ವಿಶ್ವಸಂಸ್ಥೆ: ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ಸದ್ಯದ ಉದ್ವಿಗ್ನ ಪರಿಸ್ಥಿತಿಯಲ್ಲಿ ಸಂಯಮ ಕಾಯ್ದುಕೊಳ್ಳಬೇಕು ಮತ್ತು ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ನೋಡಿಕೊಳ್ಳಬೇಕು ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಮನವಿ ಮಾಡಿಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯಲ್ಲಿ ಅಮಾಯಕ ನಾಗರಿಕರ ಹತ್ಯೆಯಾಗಿದೆ. ಈ ದುಷ್ಕೃತ್ಯವನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ. ಎಂತಹುದೇ ಸಂದರ್ಭದಲ್ಲೂ ನಾಗರಿಕರ ಮೇಲಿನ ದಾಳಿಗಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಒತ್ತಿಹೇಳಿದ್ದಾರೆ ಎಂದು ಗುಟೆರಸ್ ಅವರ ವಕ್ತರಾರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ.
ಗುಟೆರಸ್ ಯಾವುದೇ ನೇರ ಸಂಪರ್ಕ ಸಾಧಿಸಿಲ್ಲ. ಆದರೆ ಅವರು ಪರಿಸ್ಥಿತಿಯನ್ನು ತುಂಬಾ ನಿಕಟ ಮತ್ತು ಬಹಳ ಕಾಳಜಿಯಿಂದ ಗಮನಿಸುತ್ತಿದ್ದಾರೆ ಎಂದು ಡುಜಾರಿಕ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಉಭಯ ರಾಷ್ಟ್ರಗಳ ನಡುವಿನ ಯಾವುದೇ ಸಮಸ್ಯೆಗಳನ್ನು ಪರಸ್ಪರ ಮಾತುಕತೆಯ ಮೂಲಕವೇ ಶಾಂತಿಯುತವಾಗಿ ಪರಿಹರಿಸಬೇಕು. ಪರಿಸ್ಥಿತಿಯು ಮತ್ತಷ್ಟು ಹದಗೆಡಲು ಕಾರಣವಾಗದಂತೆ ಯಾವುದೇ ಆತುರದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದೂ ನಾವು ಮನವಿ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.