ದಕ್ಷಿಣ ಕನ್ನಡ ಮತ್ತು ಕರಾವಳಿ ಕಾರವಾರದ ತನಕ ಉದ್ದಕ್ಕೂ ಕಾಂಗ್ರೆಸ್ ಸೋಲುತ್ತಿದೆ. ಇಲ್ಲಿ ಕನಿಷ್ಠ 8 ರಿಂದ 10 ಸೀಟು ಗೆಲ್ಲಬೇಕು. ಮುಂಬೈ ಮೂಲದ ಮಂಗಳೂರಿನ ಪ್ರಸಿದ್ಧ ಹೊಟೇಲ್ ಮಾಲೀಕರೊಬ್ಬರು ಈಗ ಬಿಜೆಪಿ ಜೊತೆಗಿದ್ದಾರೆ. ಅವರನ್ನು ಕಾಂಗ್ರೆಸ್ ನಿಂದ ಸುರತ್ಕಲ್ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸುವ ಮಾತುಕತೆ ನಡೆದಿದೆಯಂತೆ. ಹೀಗೆ ದೊಡ್ಡ ದೊಡ್ಡ ಕುಳಗಳನ್ನು ಚುನಾವಣೆಯಲ್ಲಿ ನಿಲ್ಲಿಸಲು ಡಿಕೆಶಿ ಕರಾವಳಿಯಲ್ಲಿ ಹುಡುಕಾಟ ಮಾಡುತ್ತಿದ್ದಾರಂತೆ! – ಎಸ್ ಕೆ ಸಿದ್ಧಾರ್ಥ, ಮಂಗಳೂರು
ಒಂದು ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಇಲ್ಲಿಂದ ಗೆದ್ದವರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಉದಾಹರಣೆಯೂ ಇದೆ.
ಆದರೆ, ಕಳೆದ ಶತಮಾನದ ಕೊನೆಯ ಭಾಗದಲ್ಲಿ ನಿಧಾನವಾಗಿ ನಿತ್ರಾಣಗೊಳ್ಳತೊಡಗಿದ ಕಾಂಗ್ರೆಸ್ ಆಮೇಲೆ ಚೇತರಿಸಿಕೊಂಡದ್ದು ಕಡಿಮೆ. ಅದು ಇಳಿಜಾರಿನ ಹಾದಿಯಲ್ಲಿಯೇ ಇದೆ. ಕಾಂಗ್ರೆಸ್ ನ ಈ ಪರಿಸ್ಥಿತಿಗೆ ಬೇರೆಯವರು ಕಾರಣರಲ್ಲ. ಸಂಘಟನೆಯನ್ನು ಬಲಗೊಳಿಸಲು ಅದು ತೋರಿದ ಔದಾಸೀನ್ಯದ ಸ್ವಯಂಕೃತಾಪರಾಧವೇ ಕಾರಣ. ತಪ್ಪು ಮಾಡಿಯೂ ತಿದ್ದಿಕೊಳ್ಳದ ಅದರ ಮೂರ್ಖತನ ಕಾರಣ.
2013 ರ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಎಂಟು ಸ್ಥಾನಗಳಲ್ಲಿ ಏಳು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತ್ತು (ಗೆದ್ದವರಲ್ಲಿ ಒಬ್ಬರು ಮುಸ್ಲಿಂ, ಒಬ್ಬರು ಕ್ರಿಶ್ಚಿಯನ್, ಒಬ್ಬರು ಜೈನ!). ಈಗಲೂ ಇಲ್ಲಿನ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಅರ್ಧ ಲಕ್ಷಕ್ಕಿಂತಲೂ ಅಧಿಕ ಮತಗಳನ್ನು ಕಾಂಗ್ರೆಸ್ ಗಳಿಸುತ್ತಿದೆ. ಸಂಸತ್ ಚುನಾವಣೆಯಲ್ಲಿ ಐದು ಲಕ್ಷಕ್ಕಿಂತಲೂ ಅಧಿಕ ಮತಗಳನ್ನು ಈಗಲೂ ಗಳಿಸುತ್ತಿದೆ. ಆದರೂ ಚುನಾವಣೆಗಳಲ್ಲಿ ಗೆಲುವಿನ ಗೆರೆ ದಾಟಲು ಕಾಂಗ್ರೆಸ್ ಗೆ ಸಾಧ್ಯವಾಗುತ್ತಿಲ್ಲ.
ಇಲ್ಲಿನ ಸಮಸ್ಯೆ ಏನು ಎಂಬುದು ಜನಸಾಮಾನ್ಯರಿಗೂ ಗೊತ್ತಿದೆ. ʼಕಾಂಗ್ರೆಸ್ ನವರು ಕೆಲಸ ಮಾಡುವುದಿಲ್ಲ ಮಾರಾಯ್ರೆ, ಚುನಾವಣೆಯಲ್ಲಿ ಸೋತ ಬಳಿಕ ಗಡದ್ದಾಗಿ ನಿದ್ದೆ ಮಾಡುತ್ತಾರೆ, ಎಚ್ಚೆತ್ತುಕೊಳ್ಳುವುದು ಮುಂದಿನ ಚುನಾವಣೆ ಘೋಷಿಸಿದ ಬಳಿಕ, ಕಾಂಗ್ರೆಸ್ ವರಿಷ್ಠರು ಕೂಡಾ ಸಕಾಲದಲ್ಲಿ ಅಭ್ಯರ್ಥಿ ಘೋಷಿಸುವ ಬದಲು ಉಮೇದುವಾರಿಕೆ ಸಲ್ಲಿಕೆಯ ಗಡುವಿನ ಮುನ್ನಾ ದಿನದಂದು ಘೋಷಿಸುತ್ತಾರೆ, ಹಗಲು ಕಂಡ ಬಾವಿಗೆ ರಾತ್ರಿ ಬೀಳುವ ಯಾವುದಾದರೂ ಪಕ್ಷ ಇದ್ದರೆ ಅದು ಕಾಂಗ್ರೆಸ್ʼ ಎಂದು ಹೇಳುತ್ತಾರೆ.
ರಿಪೇರಿ ಕಷ್ಟ !
ಕಳೆದ ಸಂಸತ್ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ತುಲನಾತ್ಮಕವಾಗಿ ಅತ್ಯುತ್ತಮ ಎನ್ನಲಾದ ಅಭ್ಯರ್ಥಿಯನ್ನು ಹಾಕಿತ್ತು. ಸ್ವಲ್ಪ ಕೆಲಸ ಮಾಡಿದರೆ ಗೆಲ್ಲುವ ಅವಕಾಶವೂ ಅಧಿಕವಿತ್ತು. ಆದರೆ ಕಾಂಗ್ರೆಸ್ ನ ಅನೇಕ ನಾಯಕರಲ್ಲಿ ಒಗ್ಗಟ್ಟಿರಲಿಲ್ಲ, ಕೆಲಸ ಮಾಡುವ ಹುಮ್ಮಸ್ಸೂ ಇರಲಿಲ್ಲ (ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರು ಯಾರು ಎನ್ನುವುದು ಅನೇಕರಿಗೆ ಈಗಲೂ ಗೊತ್ತಿಲ್ಲ. ಅಂತಹ ವ್ಯಕ್ತಿಯ ಮುಂದಾಳತ್ವದಲ್ಲಿ ಚುನಾವಣೆ!).
ನಾನು ಕಾಂಗ್ರೆಸ್ ಬೆಂಬಲಿಗನಲ್ಲ. ಆದರೆ ದೇಶ ಒಡೆಯುವ ರಾಜಕೀಯ ಅಜೆಂಡಾ ಮತ್ತು ಜೀವವಿರೋಧಿ ಸಿದ್ಧಾಂತ ಹೊಂದಿರುವ ಬಿಜೆಪಿಯ ಕಡು ವಿರೋಧಿ. ಹಾಗಾಗಿ ಈ ಬಾರಿ ಏನಾದರೂ ಮಾಡಿ ಬಿಜೆಪಿ ಸೋಲುವಂತೆ ಮಾಡಬೇಕು ಎಂದು ನಾವೆಲ್ಲರೂ ನಮ್ಮದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದೆವು. ಆದರೆ ಅನೇಕ ಮೂಲೆಗಳಿಂದ ಬರುತ್ತಿದ್ದ ವರದಿಗಳು ನಿರಾಶಾದಾಯಕವಾಗಿದ್ದವು. ʼನಮ್ಮವರು ಪ್ರಚಾರ ಶುರುಮಾಡಿ ಅರ್ಧ ಕ್ಷೇತ್ರ ಕ್ರಮಿಸಿಯಾಗಿದೆ, ನಿಮ್ಮವರು ಹೊರಟೇ ಇಲ್ಲʼ ಎಂದು ಬಿಜೆಪಿಯ ಸಕ್ರಿಯ ಕಾರ್ಯಕರ್ತರೊಬ್ಬರು ನಗುತ್ತ ನನ್ನಲ್ಲಿ ಹೇಳಿದರು. ಇಲ್ಲಿನ ಸಂಘಟನಾತ್ಮಕ ಸಮಸ್ಯೆಯ ಬಗ್ಗೆ ನಾನು ಕಾಂಗ್ರೆಸ್ ನ ಪ್ರಭಾವಿ ರಾಜ್ಯ ವಕ್ತಾರರೊಬ್ಬರ ಬಳಿ ಹೇಳಿಕೊಂಡೆ. ಅವರು ಇದೇ ಜಿಲ್ಲೆಯವರು. ʼದಕ್ಷಿಣ ಕನ್ನಡ ಕಾಂಗ್ರೆಸ್ ನ ಸಮಸ್ಯೆ ಎಲ್ಲರಿಗೂ ಗೊತ್ತಿದೆ. ಆದರೆ ಅದು ರಿಪೇರಿಯಾಗದ ಸ್ಥಿತಿಯಲ್ಲಿದೆ, ಏನೂ ಮಾಡಲಾಗದು ಮಾರಾಯ್ರೆʼ ಎಂದರು ಅವರು.
ಕೊನೆಗೆ ಹಾಗೆಯೇ ಆಯಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 13 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದುದು ಕೇವಲ ಎರಡು ಸ್ಥಾನ. ಉಡುಪಿಯಲ್ಲಿ ಒಂದೂ ಇಲ್ಲ. ಸಂಸತ್ ಚುನಾವಣೆಯಲ್ಲಿ ಒಂದೂವರೆ ಲಕ್ಷ ಮತಗಳ ಅಂತರದಿಂದ ಭರ್ಜರಿ ಸೋಲು.
ಇಷ್ಟಾದ ಮೇಲೂ ಇಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಗಟ್ಟಿಗೊಳಿಸುವ ಕೆಲಸ ಏನಾದರೂ ನಡೆಯುತ್ತಿದೆಯೇ ಎಂಬ ಪ್ರಶ್ನೆ ಮುಂದಿಟ್ಟರೆ, ಉತ್ತರ ಮತ್ತೆ ನಿರಾಶಾದಾಯಕ. ಇಲ್ಲಿ ಕಾರ್ಯಕರ್ತರಿಗಿಂತ ಹೆಚ್ಚು ನಾಯಕರಿದ್ದಾರೆ. ಎಲ್ಲರೂ ನಾಯಕರೇ. ಮನೆಯೊಂದು ನೂರು ಬಾಗಿಲು. ಇಲ್ಲಿನ ಬಹುತೇಕ ನಾಯಕರಲ್ಲಿ ಹೋರಾಟದ ಕೆಚ್ಚೇ ಇಲ್ಲ. ಹೆಚ್ಚಿನವರಿಗೆ ಕಾಂಗ್ರೆಸ್ ಸಿದ್ಧಾಂತ ಏನೆಂಬುದು ಈಗಲೂ ಗೊತ್ತಿಲ್ಲ. ಇಲ್ಲಿನ ಕೆಲ ಕಾಂಗ್ರೆಸ್ ನಾಯಕರಿಗೆ ಸಂಘಪರಿವಾರದೊಂದಿಗೆ ಅನ್ಯೋನ್ಯ ಸಂಬಂಧವಿದೆ.
ಪರಿಸ್ಥಿತಿ ಹೀಗಿರುವಾಗಲೇ, ಮೊನ್ನೆ ಮೊನ್ನೆ ರಾಜ್ಯದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ʼಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲಿ13 ಸ್ಥಾನಗಳನ್ನು ಗೆಲ್ಲಲಿದೆʼ ಎಂದು ಘೋಷಿಸಿದರು. ಇದನ್ನು ಕೇಳಿ ಅಚ್ಚರಿಗೊಂಡವರಿಗಿಂತ ನಕ್ಕವರೇ ಹೆಚ್ಚು. ಸಂಘಟನೆಯೇ ಇಲ್ಲದೆ ಚುನಾವಣೆ ಗೆಲ್ಲುವುದು ಹೇಗೆ?
ಇದನ್ನೇ ಯೋಚಿಸುತ್ತ ಕುಳಿತಿದ್ದಾಗ ಇಲ್ಲಿನ ಕಾಂಗ್ರೆಸ್ ಒಳ ಹೊರಗುಗಳನ್ನು ಬಲ್ಲ ಹಿರಿಯರೊಬ್ಬರು ಸಿಕ್ಕರು. “ಏನು, ಡಿಕೆಶಿಯವರು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಗೆ ಪದೇ ಪದೇ ಬರುತ್ತಿದ್ದಾರೆ, ಉದ್ದೇಶ ಏನು?” ಎಂದು ಪ್ರಶ್ನಿಸಿದೆ. “ಉದ್ದೇಶ ಒಂದೇ. ಹೇಳುತ್ತೇನೆ ಕೇಳಿ” ಎಂದು ಡಿಕೆಶಿಯ ಮಹತ್ತ್ವಾಕಾಂಕ್ಷೆಯ ಜತೆಗೇ ಇಲ್ಲಿನ ಈಗಿನ ಕಾಂಗ್ರೆಸ್ ನಾಯಕರ ಕಿತ್ತಾಟ, ಸೋಮಾರಿತನ ಮತ್ತು ಸ್ವಾರ್ಥದ ಕತೆಗಳನ್ನೂ ಹೇಳುತ್ತಾ ಹೋದರು. ಅವರದೇ ಮಾತುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
ಡಿಕೆಶಿ ಸಿ ಎಂ ಆಗಬೇಕಾದರೆ…
ತನ್ನ ಪರ ಇರುವ ಕನಿಷ್ಟ 40 ಮಂದಿ ಅಭ್ಯರ್ಥಿಗಳು ಮುಂದಿನ ಚುನಾವಣೆಯಲ್ಲಿ ಗೆದ್ದು ಶಾಸಕರಾಗಬೇಕು. ಆಗ ಮಾತ್ರ ಮುಂದಿನ ಬಾರಿ ತಾನು ಸಿ ಎಮ್ ಆಗಬಹುದು ಎಂಬುದು ಡಿಕೆಶಿಗೆ ಗೊತ್ತಿದೆ. ಈಗ ಎಂಟರಿಂದ ಹತ್ತು ಜನ ಶಾಸಕರು ಮಾತ್ರ ಅವರ ಪರ ಇರುವುದರಿಂದ ಸಧ್ಯ ಸಿ ಎಮ್ ಆಗಲು ಸಾಧ್ಯವೇ ಇಲ್ಲ.
ದುರಂತ ಏನೆಂದರೆ, ಡಿಕೆಶಿ ಶಿಷ್ಯರಾದ ಇನಾಯತ್ ಮತ್ತು ಮಿಥುನ್ ಮುಂತಾದವರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟಲು ಸಾಧ್ಯವಿಲ್ಲ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಲು ಮಿಥುನ್ ಮತ್ತು ಜಿಲ್ಲಾಧ್ಯಕ್ಷ ಹರೀಶ ಕುಮಾರ ಪ್ರಯತ್ನ ಮಾಡುತ್ತಿದ್ದಾರೆ. ಮಿಥುನ್ ಏಕಾಏಕಿ ತಮ್ಮ ಫೇಸ್‌ಬುಕ್ ತುಂಬಾ ಪಾರ್ಟಿ ಮೀಟಿಂಗ್ ಫೋಟೋ ಹಾಕುತ್ತಿದ್ದಾರೆ. ಹರೀಶ ಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಭಾರೀ ಜನ ಸೇರಿಸಿ ಪ್ರತಿಭಟನೆ ಮಾಡಿ ಶಕ್ತಿ ಪ್ರದರ್ಶನ ಮಾಡಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಕೇಳಲು ಯೋಚಿಸಿದ್ದರು. ಆದರೆ ಪ್ರತಿಭಟನೆಯಲ್ಲಿ ಜನರೇ ಇಲ್ಲದೆ ವಿಫಲವಾಗಿದ್ದಾರೆ. ಈ ವರದಿಯನ್ನು ಮಿಥುನ್ ಡಿಕೆಶಿಗೆ ತಲುಪಿಸಿ ತನಗೇ ಕರಾವಳಿ ಪ್ರಾಧಿಕಾರ ಕೊಡಿ ಎಂದು ಕೋರಿದ್ದಾರಂತೆ.
ʼಜಿಲ್ಲೆಯ ಭಂಡಾರಿ, ಐವಾನ್, ಮಿಥುನ್, ಹರೀಶ್ ಕುಮಾರ್, ಮಮತಾ ಗಟ್ಟಿ, ಇನಾಯತ್, ಪದ್ಮರಾಜ ಇಂತಹ ಹತ್ತು ನಾಯಕರಿಗೆ ಎಂ ಎಲ್ ಎ, ಎಂ ಎಲ್ ಸಿ, ಡಿಸಿಸಿ/ ಕೆಪಿಸಿಸಿ/ ಎಐಸಿಸಿ/ ನಿಗಮ ಮಂಡಳಿ ಎಲ್ಲವನ್ನೂ ಬರೆದು ಕೊಟ್ಟುಬಿಡಿ, ಹೊಸಬರು ಬರಲಿಕ್ಕೇ ಇಲ್ವಾ, ಕಾರ್ಯಕರ್ತರು ಗುಲಾಮರ ರೀತಿ ಕೆಲಸ ಮಾಡಿ ಸಾಯ್ತೇವೆʼ ಎಂಬುದು ಕಾರ್ಯಕರ್ತರ ಆಕ್ರೋಶ.
ಖರ್ಗೆ ಹೆಸರು ಮತ್ತು ಡಿಕೆಶಿ ಬೆಂಬಲದೊಂದಿಗೆ ಬಂದ ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿಗೆ ಕಾರ್ಯಕರ್ತರು ಇಲ್ಲಿ ಕವಡೆ ಕಾಸಿನ ಕಿಮ್ಮತ್ತೂ ನೀಡುತ್ತಿಲ್ಲ.
ಡಿಕೆಶಿ ಅವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಇಲ್ಲಿನ ತಳ ಮಟ್ಟದ ಎಬಿಸಿಡಿ ಕೂಡಾ ತಿಳಿಯದಂತೆ ಈ ನಾಯಕರುಗಳು ಬ್ಲಾಕ್ ಮೇಲ್ ಮಾಡುತ್ತಾರೆ. ಜಿಲ್ಲೆಯ ಉಸ್ತುವಾರಿ ಸಚಿವ ಅಥವಾ ಗೃಹ ಸಚಿವರು ಬಂದರೆ ಕಾರ್ಪೋರೆಟ್ ಕುಳಗಳಾದ ಕಾರ್ಪೋರೇಟರ್ ವಿನಯರಾಜ, ಶಶಿಧರ ಹೆಗಡೆ, ಪ್ರವೀಣಚಂದ್ರ ಆಳ್ವ, ಅನಿಲ್ ಕಮಾರ್ ಗ್ಯಾಂಗ್ ಪೂರ್ಣದಿನ ಸುತ್ತುವರಿದು, ಅವರ ಬೇಕು ಬೇಡಗಳನ್ನು ಪೂರೈಸಿ ವಾಪಸ್ ಕಳಿಸುತ್ತಾರೆ. ಬೇರೆ ಮುಖಂಡರ ಸಂಪರ್ಕ ಇವರಿಗೆ ಇಲ್ಲವೇ ಇಲ್ಲ.
ಇನ್ನು ಡಿಕೆಶಿ ಬಂದರೆ ಮಿಥುನ್, ಇನಾಯತ್, ಅಶೋಕ ರೈ ಗ್ಯಾಂಗ್ ಹಿಡಿದು ಹಾಕುತ್ತೆ. ಸಿದ್ಧರಾಮಯ್ಯ ಅವರು ಬಂದರೆ ಖಾದರ್ ಅಥವಾ ಐವಾನ್ ಸಾಹೇಬರ ಜನ ಮುತ್ತಿಕೊಳ್ಳುತ್ತಾರೆ.
ಈ ಎಲ್ಲಾ ಗುಂಪಿನಲ್ಲೂ ಸೇರುವ ಒಬ್ಬ ವ್ಯಕ್ತಿ ʼಡೀಲ್ ಮಾಸ್ಟರ್ʼ ಎಂದೇ ಪರಿಚಿತ ಇಫ್ತಿಖಾರ್ ಸಾಹೇಬರು ಮಾತ್ರ.
ಹೀಗಿರುವಾಗ, ಡಿಕೆಶಿ ಅಥವಾ ಬೇರೆ ಯಾರೇ ಬಂದರೂ ಇಲ್ಲಿ ಮುಂದಿನ ಚುನಾವಣೆಯಲ್ಲಿ 21 ಸೀಟುಗಳ ಪೈಕಿ ೩ ಸೀಟು ಗೆದ್ದರೆ ಗ್ರೇಟ್. ತಳಮಟ್ಟದಲ್ಲಿ ಪಕ್ಷ ಕಟ್ಟುವ ಹೊಸ ಅಧ್ಯಕ್ಷ ಬಂದರೆ, ಕೆಪಿಸಿಸಿ ಅವನ ಬೆಂಬಲಕ್ಕೆ ನಿಂತರೆ ಕಾಂಗ್ರೆಸ್ ಉದ್ಧಾರ ಆದೀತು. ಇಲ್ಲವಾದರೆ ಹರೋ ಹರ.
ಹೀಗೆ ಹೇಳಿ ʼಇಲ್ಲಿನದು ಕತೆಯಲ್ಲ ಮಾರಾಯ್ರೆ, ಕಾದಂಬರಿ, ಇನ್ನೊಂದು ದಿನ ಹೇಳುತ್ತೇನೆʼ ಎಂಬ ಷರಾ ಸೇರಿಸಿ ಮಾತು ಮುಗಿಸಿದರು.
ಈ ಹಿರಿಯರು ಹೇಳಿದ ಕೆಲವು ವಿಷಯಗಳು ಎಲ್ಲರಿಗೂ ಗೊತ್ತಿಲ್ಲದಿರಬಹುದು. ಆದರೆ ಹೆಚ್ಚಿನ ವಿಷಯಗಳು ಎಲ್ಲರಿಗೂ ಗೊತ್ತು. ಇದು ಇಲ್ಲಿನ ದೀರ್ಘ ಕಾಲದ ಸಮಸ್ಯೆ. ಇಲ್ಲಿ ನಿಜವಾಗಿ ಕೆಲಸ ಮಾಡುವವರಿಗೆ ಬೆಲೆಯಿಲ್ಲ. ನಾಳೆ ವಿಧಾನ ಪರಿಷತ್ ಸ್ಥಾನದ ಅವಕಾಶ ಬಂದಾಗ ಯಾರು ಯಾರೋ ಅದನ್ನು ಹೊಡೆದುಕೊಂಡು ಹೋಗುತ್ತಾರೆ. ಇಂಥವರಿಂದ ಪಕ್ಷ ಸಂಘಟನೆಗೆ ನಯಾಪೈಸೆ ಲಾಭವಿಲ್ಲ.
ತಳಮಟ್ಟದಲ್ಲಿ ಪಕ್ಷ ಕಟ್ಟಬಲ್ಲವರಿಗೆ ಅವಕಾಶ ಸಿಗಲಿ
ಹಾಗಂತ ಇಲ್ಲಿನ ಕಾಂಗ್ರೆಸ್ ನಲ್ಲಿ ಸಮರ್ಥರು ಇಲ್ಲವೆಂದಲ್ಲ. ಸಂಘಪರಿವಾರದ ಒಳಹೊರಗನ್ನು ಸಂಪೂರ್ಣ ಅರ್ಥಮಾಡಿಕೊಂಡು ಅವರ ಪಟ್ಟುಗಳನ್ನು ಅವರ ಪಟ್ಟುಗಳಿಂದಲೇ ಎದುರಿಸಬಲ್ಲ ಛಾತಿ ಮತ್ತು ಅನುಭವ ಇರುವ, ತಮ್ಮ ತಾರ್ಕಿಕ ಮತ್ತು ಪರಿಣಾಮಕಾರಿ ಮಾತುಗಳಿಂದ ಜನರ ಬುದ್ಧಿ ಮತ್ತು ಹೃದಯವನ್ನು ಸಮರ್ಥವಾಗಿ ತಲಪಬಲ್ಲ, ತಳಮಟ್ಟದಲ್ಲಿ ಸಂಘಟನೆಯನ್ನು ಕಟ್ಟುವ ಬಗೆಯ ಬಗ್ಗೆ ಆಳ ಅರಿವುಳ್ಳ ಎಂ ಜಿ ಹೆಗಡೆಯಂತಹ ಅನೇಕರಿದ್ದಾರೆ. ಇವರೆಲ್ಲ ಕಾಂಗ್ರೆಸ್ ನ ನಿಜವಾದ ಆಸ್ತಿಗಳು.
ತಮ್ಮ ಏಳಿಗೆಯೇ ಕಾಂಗ್ರೆಸ್ ಏಳಿಗೆ ಅಂದುಕೊಂಡಿರುವ ಸ್ವಾರ್ಥಿ ನಾಯಕರನ್ನು ಸ್ವಲ್ಪ ಬದಿಗೆ ಸರಿಸಿ, ಗ್ರೌಂಡ್ ಗೆ ಇಳಿದು, ತಳಮಟ್ಟದಲ್ಲಿ ಪಕ್ಷ ಕಟ್ಟಬಲ್ಲ ಸಂಘಟನಾ ಚತುರರಿಗೆ ಅವಕಾಶ ಮಾಡಿಕೊಟ್ಟರೆ ಕಾಂಗ್ರೆಸ್ ಈಗಲೂ ಇಲ್ಲಿ ತಲೆ ಎತ್ತಿ ನಿಲ್ಲಬಲ್ಲದು. ಆದರೆ, ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿರುವ ನಾಯಕರಿಗೆ ನೆಲಕ್ಕೆ ಕಿವಿಗೊಟ್ಟು ನೆಲದ ದನಿಯನ್ನು ಆಲಿಸಿ ಪಕ್ಷ ಎದುರಿಸುತ್ತಿರುವ ಸವಾಲುಗಳನ್ನು ತಿಳಿದುಕೊಂಡು ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳುವಷ್ಟು ವ್ಯವಧಾನ ಇದೆಯೇ? ಅವರಿಗೆ ಅಂತಹ ಬುದ್ಧಿ ಬರುವವರೆಗೂ ಇಲ್ಲಿ ಕಾಂಗ್ರೆಸ್ ನ (ದು)ಸ್ಥಿತಿ ಸುಧಾರಿಸುವುದು ಬಲು ಕಷ್ಟ.
ಎಸ್ ಕೆ ಸಿದ್ಧಾರ್ಥ
ಮಂಗಳೂರು
ಇದನ್ನೂ ಓದಿ- ಉಸ್ತುವಾರಿ ಸಚಿವರ ಕಣ್ಣೆದುರೇ 114 ಕೋಮು ಪ್ರಕರಣಗಳು | ಸಚಿವ ದಿನೇಶ್ ಗುಂಡೂರಾವ್ ಗೆ ಶಿಕ್ಷೆಇಲ್ಲವೇ ?