ಕೂಡಲಸಂಗಮ: ಸಮಾಜದಲ್ಲಿ ಇಂದು ಧರ್ಮ-ಧರ್ಮ ಹಾಗೂ ಜಾತಿ- ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದ್ದು, ಬಸವಣ್ಣ ಅವರ ವಿಚಾರಧಾರೆಗಳಿಂದ ಇದಕ್ಕೆ ಎಳ್ಳು- ನೀರು ಬಿಡಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಾಗಲಕೋಟೆ ಜಿಲ್ಲಾಡಳಿತದ ವತಿಯಿಂದ ಕೂಡಲಸಂಗಮದಲ್ಲಿ ‘ಅನುಭವ ಮಂಟಪ – ಬಸವಾದಿ ಶರಣರ ವೈಭವ‘ ಕಾರ್ಯಕ್ರಮದ ವೇದಿಕೆಯಲ್ಲಿ ಆಯೋಜಿಸಿದ್ದ ‘ವಚನ ಸಾಹಿತ್ಯ ಸಮಕಾಲೀನ ಸಂವೇದನೆ‘ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಯುವಕರಿಗೆ ಧರ್ಮದ ಹೆಸರಿನಲ್ಲಿ ಇಲ್ಲ-ಸಲ್ಲದನ್ನು ಅವರ ತಲೆಗೆ ತುಂಬಿ, ತಪ್ಪು ಹಾದಿಯಲ್ಲಿ ಕರೆದೊಯ್ಯುವ ಕೆಲಸಗಳು ನಡೆಯುತ್ತಿವೆ. ಅದಕ್ಕೆ ನಾವು ಆಸ್ಪದ ಕೊಡಬಾರದು. ವಿಷ ಬೀಜ ಬಿತ್ತುವವರ ನಡುವೆ ನಾವು ಬಸವಣ್ಣ ಸೇರಿದಂತೆ ಮಹಾನ್ ಚಿಂತಕರ ಆಚಾರ-ವಿಚಾರಗಳನ್ನು ನಾವು ರಾಜ್ಯವ್ಯಾಪಿ ಪ್ರಚಾರ ಮಾಡಬೇಕಿದೆ ಎಂದು ಹೇಳಿದರು.
ಸರ್ವ ಧರ್ಮ ಸಂಸತ್ತು ಹೆಸರಿನಲ್ಲಿ ಕಾರ್ಯಕ್ರಮ ನಡೆಸಲು ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದರು. ಆದರೆ ಆ ಹೆಸರಿನಿಂದ ಯಾರೊಬ್ಬರಿಗೂ ಭಾವನಾತ್ಮಕವಾಗಿ ಧಕ್ಕೆಯಾಗಬಾರದೆಂಬ ಕಾರಣಕ್ಕೆ ಹಲವು ಸಾಹಿತಿ, ಚಿಂತಕರು ಹಾಗೂ ಸ್ವಾಮೀಜಿಗಳ ಜತೆ ಹಲವು ಬಾರಿ ಸಭೆ ನಡೆಸಿ, ಚರ್ಚಿಸಿ ಅನುಭವ ಮಂಟಪ- ಬಸವಾದಿ ಶರಣರ ವೈಭವ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು.
ಆಡಳಿತ ವ್ಯವಸ್ಥೆ ಕಲಿಸಿಕೊಟ್ಟ ಬಸವಣ್ಣ:
ಬುದ್ಧ, ಬಸವ, ಅಂಬೇಡ್ಕರ್ ಅವರು ಯಾವುದೇ ಜಾತಿಗೆ ಸೀಮಿತವಾಗಿರದೇ ಇಡೀ ಜಗತ್ತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಬಸವಣ್ಣ ಅವರು ತಮ್ಮ ವಚನದ ಮೂಲಕ ನಮಗೆ ಆಡಳಿತ ವ್ಯವಸ್ಥೆಯನ್ನು ಕಲಿಸಿಕೊಟ್ಟಿದ್ದಾರೆ. ಅವರ ಹುಟ್ಟು ಹಾಕಿದ ಅನುಭವ ಮಂಟಪದ ಮಾದರಿಯಲ್ಲೇ ನಮ್ಮ ಸಂಸತ್ತು ನಡೆಯುತ್ತಿದೆ ಎಂದರು.
ಬಸವಣ್ಣವರನ್ನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಈ ರಾಜ್ಯದಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಬರಬೇಕಾಯಿತು. ಈ ಹಿಂದೆ ಹಲವರು ಮುಖ್ಯಮಂತ್ರಿಗಳಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಆದರೆ ಯಾರೂ ಕೂಡ ಬಸವಣ್ಣವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡುವ ಪ್ರಯತ್ನ ಮಾಡಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಾತ್ರ ಇದು ಸಾಧ್ಯವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲಿಗೆ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೇಡ ಎಂದು ಮುಖ್ಯಮಂತ್ರಿಗಳ ಬಳಿ ಹೇಳಿದ್ದೆ. ಆದರೆ ನನಗೆ ಈಗ ಅನಿಸುತ್ತಿದೆ, ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಸಂದರ್ಭದಲ್ಲಿ ನಾನು ಇಲಾಖೆಯ ಜವಾಬ್ದಾರಿ ಹೊತ್ತಿರುವುದು ನನ್ನ ಪುಣ್ಯ ಎಂದು ಭಾವಿಸಿದ್ದೇನೆ ಎಂದರು. ಬಸವಣ್ಣ ಅವರ ಆಚಾರ, ವಿಚಾರ ಹಾಗೂ ಚಿಂತನೆಗಳನ್ನು ಇಡೀ ಸಮಾಜಕ್ಕೆ ಪ್ರಚಾರ ಮಾಡುವ ಕೆಲಸ ಆಗಬೇಕಿದೆ. ಹೀಗಾಗಿ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಲು ತೀರ್ಮಾನಿಸಿ ಕೂಡಲಸಂಗಮದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ ಎಂದು ತಿಳಿಸಿದರು.
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಮಾತನಾಡಿ, 12ನೇ ಶತಮಾನದಲ್ಲಿ ಅಸ್ಪ್ರಶ್ಯತೆಯನ್ನು ತೊಡೆದು ಹಾಕುವುದರ ಜೊತೆಗೆ ಎಲ್ಲರನ್ನು ಎಲ್ಲ ಜನಾಂಗಗಳನ್ನು ಒಂದುಗೂಡಿಸುವ ಕಾರ್ಯ ನಡೆದಿದ ವಿಚಾರ. ಅದು ಇವತ್ತಿನವರೆಗೂ ಬಗೆಹರಿಯದೇ ಜಾತಿ, ಧರ್ಮ, ಘರ್ಷಣೆಗಳು ದಿನಂಪ್ರತಿ ನಡೆಯುತ್ತಿವೆ. ಮಾನವನನ್ನು ಮಾನವನನ್ನಾಗಿ ಕಾಣದ ಧರ್ಮ ಯಾವುದು. ಬಸವಣ್ಣನವರು ಹಾಕಿ ಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕೆಂಬ ಉದ್ದೇಶದಿಂದ ಅವರ ತತ್ವಾದರ್ಶಗಳನ್ನು ಪರಿಚಯಿಸುವ ಕಾರ್ಯ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ ಎಂದರು.
ಬಸವಣ್ಣ ಅವರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಅವರ ಆಚಾರ- ವಿಚಾರ ಮತ್ತು ಚಿಂತನೆಗಳನ್ನು ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಿರುವವರ ಸಂಖ್ಯೆ ವಿರಳ. ಆದರೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ. ಹೀಗಾಗಿ ಅವರಿಗೆ ಇಲ್ಲಸಲ್ಲದ ತೊಂದರೆ ಕೊಡುವ ಕೆಲಸ ನಡೆಯುತ್ತಿದೆ ಎಂದು ಸಚಿವರು ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಛೇಡಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ವಿಜಯಾನಂದ ಕಾಶಪ್ಪನವರ್, ಶ್ರೀ ನಿಜಗುಣಾನಂದ ಸ್ವಾಮೀಜಿ, ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ, ಶ್ರೀ ಗುರು ಮಹಾಂತ ಸ್ವಾಮೀಜಿ, ಡಾ.ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಅನ್ನದಾನಿ ಸ್ವಾಮೀಜಿ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಧಿಕಾರದ ಅಧ್ಯಕ್ಷರಾದ ಪುರುಷೋತ್ತಮ್ ಬಿಳಿಮಲೆ, ಸಾಹಿತಿಗಳಾದ ರಂಜಾನ್ ದರ್ಗಾ, ಡಾ.ಮೀನಾಕ್ಷಿ ಬಾಳಿ, ಡಾ.ಬಿ.ಟಿ.ಲಲಿತಾನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ, ಜಿಲ್ಲಾಧಿಕಾರಿ ಕೆ.ಎಮ್.ಜಾನಕಿ, ಸಿಇಓ ಶಶಿಧರ ಕುರೇರ, ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.