ಪೇಜಾವರ ಶ್ರೀಗಳು ಮತ್ತೊಮ್ಮೆ ಭಗವದ್ಗೀತೆ ಓದಿಕೊಳ್ಳಲಿ: ಕೈ ಮುಖಂಡ ಮಂಜುನಾಥ ಭಂಡಾರಿ ಮನವಿ

Most read

ಮಂಗಳೂರು : ವಸುದೈವ ಕುಟುಂಬಕಂ ಎಂದು ಸಾರುವ ಪೇಜಾವರ ಮಠಾಧೀಶರು, ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ, ಹಿಂದೂ ಯುವಕರಿಗೆ ರಕ್ಷಣೆಯಿಲ್ಲ ಎಂದು ಹೇಳುವ ಮೂಲಕ ಒಂದು ಕೋಮಿನ ಯುವಕರ ತುಷ್ಟೀಕರಣ ಮಾಡುತ್ತಿದ್ದಾರೆ. ದಯಮಾಡಿ ಶ್ರೀಗಳು ಮತ್ತೊಮ್ಮೆ ಭಗವದ್ಗೀತೆಯನ್ನು ಓದಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುವುದಾಗಿ ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಶ್ರೀಗಳಾದ ವಿಶ್ವೇಶ್ವರ ತೀರ್ಥರು ಉಡುಪಿ ಮಠಕ್ಕೆ ಮುಸ್ಲಿಮರ ಕೊಡುಗೆಯಿದೆ ಎಂದು ಹೇಳಿದ್ದರು. ಮಠದಲ್ಲಿ ಇಫ್ತಾರ್ ಕೂಟವನ್ನೂ ಆಯೋಜನೆ ಮಾಡಿದ್ದರು. ಈ ಕ್ರಮವನ್ನು ಕೆಲವರು ಟೀಕೆ ಮಾಡಿದಾಗ ಅದನ್ನು ಸಮರ್ಥನೆ ಮಾಡಿಕೊಂಡಿದ್ದರು ಎಂದು ನೆನಪಿಸಿಕೊಂಡರು.

ಹಿಂದೂಗಳ ರಕ್ಷಣೆ ಮಾಡುತ್ತೇವೆ ಎಂದು ಮೋದಿ‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರ ಸರ್ಕಾರ ಆಡಳಿತದಲ್ಲಿರುವಾಗ  ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದಾದರೆ ಶ್ರೀಗಳು ಮೋದಿ ಅಥವಾ ಅಮಿತ್ ಶಾ ರಾಜೀನಾಮೆ ಕೇಳಲಿ. ಕ್ಷುಲ್ಲಕ‌ ಹೇಳಿಕೆಗಳನ್ನು ನೀಡುವುದು ಹಾಗೂ ರಾಜಕೀಯ ಮಾಡುವುದನ್ನು ಬಿಡುವಂತೆ ಪೇಜಾವರ ಶ್ರೀಗಳಿಗೆ ಮನವಿ ಮಾಡಿಕೊಂಡರು.

ನಿಜವಾಗಿಯೂ ಸುಹಾಸ್ ಶೆಟ್ಟಿ ಹಿಂದೂ ನಾಯಕನಾಗಿದ್ದರೆ ಆತನ ಮೇಲೆ ರೌಡಿಶೀಟರ್ ತೆರೆಯಲು ಬಿಜೆಪಿ ಸರ್ಕಾರ ಅವಕಾಶ ಕೊಟ್ಟಿದ್ದು ಏಕೆ? ಹಿಂದಿನ ಬಿಜೆಪಿ ಸರ್ಕಾರವೇ ತನ ವಿರುದ್ಧ ರೌಡಿಶೀಟರ್ ತೆರೆದು ಈಗ ಆತನಿಗೆ ಹಿಂದೂ ನಾಯಕನ ಪಟ್ಟ ಕಟ್ಟಿದ್ದಾರೆ. ಸುಹಾಸ್ ಶೆಟ್ಟಿ ಮೇಲೆ‌ ಐದು ಕ್ರಿಮಿನಲ್ ಪ್ರಕರಣಗಳಿವೆ. ಕೀರ್ತಿ ಎಂಬ ಹಿಂದೂ ಯುವಕನನ್ನು ಕೊಂದಿರುವ ಪ್ರಕರಣವೂ ಈತನ ಮೇಲೆ ದಾಖಲಾಗಿದೆ ಎಂದರು.

ಕೊಲೆಯಾದ ದಲಿತ ಯುವಕ ಹಿಂದೂ ಅಲ್ಲವೇ? ಹಿಂದೂಗಳನ್ನು ಕೊಂದವನನ್ನು ಹಿಂದೂ ಕಾರ್ಯಕರ್ತ ಎಂದು ವೈಭವೀಕರಿಸುವುದು ಸರಿಯಲ್ಲ. ಬಿಜೆಪಿ ಮುಖಂಡರು ಕೊಲೆಗಳಾಗುವುದನ್ನೇ ಕಾಯುತ್ತಿರುತ್ತಾರೆ. ಅಧಿಕಾರ ದಾಹಕ್ಕಾಗಿ ಕೋಮು ಗಲಾಟೆಗಳಿಗೆ ಪ್ರಚೋದನೆ ನೀಡುತ್ತಾರೆ ಎಂದು ಭಂಡಾರಿ ಆಕ್ರೋಶ ವ್ಯಕ್ತಪಡಿಸಿದರು.

ಸುಹಾಸ್‌ ಶೆಟ್ಟಿ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆದು ಮತೀಯ ಕೊಲೆಗಳ ಹಿಂದಿನ ಶಕ್ತಿಗಳನ್ನು ಗುರುತಿಸಿ ಶಿಕ್ಷಿಸಬೇಕು. ಯಾವುದೇ ಒತ್ತಡಕ್ಕೂ‌ ಮಣಿಯದೆ ಪೊಲೀಸರು ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸಸುತ್ತೇವೆ. ಕೊಲೆಗಳು ನಡೆದಾಗ ಯಾರೊಬ್ಬರೂ ಕೋಮು ಪ್ರಚೋದನೆ ಮಾಡಬಾರದು ಎಂದು ಅವರು ಮತ್ತೊಮೆ ಮನವಿ ಮಾಡಿದರು.

More articles

Latest article