ಚೆನ್ನೈ: ರಾಷ್ಟ್ರಪತಿಗಳಿಗೆ ಕಾಲಮಿತಿ ನಿಗದಿಪಡಿಸಿದ ಸುಪ್ರಿಂ ಕೋರ್ಟ್ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಕಾರ್ಯವೈಖರಿಯನ್ನು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಕಟುವಾಗಿ ಟೀಕಿಸಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಟೀಕಿಸುವುದು ಅನೈತಿಕ ಎಂದೂ ಹೇಳಿದೆ.
ಸಂವಿಧಾನದ ಅಧಿಕಾರ ಹಂಚಿಕೆಯಡಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗವು ವಿಭಿನ್ನ ಅಧಿಕಾರಗಳನ್ನು ಹೊಂದಿವೆ ಎಂದು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯಸಭಾ ಸದಸ್ಯ ತಿರುಚಿ ಶಿವ ಪ್ರತಿಕ್ರಿಯೆ ನೀಡಿದ್ದಾರೆ. ಮೂರೂ ಅಂಗಗಳು ತಮ್ಮದೇ ಆದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವಾಗ ಸಂವಿಧಾನವು ಸರ್ವೋಚ್ಚ ಎನ್ನುವುದನ್ನು ಮರೆಯಬಾರದು. ಸಂವಿಧಾನದ 142ನೇ ವಿಧಿಯಡಿ ಇರುವ ಅಧಿಕಾರ ಚಲಾಯಿಸುವ ಮೂಲಕ ಸುಪ್ರೀಂ ಕೋರ್ಟ್, ಯಾವುದೇ ವ್ಯಕ್ತಿ ಸಾಂವಿಧಾನಿಕ ಅಧಿಕಾರದ ಹೆಸರಿನಲ್ಲಿ ಶಾಸಕಾಂಗವು ಅಂಗೀಕರಿಸಿದ ಮಸೂದೆಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಸ್ಥಾಪಿಸಿದೆ ಎಂದು ಅವರು ಎಕ್ಸ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಅಭಿಪ್ರಾಯಗಳು ಅನೈತಿಕವಾಗಿದ್ದು, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನಿನ ನಿಯಮವೇ ಮೇಲು ಎಂದು ಪ್ರತಿಯೊಬ್ಬ ನಾಗರಿಕನೂ ಅರಿತುಕೊಂಡಿರಬೇಕು ಎಂದು ಹೇಳಿದ್ದಾರೆ.
ಜಗದೀಫ್ ಧನಕರ್ ಹೇಳಿದ್ದೇನು?
ರಾಜ್ಯಪಾಲರು ಪರಿಗಣನೆಗಾಗಿ ಕಳುಹಿಸುವ ಮಸೂದೆಗಳನ್ನು ನಿರ್ದಿಷ್ಟ ಅವಧಿದೊಳಗೆ ಇತ್ಯರ್ಥಗೊಳಿಸಬೇಕು ಎಂದು ರಾಷ್ಟ್ರಪತಿಗಳಿಗೆ ನಿರ್ದೇಶಿಸುವ ಸುಪ್ರೀಂಕೋರ್ಟ್ ಆದೇಶವನ್ನು ತೀವ್ರವಾಗಿ ಟೀಕಿಸಿದ್ದರು. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದ್ದು, ಕಾರ್ಯಾಂಗಕ್ಕೆ ನ್ಯಾಯಾಧೀಶರು “ಸೂಪರ್ ಪಾರ್ಲಿಮೆಂಟ್” ಆಗಿ ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವವಾಗಿ ಭಾರತ ಎಂದಿಗೂ ಆಗಬಾರದು ಎಂದು ಹೇಳಿದ್ದರು.
“ಇತ್ತೀಚಿನ ತೀರ್ಪಿನ ಮೂಲಕ ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲಾಗುತ್ತಿದೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ? ದೇಶದಲ್ಲಿ ಏನಾಗುತ್ತಿದೆ?” ಎಂದು ಅವರು ರಾಜ್ಯಸಭಾ ಇಂಟರ್ನ್‌ಗಳ ಗುಂಪನ್ನು ಉದ್ದೇಶಿಸಿ ಕೇಳಿದ್ದರು.
ಕಳೆದ ವಾರ, ಸಂವಿಧಾನದ 201 ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಾಯ್ದಿರಿಸಿದಾಗ, ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ತಮಿಳುನಾಡು ರಾಜ್ಯಪಾಲರ ದೀರ್ಘಕಾಲದ ನಿಷ್ಕ್ರಿಯತೆ ಮತ್ತು ರಾಜ್ಯದ ಮಸೂದೆಗಳಿಗೆ ಒಪ್ಪಿಗೆಯನ್ನು ತಡೆಹಿಡಿಯುವುದನ್ನು ಟೀಕಿಸಿದ ತೀರ್ಪಿನ ಭಾಗವಾಗಿ ಈ ಆದೇಶ ನೀಡಲಾಗಿತ್ತು.
ರಾಷ್ಟ್ರಪತಿಗಳಿಗೆ ಕಾಲಮಿತಿ ನಿಗದಿ ಮಾಡಿರುವ ಕ್ರಮವನ್ನು, ಸಂಸತ್ತಿಗೂ ಮಿಗಿಲಾಗಿರುವ ವರ್ತನೆಯಾಗಿದೆ. ಪ್ರಜಾತಾಂತ್ರಿಕ ಶಕ್ತಿಗಳನ್ನು ಗುರಿಯಾಗಿಸಿಕೊಂಡು ಸುಪ್ರೀಂ ಕೋರ್ಟ್ ‘ಅಣ್ವಸ್ತ್ರ ಕ್ಷಿಪಣಿ’ ಪ್ರಯೋಗಿಸುವಂತಿಲ್ಲ’ ಎಂದು ಧನಕರ್ ಹೇಳಿದ್ದರು.