ಆನೇಕಲ್‌ ಗೆ ಕಾವೇರಿ ನೀರು, ಮೆಟ್ರೋ ರೈಲು: ಡಿಸಿಎಂ ಶಿವಕುಮಾರ್‌ ಭರವಸೆ

Most read

ಆನೇಕಲ್: ರಾಜ್ಯ ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಆನೇಕಲ್ ತಾಲೂಕಿಗೆ ಕಾವೇರಿ ನೀರು ಪೂರೈಸಲು ಟೆಂಡರ್ ಕರೆಯಲಾಗಿದೆ. ಹಾಗೆಯೇ ಮೆಟ್ರೋ ವಿಸ್ತರಣೆಗೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಆನೇಕಲ್ ತಾಲ್ಲೂಕು ಹೆನ್ನಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇಂದು ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಶಿವಣ್ಣ, ಮಾಜಿ ಸಂಸದ ಸುರೇಶ್, ರಮೇಶ್ ಅವರು ನಿಮ್ಮನ್ನು ಬೆಂಗಳೂರು ನಗರ ವ್ಯಾಪ್ತಿಗೆ ಸೇರಿಸಬೇಕು ಎಂದು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ಮುಂದೆ ಚರ್ಚೆ ಮಾಡುತ್ತೇನೆ. ಈ ಭಾಗವನ್ನು ಗ್ರೇಟರ್ ಬೆಂಗಳೂರಿನಲ್ಲಿ ಸೇರಿಸಲು ಚರ್ಚೆಯಾಗುತ್ತಿದೆ. ಎಲ್ಲಾ ಶಾಸಕರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಆನೇಕಲ್‌ ಗೆ ಕಾವೇರಿ ನೀರನ್ನು ಪೂರೈಕೆ ಮಾಡಬೇಕು ಎಂದು ಸುರೇಶ್ ಹಾಗೂ ರಾಮಲಿಂಗಾ ರೆಡ್ಡಿ ಅವರು ಒತ್ತಾಯಿಸಿದ್ದಾರೆ. ಆನೇಕಲ್ ತಾಲೂಕಿಗೆ 30 ಎಂಎಲ್ ಡಿ ನೀರನ್ನು ಪೂರೈಕೆ ಮಾಡಲು ಟೆಂಡರ್ ಕರೆಯಲಾಗಿದೆ. ಈ ಬಗ್ಗೆ ಶಾಸಕ ಶಿವಣ್ಣ ಅವರ ಜತೆ ಚರ್ಚೆ ಮಾಡಲಿದ್ದೇನೆ. ಜಿಗಣಿ, ಆನೇಕಲ್, ಸರ್ಜಾಪುರ, ಬನ್ನೇರುಘಟ್ಟಕ್ಕೆ ಮೆಟ್ರೋ ರೈಲು ಮಾರ್ಗ ವಿಸ್ತರಿಸಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.

ನಮಗೆ ಆನೇಕಲ್ ಮತ್ತು ಕನಕಪುರ ಎರಡೂ ಒಂದೇ. ಈ ಕ್ಷೇತ್ರದ ಅಭಿವೃದ್ಧಿಗೆ ನಾವು ಬದ್ಧವಾಗಿದ್ದೇವೆಒಂದೇ ಗ್ರಾಮ ಪಂಚಾಯ್ತಿಯಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆ ಮೂಡಿಸಿದೆ. ನಿಮ್ಮ ಜತೆ ನಮ್ಮ ಸರ್ಕಾರ ಇದೆ ಎಂದು ಹೇಳಲು ನಾನು ಹಾಗೂ ರಾಮಲಿಂಗಾ ರೆಡ್ಡಿ ಅವರು ಬಂದಿದ್ದೇವೆ. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಎಂದು ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ 4 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದೆ ಎಂದರು.

ರೈತರಿಗೆ ಇಂಡಿ, ಬೂಸ ಬೆಲೆ ಏರಿಕೆ ಹೊರೆಯಾಗುತ್ತಿದೆ. ಹೀಗಾಗಿ ರೈತರಿಗೆ ಅನುಕೂಲ ಮಾಡಿಕೊಡಲು ನಮ್ಮ ಸರ್ಕಾರ ಹಾಲಿನ ದರವನ್ನು 4 ರೂ.ನಷ್ಟು ಏರಿಕೆ ಮಾಡಿದೆ. ಅಷ್ಟಕ್ಕೇ ಬಿಜೆಪಿಯವರು ಯಾತ್ರೆ ಮಾಡುತ್ತಿದ್ದಾರೆ. ಈ ಪಂಚಾಯ್ತಿಯಿಂದ ರೈತರಿಗೆ ಸರ್ಕಾರಕ್ಕೆ ಸರಿಸಮನಾಗಿ ಪ್ರತಿ ಲೀಟರ್ ಗೆ 5 ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

More articles

Latest article