ಯಾವುದೇ ಬೆಂಗಾವಲಿಲ್ಲದೆ ಕೋಮು ದಳ್ಳುರಿಯ ಕೆನ್ನಾಲಿಗೆಯ ನಡುವಲ್ಲೂ ಧೃಡಚಿತ್ತರಾಗಿ ನಡೆದವರು ಗಾಂಧೀ. ಆ ಶಕ್ತಿ ಯಾವ ಜಾತಿ, ಸಂಪತ್ತು, ಅನುಯಾಯಿಗಳ ಬಳುವಳಿಯಾಗಿರಲಿಲ್ಲ. ಅದು ಸನಾತನ ಸಂಸ್ಕೃತಿಯ ತಿಳುವಳಿಕೆ, ವಿಚಾರಗಳಿಂದ ಪ್ರೇರಿತವಾದ ಆಚಾರದಿಂದ ದತ್ತವಾದದ್ದು. ಇದನ್ನು ಪಾಲಿಸುವ ನಾಯಕ ನಮ್ಮ ನಡುವೆ ಎದ್ದು ಬಂದರೆ ರಾಮ ರಾಜ್ಯ ಬಹಳ ದೂರವೇನಲ್ಲ – ನುಡಿಸಂಚಾರ ಅಂಕಣದಲ್ಲಿ ವಿಶ್ರಾಂತ ಪ್ರಾಂಶುಪಾಲರಾದ ಡಾ. ಉದಯ ಕುಮಾರ್ ಇರ್ವತ್ತೂರು.
ಸಹಸ್ರಾರು ವರ್ಷಗಳ ಇತಿಹಾಸ ಇರುವ ಭಾರತೀಯ ನಾಗರಿಕ ವ್ಯವಸ್ಥೆ ಬ್ರಿಟನ್‌ನಂತಹ ಒಂದು ಸಣ್ಣ ದೇಶದ ಹಿಡಿತಕ್ಕೆ ಸಿಕ್ಕಿ ನಲುಗುವುದಕ್ಕೆ ಕಾರಣ ಮತ್ತು ಅದರ ಬಿಡುಗಡೆಯ ದಾರಿಯ ಕುರಿತ ಗಾಂಧೀ ಚಿಂತನೆಗಳು ನಿಜವಾದ ಅರ್ಥದಲ್ಲಿ ಸನಾತನ ಮತ್ತು ಭಾರತೀಯ. ಯಾಕೆಂದರೆ ಭಾರತೀಯ ಚಿಂತನಾ ಪರಂಪರೆಯ ಪುರುಷಾರ್ಥದ ಪರಿಕಲ್ಪನೆಯನ್ನು ಆಧುನಿಕತೆಯ ನಿಕಷಕ್ಕೆ ಒಡ್ಡಿದ ಗಾಂಧಿ ಅದಕ್ಕೆ ಅಂಟಿದ ಕಂದಾಚಾರದ, ಕಿಲುಬು ಕೊಳೆಗಳನ್ನು ತೊಳೆದು, ತಮ್ಮದೇ ಆದ ರಾಜಕೀಯ ವಿನ್ಯಾಸವನ್ನು ರಚಿಸಿ ಜನ ಮನ ಮುಟ್ಟುವ ಮೂಲಕ ದೇಶವನ್ನು ಬ್ರಿಟೀಷರ ಹಿಡಿತದಿಂದ ಮುಕ್ತಗೊಳಿಸಿದ್ದು ಮಾತ್ರವಲ್ಲದೇ ಜಗತ್ತಿಗೆ “ಭಾರತೀಯ ರಾಜಕೀಯ ಮಾದರಿ” ಒಂದನ್ನು ಪರಿಚಯಿಸಿದರು.
ಇಂಗ್ಲೆಂಡ್‌ನಲ್ಲಿ ಶಿಕ್ಷಣ, ಆಫ್ರಿಕಾದಲ್ಲಿ ವೃತ್ತಿ ಅನುಭವ ಮತ್ತು ಭಾರತದಲ್ಲಿ ರಾಜಕೀಯ ವ್ಯವಸ್ಥೆಯ ನಿಕಟ ಪರಿಚಯ ಆದಂತೆ ಅವರೊಳಗಿನ ಪರ್ಯಾಯ ಚಿಂತನೆ ಸ್ಪಷ್ಟ ರೂಪು ಪಡೆಯಿತು. ಸಾಮ್ರಾಜ್ಯಶಾಹಿಯನ್ನು ಅವರದೇ ಗುಂಡು, ತುಪಾಕಿಗಳ ಮೂಲಕ ಮಣಿಸಲು ಸಾಧ್ಯವಿಲ್ಲ. ಅದನ್ನು ನಮ್ಮದೇ ನೆಲದ, ಪರಂಪರೆಯ ದರ್ಶನ, ಜ್ಞಾನ, ಚರಿತ್ರೆ ಆಧರಿಸಿ ಮುಪ್ಪುರಿ ಗೊಳಿಸಿದ ವಿಶೇಷ ಆಯುಧದಿಂದ ಮಾತ್ರ ಸಾಧ್ಯವೆಂದು ಮನಗಂಡರು. ಬ್ರಿಟೀಷ್ ಸಾಮ್ರಾಜ್ಯ ಶಾಹಿಯ ದರ್ಪ, ಹಿಂಸೆ, ಒಡೆದಾಳುವ ಕುಟಿಲ ನೀತಿಗಳನ್ನು ಸತ್ಯ, ಅಹಿಂಸೆ, ಮತ್ತು ಸರಳತೆಯ ಪಾತಳಿಯ ಆಧಾರದಲ್ಲಿ ಪುರುಷಾರ್ಥವನ್ನು ಮರು ನಿರೂಪಿಸಿ ಹೊಸ ಚಿಂತನಾ ವಿನ್ಯಾಸವೊಂದನ್ನು ಕಟ್ಟುವ ಮೂಲಕ ರಾಷ್ಟ್ರೀಯ ಚಳುವಳಿಗೆ ಗಾಂಧೀಜೀ ಶಕ್ತಿ ತುಂಬಿದರು.
ಜೀವನದುದ್ದಕ್ಕೂ “ರಘುಪತಿ ರಾಘವನನ್ನು ನಂಬಿದ, ತನ್ನ ಕೊನೆಯುಸಿರಲ್ಲೂ ‘ರಾಮ’ ನನ್ನು ಸ್ಮರಿಸಿ ರಾಮರಾಜ್ಯ ಕಟ್ಟುವ ಕನಸು ಕಂಡು ಆ ದಾರಿಯಲ್ಲಿ ನಡೆದ ಗಾಂಧಿ ಒಬ್ಬ ಆದರ್ಶ ಹಿಂದೂ. ಧರ್ಮ ಇವರಿಗೆ ಬದುಕಿನ ದಾರಿ ಮತ್ತು ಸ್ವಾತಂತ್ರ್ಯದ ಗುರಿಯೂ ಆಗಿತ್ತು. ಧಾರ್ಮಿಕತೆಯಲ್ಲಿ ಮಾನವ ನಿರ್ಮಿತ ಮನುಷ್ಯ ವಿರೋಧಿ ಆಚರಣೆಗಳನ್ನು ವಿರೋಧಿಸಿ, ಧರ್ಮವನ್ನು ಕೇವಲ ಬಹಿರಂಗದ ಪೂಜೆ ಪುನಸ್ಕಾರವಾಗಿಸದೇ ಅಂತರಂಗದ ಶಕ್ತಿಯಾಗಿಸಿ ಸಮಾಜ ಮುಖಿಯಾಗಿಸುವ ಬಗೆಗೆ ತಾವೇ ಉದಾಹರಣೆಯಾದರು. ಯಾವ ದೇಗುಲದಲ್ಲಿ ಸರ್ವರಿಗೆ ಮುಕ್ತ ಪ್ರವೇಶವಿಲ್ಲವೋ ಅಲ್ಲಿಗೆ ತಾನೂ ಹೋಗುವುದಿಲ್ಲ ಎನ್ನುವ ನಿರ್ಧಾರ ಮಾಡಿ ಅದರಂತೆಯೇ ಬದುಕಿದರು. ದೇವರ ಮುಂದೆ ಹೆಣ್ಣು, ಗಂಡು ಎನ್ನುವ ಭೇದವಿಲ್ಲದೆ, ಮೇಲು ಕೀಳುಗಳೆಂಬ ತಾರತಮ್ಯವಿಲ್ಲದೇ ಸರ್ವರೂ ಸಮಾನರು ಎನ್ನುವುದನ್ನು ಪ್ರತಿಪಾದಿಸಿದರು. ತಮ್ಮ ಪ್ರಾರ್ಥನಾ ಸಭೆಗಳಲ್ಲಿ ಎಲ್ಲ ಧರ್ಮಗಳನ್ನು ಸಮಾನವಾಗಿ ಕಂಡರು. ನಿಜವಾದ ಅರ್ಥದಲ್ಲಿ ಧರ್ಮ ಜನರ ಬದುಕು ಬದಲಾಯಿಸಲು ಆರಂಭಿಸಿತು. ಇಂತಹ ಬದಲಾವಣೆಯಿಂದ ಧರ್ಮವನ್ನೇ ವ್ಯವಹಾರವಾಗಿ ಮಾಡಿಕೊಂಡ ಪಟ್ಟ ಭದ್ರರಿಗೆ, ಮಡಿವಂತರಿಗೆ ಅಭದ್ರತೆಯ ಭಯ ಕಾಡತೊಡಗಿದ್ದು ಸಹಜವೇ ಆಗಿತ್ತು.
ಬದಲಾಗುತ್ತಿರುವ ಕಾಲಮಾನದಲ್ಲಿ “ಅರ್ಥ” ಅಥವಾ ಸಂಪತ್ತು ಗಳಿಕೆಗೆ ಅಧಿಕಾರವೇ ಹೆದ್ದಾರಿ ಮತ್ತು ಅದನ್ನು ಯಾವ ಯುದ್ಧ ಗೆದ್ದಾದರೂ ಪಡೆಯಲೇಬೇಕು ಎನ್ನುವುದಕ್ಕೆ ಅಂದು ಆಳುತ್ತಿದ್ದ ಬ್ರಿಟೀಷರೇ ಜೀವಂತ ಉದಾಹರಣೆಯಾಗಿದ್ದರು. ಅಧಿಕಾರದ ಪರಿಕಲ್ಪನೆಯ ಅರ್ಥ ವ್ಯಾಪ್ತಿಯನ್ನು ವಿಸ್ತರಿಸಿದ ಗಾಂಧಿ ಅದೊಂದು ದೊಡ್ಡ ಉತ್ತರದಾಯಿತ್ವ ಎಂದು ವ್ಯಾಖ್ಯಾನಿಸಿದರು. ಗಾಂಧಿಯವರ ಚಿಂತನೆಯ ಪ್ರಕಾರ ಅಧಿಕಾರ ಎನ್ನುವುದು ಸಮುದಾಯದಲ್ಲಿ ಜನರು ಬದುಕು ಕಟ್ಟಿಕೊಳ್ಳುವುದಕ್ಕೆ ಇರುವ ಪರಸ್ಪರ ಸ್ನೇಹ, ಸಹಕಾರ ಗೌರವಗಳಿರುವ ದೂರದೃಷ್ಟಿಯ ಜವಾಬ್ದಾರಿಯುತ ನಾಯಕತ್ವದ ವಿನ್ಯಾಸ ಅಥವಾ ವ್ಯವಸ್ಥೆ. ಈ ವಿನ್ಯಾಸದಲ್ಲಿ ಇರುವ ಅಧಿಕಾರಿ ವರ್ಗಕ್ಕೆ, ಆಳಿಸಿಕೊಳ್ಳುವವರಿಗೆ ಎಲ್ಲರಿಗೂ ಅವರದೇ ಆದ ರೀತಿಯ ಅಧಿಕಾರವಿರುತ್ತದೆ. ಅಂದರೆ ಯಾವ ನಿರೀಕ್ಷೆಗಳನ್ನು ಹುಟ್ಟಿಸಿ, ಭರವಸೆಗಳನ್ನು ನೀಡಿ, ಅವಕಾಶ ಪಡೆಯುತ್ತಾರೋ ಅದಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು ಅಧಿಕಾರದ ಅವಕಾಶ ಪಡೆದವರ ನೈತಿಕ ಜವಾಬ್ದಾರಿ. ಸಾರ್ವಜನಿಕರು ನೆಮ್ಮದಿಯ ಜೀವನ ನಡೆಸುವಂತೆ ಕೆಲಸ ನಿರ್ವಹಿಸುವುದೂ ಒಂದು ರೀತಿಯ ಅಧಿಕಾರ. ಇನ್ನು ಅಧಿಕಾರ ನಡೆಸುವ ಅವಕಾಶವನ್ನು ನಾಯಕರ ಹೆಗಲಿಗೆ ಹೊರಿಸಿದ ಜನರಿಗೂ ಅಧಿಕಾರವಿದೆ. ಜನನಾಯಕರು ಜನರನ್ನು ಭ್ರಮನಿರಸನಗೊಳಿಸಿದರೆ ಅಧಿಕಾರಸ್ಥಾರ ಕಿವಿ ಹಿಂಡುವ ಮತ್ತು ಅವಕಾಶವನ್ನು ಹಿಂಪಡೆಯುವುದೂ ಪ್ರಜೆಗಳಿಗಿರುವ ಅಧಿಕಾರವೇ. ಅಧಿಕಾರ ಎನ್ನುವುದು ಒಂದೇ ಕಡೆ ಇರದೇ ಸಮಾಜದ ಸಮಸ್ತರಲ್ಲೂ ಅಂತರ್ಗತವಾಗಿರುತ್ತದೆ ಎನ್ನುವ ಸೂಕ್ಷ್ಮ ನಾಗರಿಕ ಸಮಾಜಕ್ಕೆ ತಿಳಿದಿರಬೇಕು. ಇಡೀ ವ್ಯವಸ್ಥೆ ಸಶಕ್ತವಾಗಿ ಕೆಲಸಮಾಡುವ ಮೂಲಕ ಸಂಪತ್ತನ್ನು ಸೃಷ್ಟಿಸುತ್ತಾ (ಅರ್ಥ, ಹಣ, ವಸ್ತು ಸೇವೆ) ಜೀವನ ನಿರ್ವಹಣೆಯನ್ನು ಉತ್ತಮ ರೀತಿಯಿಂದ ಮಾಡುವುದೇ ಹೊಸ ವ್ಯವಸ್ಥೆಯ ಅಂತಿಮ ಉದ್ದೇಶ.
ಭಾರತೀಯ ಚಿಂತನಾ ಪರಂಪರೆಯಲ್ಲಿ ಮೋಕ್ಷವೆಂದರೆ ಪ್ರಾಪಂಚಿಕವಾದ ಎಲ್ಲಾ ವಿಚಾರಗಳಿಂದ ಹಿಂದೆ ಸರಿದು ಏಕಾಂತದಲ್ಲಿ ಧ್ಯಾನ, ತಪಸ್ಸು ಕೈಗೊಳ್ಳುವ ಮೂಲಕ ಮುಂದಿನ ಭವದಲ್ಲಿ ಸೌಖ್ಯ, ಯಾ ಸ್ವರ್ಗ ಪಡೆಯುವುದು ಎನ್ನುವ ತಿಳುವಳಿಕೆ ಇತ್ತು. ಮೋಕ್ಷದ ಹಾದಿಯು ವೈರಾಗ್ಯ, ವಿರಕ್ತಿಯಿಂದ ಕೂಡಿದೆ ಎಂದು ತಿಳಿಯಲಾಗಿತ್ತು. ಆದರೆ ಗಾಂಧೀಜಿಯವರು ಪರಿಚಯಿಸಿದ ಮೋಕ್ಷದ ವ್ಯಾಖ್ಯಾನ ಇದಕ್ಕಿಂತ ಭಿನ್ನವಾದುದು. ನಾವು ತ್ಯಜಿಸಬೇಕಾದದ್ದು ದಿನ ನಿತ್ಯದ ವ್ಯವಹಾರವನ್ನಲ್ಲ, ಬದಲಿಗೆ ಅದರೊಳಗಿರುವ ಕೆಲವು ಮಿತಿಗಳನ್ನು. ಅಂದರೆ ನಮ್ಮೊಳಗೆ ಇರುವ ಅಹಂಕಾರವನ್ನು, ದುಷ್ಟತನವನ್ನು, ಸ್ವಾರ್ಥವನ್ನು, ಅಸೂಯೆಯನ್ನು. ನಮ್ಮ ದಿನ ನಿತ್ಯದ ಜೀವನದಲ್ಲಿ ವ್ಯಾಮೋಹ ಬಿಟ್ಟು ಸ್ಥಿತಪ್ರಜ್ಞತೆಯನ್ನು ಬೆಳೆಸಿಕೊಂಡು ವ್ಯವಹರಿಸಿದರೆ, ಸತ್ಯವನ್ನೇ ದೇವರು ಎಂದು ತಿಳಿದು ಅದರಂತೆ ಬದುಕಲು ಅನುವಾದರೆ ನಾವು ನಮ್ಮನ್ನು ಮತ್ತು ನಮ್ಮ ಎದುರಿಗಿರುವವರನ್ನು ಗೆಲ್ಲಲು ಸಾಧ್ಯ ಎನ್ನುವುದು ಅವರ ಅಭಿಪ್ರಾಯವಾಗಿತ್ತು.
ಭೌಗೋಳಿಕವಾಗಿ ವಿಶಾಲವೂ, ಸಾಂಸ್ಕೃತಿಕವಾಗಿ ವೈವಿಧ್ಯಮಯವೂ ಆದ ಭಾರತವನ್ನು ಅರ್ಥ ಮಾಡಿಕೊಳ್ಳುವುದೂ ಒಂದು ಸವಾಲಿನ ಸಂಗತಿಯೇ. ಭಾರತೀಯ ಉಪಖಂಡದಲ್ಲಿ ಇರುವ ಎಲ್ಲಾ ಜಾತಿ, ಧರ್ಮ, ಭಾಷೆಗಳನ್ನು ಒಳಗೊಂಡಂತೆ ಬಹುತ್ವವನ್ನು ಒಪ್ಪಿಕೊಂಡು ಪರಸ್ಪರ, ಸಹನೆ, ಗೌರವದಿಂದ ಬದುಕುವುದೇ ನಿಜವಾದ ಭಾರತೀಯತೆ. ಗಾಂಧೀಜಿಯವರು ಭಾರತೀಯ ಪರಂಪರೆಯನ್ನು ವರ್ತಮಾನದ ಸವಾಲು ಸ್ವೀಕರಿಸಲು ಅರ್ಥೈಸಿದ ಮತ್ತು ಅನ್ವಯಿಸಿದ ಹಿನ್ನೆಲೆಯಲ್ಲಿ ನಮ್ಮ ದೇಶದ ಸಂವಿಧಾನ ರಚನೆಯಾಗಿ ಎಲ್ಲ ಮಿತಿಗಳ ನಡುವೆಯೂ ಬಹುಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಬಂದಿದೆ.
ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳನ್ನು ಸಮಾಜಮುಖಿಯಾಗಿ ಮರುನಿರೂಪಿಸಿ, ವರ್ತಮಾನದ ಸವಾಲುಗಳಿಗೆ ತಮ್ಮ ಬದುಕಿನ ಮೂಲಕವೇ ಉತ್ತರ ನೀಡಿದವರು ಗಾಂಧೀ. ಯಾವುದೇ ಬೆಂಗಾವಲಿಲ್ಲದೆ ಕೋಮು ದಳ್ಳುರಿಯ ಕೆನ್ನಾಲಿಗೆಯ ನಡುವಲ್ಲೂ ಧೃಡವಾಗಿ ಚಿತ್ತರಾಗಿ ನಡೆದವರು. ಆ ಶಕ್ತಿ ಯಾವ ಜಾತಿ, ಸಂಪತ್ತು, ಅನುಯಾಯಿಗಳ ಬಳುವಳಿಯಾಗಿರಲಿಲ್ಲ. ಅದು ಸನಾತನ ಸಂಸ್ಕೃತಿಯ ತಿಳುವಳಿಕೆ, ವಿಚಾರಗಳಿಂದ ಪ್ರೇರಿತವಾದ ಆಚಾರದಿಂದ ದತ್ತವಾದದ್ದು. ಇದನ್ನು ಪಾಲಿಸುವ ನಾಯಕ ನಮ್ಮ ನಡುವೆ ಎದ್ದು ಬಂದರೆ ರಾಮ ರಾಜ್ಯ ಬಹಳ ದೂರವೇನಲ್ಲ.
ಉದಯ ಕುಮಾರ್ ಇರ್ವತ್ತೂರು
ವಿಶ್ರಾಂತ ಪ್ರಾಂಶುಪಾಲರು
ಇದನ್ನೂ ಓದಿ-ಬಿಜೆಪಿಗೆ ರಾಷ್ಟ್ರಧ್ವಜಕ್ಕಿಂತ ಭಗವಾಧ್ವಜವೇ ಮುಖ್ಯವಾಯಿತೆ?