2024ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆದ್ದು ನರೇಂದ್ರ ಮೋದಿ ಪ್ರಧಾನಿಯಾದರೆ ದೇಶದಲ್ಲಿ ಸರ್ವಾಧಿಕಾರ ಜಾರಿಗೆ ಬರಲಿದೆ. ಭಾರತದಲ್ಲಿ ಮುಂದೆಂದೂ ಚುನಾವಣೆ ನಡೆಯುವುದಿಲ್ಲ ಇದೇ ಕೊನೆಯ ಚುನಾವಣೆಯಾಗಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಭವಿಷ್ಯ ನುಡಿದಿದ್ದಾರೆ.
ಒಡಿಶಾದ ಭುವನೇಶ್ವರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಈ ಬಾರಿ ನಿಮಗೆ ಮತ ಹಾಕಲು ಕೊನೆಯ ಅವಕಾಶವಿದೆ ಎಂದರು. 2024ರ ನಂತರ ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಚುನಾವಣೆ ಇರುವುದಿಲ್ಲ. ಈ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಪ್ರಧಾನಿ ಮೋದಿ ಪ್ರಧಾನಿಯಾದರೆ ಸರ್ವಾಧಿಕಾರವನ್ನು ಘೋಷಿಸುತ್ತಾರೆ. ಆಗ ರಷ್ಯಾ ಅಧ್ಯಕ್ಷರಂತೆ ಇಲ್ಲಿಯೂ ಚುನಾವಣೆ ನಡೆಯಲಿದೆ ಎಂದು ಖರ್ಗೆ ಹೇಳಿದ್ದಾರೆ.
ಪ್ರತಿಯೊಬ್ಬರಿಗೂ (ಇಡಿ) ನೋಟಿಸ್ ನೀಡಿ ಜನರನ್ನು ಹೆದರಿಸುತ್ತಿದ್ದಾರೆ. ಭಯದಿಂದ ಕೆಲವರು ನಮ್ಮ ಜೊತೆಗಿನ ಮೈತ್ರಿ ಸರ್ಕಾರ ತೊರೆಯುತ್ತಿದ್ದಾರೆ, ಕೆಲವರು ಪಕ್ಷವನ್ನೇ ತೊರೆಯುತ್ತಿದ್ದಾರೆ ಮತ್ತು ಕೆಲವರು ಇಂಡಿಯಾ ಮೈತ್ರಿ ತೊರೆಯುತ್ತಿದ್ದಾರೆ. ಇದನ್ನು ನೀವು ಗಂಭೀತವಾಗಿ ಗಮನಿಸಬೆಕಿದೆ. ಸರಿಯಾಗಿ ಮತ ಚಲಾಯಿಸಲು ಇದು ನಿಮಗೆ ಕೊನೆಯ ಅವಕಾಶ. ಇದಾದ ನಂತರ ಭಾತರದಲ್ಲಿ ಯಾವುದೇ ಮತದಾನ ಇರುವುದಿಲ್ಲ ಎಂದು ಎಎನ್‌ಐಗೆ ತಿಳಿಸಿದ್ದಾರೆ.
ಇಂಡಿಯಾ ಬಣದಿಂದ ನಿತೀಶ್ ಕುಮಾರ್ ನಿರ್ಗಮನದ ಕುರಿತು ಮಾತನಾಡಿದ ಅವರು, ಒಬ್ಬ ವ್ಯಕ್ತಿ ಮೈತ್ರಿಯಿಂದ ಹೊರಬರುವುದರಿಂದ ಚುನಾವಣಾ ಫಲಿತಾಂಶಗಳ ಮೇಲೆ ಪರಿಣಾಮ ಬೀರುವುದಿಲ್ಲ. ನಾವು ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಅವರೊಂದಿಗಿನ ಸ್ನೇಹದಿಂದ ನವೀನ್ ಪಟ್ನಾಯಕ್ ಅವರಿಗೆ ಏನು ಸಿಕ್ಕಿತು? ಡಬಲ್ ಎಂಜಿನ್ ಅನೇಕ ಬಾರಿ ವಿಫಲಗೊಳ್ಳುತ್ತದೆ. ಡಬಲ್ ಇಂಜಿನ್ ಸರಿಯಾಗಿ ಕೆಲಸ ಮಾಡದಿದ್ದಾಗ ಮೊದಲ ಎಂಜಿನ್ ಸಹ ವಿಫಲಗೊಳ್ಳುತ್ತದೆ. ರಾಹುಲ್ ಗಾಂಧಿ ದೇಶವನ್ನು ಒಗ್ಗೂಡಿಸಲು ಬಯಸಿದ್ದಾರೆ. ಅವರು ಪ್ರೀತಿಯ ಅಂಗಡಿ ತೆರೆದಿದ್ದಾರೆ ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ದ್ವೇಷದ ಅಂಗಡಿಯನ್ನು ತೆರೆದಿದೆ. ಈ ಕಾರಣಕ್ಕಾಗಿ ನೀವು ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.