತಸರ ಜಿಲ್ಲೆಗಳಲ್ಲಿ ಪಾಕಿಸ್ತಾನಿ ಡ್ರೋಣ್‌ ಗಳ ದಾಳಿಗಳನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

More articles

Latest article