ದ್ವೇಷ ಭಾಷಣ: ಆರ್.ಅಶೋಕ್‌, ವಿಜಯೇಂದ್ರ ವಿರುದ್ಧ ಕಾಂಗ್ರೆಸ್‌ ವಕ್ತಾರ ಸೂರ್ಯ ಮುಕುಂದರಾಜ್‌ ದೂರು

Most read

ಬೆಂಗಳೂರು: ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಜನಾಕ್ರೋಶ ಯಾತ್ರೆಯಲ್ಲಿ ದ್ವೇಷ ಭಾಷಣ ಮಾಡಿರುವ ಆರೋಪದಡಿಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಕಾಂಗ್ರೆಸ್ ವಕ್ತಾರ ಎಲ್. ಸೂರ್ಯ ಮುಕುಂದರಾಜ್ ಪತ್ರ ಬರೆದಿದ್ದಾರೆ.

ಆರ್ ಅಶೋಕ್ ಅವರು ತಮ್ಮ ಭಾಷಣದಲ್ಲಿ “ಮುಸ್ಲಿಮರನ್ನು ಓಲೈಸುವ ಬರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಎಲ್ಲ ಜಾತಿಗಳನ್ನು ಒಡೆದು ಹಾಕಿದ್ದಾರೆ. ಕರ್ನಾಟಕದಲ್ಲಿ ಮುಸಲ್ಮಾನರನ್ನು ನಂಬರ್ ಒನ್ ಮಾಡಲು ವಿದೇಶಿ ಕೈವಾಡವಿರುವ ಬಗ್ಗೆ ಅನುಮಾನವಿದೆ ಭಾರತವನ್ನು ಪಾಕಿಸ್ತಾನ ಮಾಡುತ್ತೇವೆ ಎಂದು ಕೆಲವು ಭಯೋತ್ಪಾದಕರು ಪತ್ರದಲ್ಲಿ ಬರೆದು ಹಂಚಿದ್ದಾರೆ” ಎಂದು ಹೇಳಿರುತ್ತಾರೆ.

‘ವಿಜಯೇಂದ್ರ ಅವರು ವಿದೇಶಕ್ಕೆ ಶಿಕ್ಷಣಕ್ಕಾಗಿ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ ರೂ.30 ಲಕ್ಷ ನೆರವು ಹಿಂದೂ ವಿದ್ಯಾರ್ಥಿಗಳಿಗೆ ಏಕಿಲ್ಲ? ಎಂದು ಹೇಳುವ ಮೂಲಕ ಧರ್ಮಗಳ ನಡುವೆ ದ್ವೇಷ ಮೂಡಿಸುವ ಹೇಳಿಕೆ ನೀಡಿದ್ದಾರೆ.

ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ದೇಶದ ಎಲ್ಲಾ ರಾಜ್ಯಗಳ ಪೊಲೀಸರಿಗೆ ದ್ವೇಷ ಭಾಷಣ ಮಾಡಿದವರ ವಿರುದ್ಧ ತಡೆಮಾಡದೆ, ದೂರುದಾರರಿಗೆ ಕಾಯದೆ ತಕ್ಷಣ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ ಆದೇಶದಂತೆ ಬೆಳಗಾವಿಯಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ದ್ವೇಷ ಭಾಷಣ ಮಾಡಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಸಂಬಂಧಿಸಿದ ಠಾಣೆಯ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಸೂರ್ಯ ಮುಕುಂದರಾಜ್‌ಕೋರಿದ್ದಾರೆ.

More articles

Latest article