ಯಾವ ಜಾತಿಯ ಜನರಿಗೂ ಅನ್ಯಾಯವಾಗದ ಹಾಗೆ ಜಾತಿ ಗಣತಿ ಜಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Most read

ಬೆಳಗಾವಿ: ಮುಸಲ್ಮಾನರಿಗೆ, ಹಿಂದುಳಿದವರಿಗೆ ಮಾತ್ರವಲ್ಲದೆ , ಎಲ್ಲಾ ಧರ್ಮದ, ಎಲ್ಲಾ ಜಾತಿಯ ಬಡವರಿಗೆ ಶಿಕ್ಷಣ ಸಿಗಬೇಕು. ಸಾಮಾಜಿಕ ಆರ್ಥಿಕ ಶಕ್ತಿ ತುಂಬಬೇಕು. ಇದೇ ನಮ್ಮ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಅವರು ಬೆಳಗಾವಿ ಸಾಂಭ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಮೂಲ ಪ್ರತಿ ಮುಖ್ಯಮಂತ್ರಿಗಳ ಬಳಿಯಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಆಶೋಕ್ ಅವರು ಯಾವತ್ತಾದರೂ ಸತ್ಯವನ್ನು ಹೇಳಿದ್ದಾರೆಯೇ? ಅವರು ಸುಳ್ಳೇ ಹೇಳುವುದು. ಮೂಲ ಪ್ರತಿ ನನ್ನ ಬಳಿಯಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ರಾಹುಲ್ ಗಾಂಧಿಯವರಿಗೆ ನಾವು ಪತ್ರ ಬರೆದಿಲ್ಲ ಆದರೆ ಅವರೊಂದಿಗೆ ಚರ್ಚೆ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆಯ ವರದಿಯನ್ನು ಮಂಡಿಸಿದ್ದೇವೆ ಎಂದರು.
ಜಾತಿಗಣತಿ: ಸಚಿವರ ಅಭಿಪ್ರಾಯದ ನಂತರ ಅಂತಿಮ ತೀರ್ಮಾನ:
ಕಾಂಗ್ರೆಸ್ ಶಾಸಕರೇ ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಸಚಿವ ಸಂಪುಟ ಸಭೆಯಲ್ಲಿ ಯಾರೂ ಈ ಬಗ್ಗೆ ವಿರೋಧ ವ್ಯಕ್ತಪಡಿಸಿ ಯಾರೂ ಜೋರಾಗಿ ಮಾತನಾಡಿಲ್ಲ. ಸಮೀಕ್ಷೆಯನ್ನು ಓದಿಕೊಂಡು ಅಭಿಪ್ರಾಯಗಳನ್ನು ತಿಳಿಸುವಂತೆ ಸೂಚಿಸಲಾಗಿದ್ದು ಸಚಿವರು ಅಭಿಪ್ರಾಯ ತಿಳಿಸಿದ ನಂತರ ಪುನ: ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದರು.
ಯಾವ ಜಾತಿಗೂ ಅನ್ಯಾಯವಾಗಬಾರದು:
ಯಾವ ಜಾತಿಗೂ ಅನ್ಯಾಯವಾಗಬಾರದು ಎನ್ನುವುದು ಸರ್ಕಾರದ ಉದ್ದೇಶ. ಇದು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ. ಸಂವಿಧಾನ ಜಾರಿಯಾಗಿ 75 ವರ್ಷಗಳಾಗಿದ್ದರೂ ಬಡವ ಬಡವನಾಗಿಯೇ ಉಳಿಯಬೇಕೆ? ಸಮಾನತೆ ಬೇಡವೇ, ಜಾತಿಗೆ ಅಂಟಿಕೊಂಡೇ ಇರಬೇಕೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

More articles

Latest article