ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ದಾಳಿ ನಡೆಸುತ್ತಿದ್ದಾಗ ಉಗ್ರನ ಕೈಯಿಂದ ಗನ್ ಕಿತ್ತುಕೊಳ್ಳಲು ಯತ್ನಿಸಿದ ಸ್ಥಳೀಯ ಕುದುರೆ ಸವಾರ ಸೈಯದ್ ಆದಿಲ್ ಹುಸೈನ್ ಶಾ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.
28 ವರ್ಷದ ಆದಿಲ್ ಜೀವನೋಪಾಯಕ್ಕಾಗಿ ಕೆಲವು ವರ್ಷಗಳಿಂದ ಕುದುರೆ ಸವಾರಿ ಕೆಲಸ ಮಾಡುತ್ತಿದ್ದರು. ಮಂಗಳವಾರವೂ ಪ್ರವಾಸಿಗರನ್ನು ಕುದುರೆ ಮೂಲಕ ಬೈಸರನ್ ಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ಭಯೋತ್ಪಾದಕರು ಪ್ರವಾಸಿಗರತ್ತ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ತಮ್ಮ ಕುದುರೆ ಮೇಲಿದ್ದ ಪ್ರವಾಸಿಗನ ಮೇಲೆ ದಾಳಿ ಮಾಡಲು ಉಗ್ರನೊಬ್ಬ ಮುಂದಾದಾಗ, ಆದಿಲ್ ಆತನ ವಿರುದ್ಧ ಕದನಕ್ಕಿಳಿದಿದ್ದರು. ಉಗ್ರನ ಕೈಯಿಂದ ಗನ್ ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಆದಿಲ್ ಮೇಲೆ ಉಗ್ರನೊಬ್ಬ ಗುಂಡು ಹಾರಿಸಿದ್ದಾನೆ. ಆಗ ಆದಿಲ್ ಮೃತಪಟ್ಟಿದ್ದಾರೆ.
ವಯಸ್ಸಾದ ಪೋಷಕರು, ಪತ್ನಿ ಮತ್ತು ಮಕ್ಕಳಿಗೆ ಇವರೇ ಆಧಾರವಾಗಿದ್ದರು. ಇದೀಗ ಆ ಕುಟುಂಬ ಭವಿಷ್ಯ ಮುಸುಕಾಗಿದೆ. ಪುತ್ರನ ಸಾವು ಕುರಿತು ಪ್ರತಿಕ್ರಿಯಿಸಿರುವ ಆದಿಲ್ ಪೋಷಕರು, ದುಃಖವನ್ನು ತೋಡಿಕೊಂಡಿದ್ದಾರೆ. ಮಂಗಳವಾರ ಸಂಜೆ 3 ಗಂಟೆಯ ವೇಳೆ ನನ್ನ ಮಗ ಕೆಲಸಕ್ಕೆ ತೆರಳಿದ್ದ. ನಾವು ಅವನಿಗೆ ಕರೆ ಮಾಡಿದಾಗ ಅವನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಸಂಜೆ 4.40 ರ ವೇಳೆ ಆತನ ಫೋನ್ ರಿಂಗಾಯಿತಾದರೂ ಕರೆ ಸ್ವೀಕರಿಸಿರಲಿಲ್ಲ. ನಂತರ ಆತ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿಯಿತು ಎಂದು ದುಃಖ ವ್ಯಕ್ತಪಡಿಸಿದ್ದಾರೆ. ನಮ್ಮ ಕುಟುಂಬಕ್ಕೆ ಅವನೇ ಆಧಾರ. ಕುದುರೆ ಸವಾರಿ ಮಾಡಿ ದಿನಕ್ಕೆ ರೂ.300- 400 ಸಂಪಾದಿಸುತ್ತಿದ್ದ. ಆ ಹಣದಲ್ಲೇ ನಮ್ಮ ಜೀವನ ನಡೆಯುತ್ತಿತ್ತು. ಈಗ ನಮ್ಮ ಕುಟುಂಬಕ್ಕೆ ಯಾರು ದಿಕ್ಕು ಎಂದು ಎಂದು ಸೈಯದ್ ಆದಿಲ್ ಶಾ ತಾಯಿ ಬೇಬಿ ಜಾನ್ ಅಳುತ್ತಿದ್ದಾರೆ. ಆದಿಲ್ ಸೋದರಿ ಮತ್ತು ಪತ್ನಿಯೂ ಕಣ್ಣೀರು ಸುರಿಸುತ್ತಿದ್ದಾರೆ. ಅವರ ಸಣ್ಣ ಮಗು ಇತ್ತೀಚೆಗೆಷ್ಟೇ ಮೃತಪಟ್ಟಿತ್ತು.