ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವಾಗಲೇ ಭಯೋತ್ಪಾದನಾ ದಾಳಿಗಳು ನಡೆಯುವದೇಕೆ?: ಸುರ್ಜೇವಾಲಾ ಪ್ರಶ್ನೆ

Most read

ಬೆಳಗಾವಿ: ದೇಶದಲ್ಲಿ ಬಿಜೆಪಿ ಸರಕಾರ ಇರುವಾಗಲೇ ಏಕೆ ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದಕ ದಾಳಿಗಳಾಗುತ್ತವೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಅವರು ಮಂಗಳವಾರ ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಮತ್ತು ಉಗ್ರರ ನಡುವೆ ಬಿಟ್ಟಿರಲಾರದ ನಂಟು ಇರುವ ಹಾಗೆ ಕಾಣಿಸುತ್ತಿದೆ. ದೇಶದ ಮೇಲೆ ದಾಳಿ ಆದಾಗ ಬಿಜೆಪಿ ಸರ್ಕಾರವೇ ಏಕೆ ಅಧಿಕಾರದಲ್ಲಿರುತ್ತದೆ ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಬಿಜೆಪಿ ಸರ್ಕಾರ ಇದ್ದಾಗಲೇ ಸಂಸತ್‌ ಭವನದ ಮೇಲೆ ಮೇಲೆ ದಾಳಿ ನಡೆಯಿತು. ವಿಮಾನ ಹೈಜಾಕ್‌ ಮಾಡಲಾಯಿತು. ಮೋದಿ ಪ್ರಧಾನಿ ಆದ ಬಳಿಕ ಪಠಾಣ್‌ ಕೋಟ್‌ ಮೇಲೆ ಉಗ್ರರ ದಾಳಿ ನಡೆಯಿತು. ಉರಿ ಸೇನಾ ನೆಲೆ ಮೇಲೆ ದಾಳಿ, ಪುಲ್ವಾಮಾದಲ್ಲಿ ಸೇನಾ ವಾಹನ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಅಮರನಾಥ ಯಾತ್ರಾರ್ಥಿಗಳ ಹತ್ಯೆ ಹಾಗೂ ಈಗ ಪಹಲ್ಗಾಮ್‌ ನಲ್ಲಿ ನ ದಾಳಿ ಮಾಡಲಾಗಿದೆ. ಇದಕ್ಕೆ ಕಾರಣ ಯಾರು ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯ ಪಾಕಿಸ್ತಾನ ಪ್ರೇಮವನ್ನು ರಾಜ್ಯ ಬಿಜೆಪಿ ನಾಯಕರು ನೆನಪು ಮಾಡಿಕೊಳ್ಳಬೇಕು. ಆಹ್ವಾನ ಇಲ್ಲದೇ ಪಾಕಿಸ್ತಾನಕ್ಕೆ ಹೋಗಿದ್ದು ಪ್ರಧಾನಿ ಮೋದಿ ಮಾತ್ರ. ಪಾಕಿಸ್ತಾನಕ್ಕೆ ಹೋಗಿ ಮೋದಿ ಕೇಕ್ ಕತ್ತರಿಸಿ ಬಂದಾಗ ಪಠಾಣ್‌ ಕೋಟ್ ಮೇಲೆ ದಾಳಿ ನಡೆಸುವ ಮೂಲಕ ಆ ದೇಶ ರಿಟರ್ನ್ ಗಿಫ್ಟ್ ಆಗಿ ಕೊಟ್ಟಿದೆ ಎಂದರು.

ಬಿಜೆಪಿ ನಾಯಕರು ಹಾಗೂ ಐಎಸ್‌ ಐಗೆ ಸಂಬಂಧ ಇದೆ‌‌. ಬಜರಂಗದಳದ ಬಲರಾಮ್ ಸಿಂಗ್ ಐಎಸ್ ಐ ಪರ ಕೆಲಸ ಮಾಡುತ್ತಿದ್ದಾಗ ಸಿಕ್ಕಿ ಹಾಕಿಕೊಂಡಿದ್ದರು. ಡಿಆರ್‌ ಡಿಒದಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪ್ ಐಎಸ್ ಐ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಆರ್‌ ಎಸ್‌ ಎಸ್ ಜೊತೆ ಸಂಬಂಧ ಇತ್ತು. ಜಮ್ಮು ಕಾಶ್ಮೀರದಲ್ಲಿ ಆಸೀಫಾರನ್ನು ಬೇಟಿ ಬಚಾವೋ ಬೇಟಿ ಪಡಾವೋ ಮುಖವಾಡ ಹಾಕಿದ್ದ ಬಿಜೆಪಿ, ಅದೇ ಆಸೀಫಾ ಪಾಕ್‌ನಲ್ಲಿ ಉಗ್ರನ ಜೊತೆ ಸೇರಿ ಭಾರತದ ವಿರುದ್ಧ ವಿಷಕಾರಿದ್ದಳು ಎಂಬುದನ್ನು ನೆನಪು ಮಾಡಿಕೊಟ್ಟರು.

ಉಗ್ರರನ್ನು ಮಟ್ಟ ಹಾಕುವ ಸರಕಾರದ ಪ್ರತಿಯೊಂದು ಕಾರ್ಯಕ್ಕೆ ಬೆಂಬಲ ನೀಡುವುದಾಗಿ ಕಾಂಗ್ರೆಸ್‌ ಈಗಾಗಲೇ ಹೇಳಿದೆ. ಪಹಲ್ಗಾಮ್‌ ಉಗ್ರರ ದಾಳಿಗೆ ಗುಪ್ತಚರ ಹಾಗೂ ಭದ್ರತಾ ವೈಫಲ್ಯ ಕಾರಣ. ಅಲ್ಲಿ ಪೊಲೀಸ್‌ ಸುರಕ್ಷತೆ ಏಕೆ ಇರಲಿಲ್ಲ? ಪಹಲ್ಗಾಮ್‌ ನಲ್ಲಿ ಮೂರು ಹಂತದ ಭದ್ರತೆ ಇದ್ದರೂ ದಾಳಿ ಆದ ಜಾಗದಲ್ಲಿ ಮಾತ್ರ ಪೊಲೀಸರು ಇರಲಿಲ್ಲವೇಕೆ? ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರ ಮೇಲೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಾಳಿ ಹೇಗೆ ನಡೆಯಿತು? ಉಗ್ರರ ಎಲ್ಲ ದಾಳಿಯೂ ಬಿಜೆಪಿಯವರ ಮೂಗಿನ ಕೆಳಗೆ ನಡೆದಿದೆ. ಭದ್ರತಾ ವೈಫಲ್ಯಕ್ಕೆ ಬಿಜೆಪಿ ಸರಕಾರವೇ ಜವಾಬ್ದಾರಿ ಎಂದು ವಾಗ್ದಾಳಿ ನಡೆಸಿದರು.

More articles

Latest article