ಸೋಷಿಯಲ್ ಮೀಡಿಯಾ ತನ್ನದೇ ಆದ ಮಿತಿಗಳನ್ನೂ ಹೊಂದಿದೆ. ಸಾಮಾಜಿಕ ಮಾಧ್ಯಮಗಳನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅವು ಅನೇಕ ಅನುಕೂಲಗಳನ್ನು ನೀಡುತ್ತವೆ. ಆದರೆ, ಅವುಗಳ ಅತಿಯಾದ ಮತ್ತು ಅವ್ಯವಸ್ಥಿತ ಬಳಕೆ ಅಪಾಯಕಾರಿ. ಆದ್ದರಿಂದ, ಜಾಣ್ಮೆಯಿಂದ ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಅಭ್ಯಾಸ ಅಗತ್ಯವಾಗಿದೆ- ಶ್ರವಂತಿ ಆರ್, ಆನೇಕಲ್, ಪತ್ರಿಕೋದ್ಯಮ ವಿದ್ಯಾರ್ಥಿನಿ.
ಹಿಂದೆಲ್ಲಾ ಮಾಹಿತಿಗಾಗಿ, ಹುಡುಕಾಟಕ್ಕಾಗಿ ಹರಸಾಹಸ ಪಡಬೇಕಿತ್ತು. ಸುಮಾರು ಹತ್ತಿಪ್ಪತ್ತು ವರ್ಷಗಳಲ್ಲಿ ಜಾಗತಿಕವಾಗಿ ಮಹತ್ವದ ಬದಲಾವಣೆಯಾಗಿದೆ. ಎಲ್ಲವನ್ನೂ ಸೋಷಿಯಲ್ ಮೀಡಿಯಾ ಹಾಗೂ ತಾಂತ್ರೀಕರಣ ಆವರಿಸಿಕೊಂಡಾಗಿದೆ. ನಿಧಾನಗತಿ, ಅಡೆತಡೆಗಳನ್ನು ತಳ್ಳಿಹಾಕಿ, ಕೆಲಸ ಕಾರ್ಯಗಳನ್ನು ಸುಲಭಗೊಳಿಸಿಬಿಟ್ಟಿದೆ. ಸೋಷಿಯಲ್ ಮೀಡಿಯಾ ಬಳಸದ ಜನರನ್ನು; ಸಾಮಾಜಿಕ ಮಾಧ್ಯಮಗಳಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದೂ ಕಷ್ಟಸಾಧ್ಯ. ಪ್ರಸ್ತುತ ಜಗತ್ತಿನಲ್ಲಿ ಇವುಗಳೊಂದಿಗೆ ತಂತ್ರಜ್ಞಾನದ ಬಳಕೆ ಹಾಗೂ ಅವಲಂಬನೆ ಹೆಚ್ಚಾಗುತ್ತಲಿದೆ.
ಸಾಮಾಜಿಕ ಮಾಧ್ಯಮಗಳನ್ನು ಮನುಷ್ಯರು ನಡೆಸುವರೋ ಅಥವಾ ಸಾಮಾಜಿಕ ಮಾಧ್ಯಮಗಳೇ ಮನುಷ್ಯರನ್ನು ನಡೆಸುತ್ತಿದ್ದಾವೋ ಎನ್ನುವ ಅನುಮಾನ ಕಾಡುತ್ತದೆ. ಮನುಷ್ಯನು ತನಗೆ ಹೆಚ್ಚು ದಿನ ಉಪಯುಕ್ತತೆ ಅಥವಾ ಯುಟಿಲಿಟಿಯಿಲ್ಲದೇ ಇರುವ ಯಾವುದನ್ನೂ ಇಟ್ಟುಕೊಳ್ಳುವುದಿಲ್ಲ. ಹಾಗಿದ್ದ ಮೇಲೆ, ಈ ಪರಿ ಅವಲಂಬಿತವಾಗಲು ಹೇಗೆ ಇವು ಪ್ರಯೋಜನಕಾರಿಯಾಗಿವೆ ಎಂಬ ನಿಟ್ಟಿನಲ್ಲಿ ಜಾಗತಿಕ ಸಂಪರ್ಕಕ್ಕೆ ಅವಕಾಶ ಕಲ್ಪಿಸುವ ಪ್ಲಾಟ್ ಫಾರ್ಮ್ ಗಳಾದ ಫೇಸ್ ಬುಕ್, ಟ್ವಿಟರ್ ಯೂಟ್ಯೂಬ್‌ಗಳಿಂದಾದ ಪ್ರಯೋಜನಗಳನ್ನು ಗಮನಿಸುವುದೇ ಈ ಲೇಖನದ ಉದ್ದೇಶ.
ಮನುಷ್ಯರ ದೈನಂದಿನ ಬದುಕಿನಲ್ಲಿ ಒಂದು ಅಂಶವಾಗಿರುವ ಸಾಮಾಜಿಕ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳು ಕಲ್ಪಿಸಿಕೊಟ್ಟ ವೇದಿಕೆಗಳು ಜನರ ಮಧ್ಯೆ ಸಂವಹನ, ಮಾಹಿತಿ ಹಂಚಿಕೆ, ಅಷ್ಟೇ ಅಲ್ಲದೆ ಸಾಮಾಜಿಕ ಒಗ್ಗೂಡುವಿಕೆಗೆ ಕಾರಣವಾಗಿವೆ. ನಂಟಿಲ್ಲದವರನ್ನು ಜೊತೆಗೂಡಿಸುವ ನಾಲೆಯಾಗಿ ಕೆಲಸ ಮಾಡುತ್ತಲಿರುವ; ಸಾಮಾಜಿಕ ಸಂಬಂಧವನ್ನು ಬೆಸೆಯುತ್ತಲಿರುವ ಈ ಸಾಮಾಜಿಕ ಮಾಧ್ಯಮಗಳ ಪ್ರಯೋಜನದ ಮಧ್ಯೆ ಅಪಾಯಗಳನ್ನೂ ಮೀರಿಕೊಂಡು ಎಷ್ಟರ ಮಟ್ಟಿಗೆ ಜಗತ್ತನ್ನ ಆವರಿಸಿಕೊಂಡಿದೆ ಎಂದು ತಿಳಿದುಕೊಳ್ಳುವುದು ಅತಿಮುಖ್ಯ.
ಹೆಚ್ಚು ಹೆಚ್ಚು ಜನರನ್ನು ತಲುಪಲು, ಕಳೆದು ಹೋದ ವ್ಯಕ್ತಿ ಸಂಬಂಧಗಳನ್ನು ಪುನಃ ಗಳಿಸಿಕೊಳ್ಳಲು, ವಿಚಾರ ಸಂದೇಶಗಳನ್ನು ಕ್ಷಣ ಮಾತ್ರದಲ್ಲಿ ರವಾನಿಸಲು ಇವು ಸಹಕಾರಿಯಾಗಿವೆ. ಅಭಿಪ್ರಾಯಗಳನ್ನು ಹಂಚಿಕೊಳ್ಳಲು, ವಿಷಯದ ಮೇಲೆ ಸಂವಾದ ನಡೆಸಲು, ಮನರಂಜನೆಗಾಗಿಯೂ ಇವುಗಳ ಬಳಕೆಯಾಗುತ್ತಿದೆ. ಅಷ್ಟೇ ಅಲ್ಲದೆ ಜನರನ್ನು ಸಂಘಟಿಸುವುದಕ್ಕೂ ಸಹಕಾರಿ. ಕೆಲವು ಸೂಕ್ಷ್ಮ ಮತ್ತು ಸಶಕ್ತ ಮಾಹಿತಿ, ಹೋರಾಟಗಳಿಗೂ ಇದೇ ಮಾಧ್ಯಮಗಳು ಸಾಥ್ ನೀಡಿವೆ. ಇದಕ್ಕೆ ಸಂಬಂಧಿಸಿದಂತೆ ಶಿಕ್ಷಣ, ಆರೋಗ್ಯ, ಉದ್ಯೋಗ, ಕಲೆ-ಸಾಹಿತ್ಯ, ಸಮಾಜ ಸೇವೆ, ಕೃಷಿ, ಆರ್ಥಿಕತೆ ಮತ್ತು ವ್ಯಾಪಾರ ಕ್ಷೇತ್ರಗಳನ್ನೊಳಗೊಂಡಂತೆ ಎಲ್ಲಕ್ಕೂ ಸೋಷಿಯಲ್ ಮೀಡಿಯಾ ಪ್ರಮುಖ ಪಾತ್ರವಹಿಸಿದೆ.
2000ನೇ ಇಸವಿಯಿಂದಾಚೆಗೆ ಎರಡು ದಶಕಗಳಿಂದ ಬಹುತೇಕ ಜನರು ಇದನ್ನು ಬಳಸಲು ಶುರುಮಾಡಿದರು. ಜನಜನಿತವಾದ ಸೋಷಿಯಲ್ ಮೀಡಿಯಾ 2015 ರ ಹೊತ್ತಿಗೆ ಜನರೇಷನ್ ಗೆ ತಕ್ಕಂತೆ ವಿಭಿನ್ನ ಸ್ವರೂಪ ತಾಳಿತು. ತನ್ಮೂಲಕ ಮನರಂಜನೆ ಹಾಗೂ ಕ್ರಿಯಾಶೀಲತೆಗೆ ತೆರೆದ ಅವಕಾಶ ನೀಡಿ, ಪ್ರವೃತ್ತಿಯಾಗಿ, ಔದ್ಯೋಗಿಕವಾಗಿ ಜನರು ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜಾಗತಿಕ ಮಾರುಕಟ್ಟೆ ಸ್ಥಾಪನೆಗೊಂಡಂತಾಗಿ, ಹಣಗಳಿಸಲು ಫೇಸ್ ಬುಕ್ ಪೇಜಸ್, ಯೂಟ್ಯೂಬ್, ಇನ್ಟಾಗ್ರಾಂ, ಲಿಂಕ್ಡ್ ಇನ್ ನಂತಹ ವೇದಿಕೆಗಳು ಹುಟ್ಟಿಕೊಂಡವು. ಇವುಗಳ ಆಕರ್ಷಕ ಫೀಚರ್ಸ್ ಮತ್ತು ಪ್ಯಾಕೇಜ್ ಗಳ ದಾಂಗುಳಿಯಿಂದಾಗಿ ಸೋಷಿಯಲ್ ಮೀಡಿಯಾಕ್ಕೆ ಜನಮೆಚ್ಚುಗೆ ಸಿಕ್ಕಿತು.
ತಮಗೆ ಪ್ರಿಯವಾದ ಹಾಗೂ ತೃಪ್ತಿದಾಯಕ ಅನುಭವ ನೀಡುವಲ್ಲಿ ಇದು ಕ್ರಮೇಣ ಜನ ಜೀವನದ ಅವಿಭಾಜ್ಯ ಅಂಗವಾಯಿತು. ಸುಲಭವಾಗಿ ಸಂದೇಶಗಳನ್ನು, ವೀಡಿಯೋ ಕರೆಗಳನ್ನು ಉಚಿತವಾಗಿ ಉಪಯೋಗಿಸಿಕೊಳ್ಳಲು ಅನುವು ಮಾಡಿದ್ದರಿಂದ ವೈಯಕ್ತಿಕ ಸ್ನೇಹ ಹಾಗೂ ಸಾಮಾಜಿಕ ಸಂಬಂಧಗಳನ್ನು ಬಲಪಡಿಸಿಕೊಳ್ಳಲು ಸಹಾಯ ಮಾಡಿತು. ಇದೇ ಸಂದರ್ಭದಲ್ಲಿ ಜ್ಞಾನ ಪ್ರಸಾರಕ್ಕೆ, ಪ್ರಸ್ತುತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಲು, ಸುದ್ದಿ ಸಮಾಚಾರ, ಶೈಕ್ಷಣಿಕ ವಿಷಯಗಳು ಹಾಗೂ ಕೌಶಲ್ಯಗಳನ್ನು ಕಲಿಯಲು ಸಹ ಉಪಯುಕ್ತ ಸಾಧನವಾಯ್ತು. ದಿನದಿಂದ ದಿನಕ್ಕೆ ಪರ್ಸನಲೈಸ್ ಮಾಡಿಕೊಳ್ಳುತ್ತಾ ಇದರಲ್ಲೇ ಜೀವನೋಪಾಯದ ಮಾರ್ಗಗಳೂ ಕಂಡವು.
ಜನರ ಸ್ವಂತಿಕೆಗೆ ಹೇರಳವಾದ ಅವಕಾಶ ಲಭ್ಯವಾಗಿದ್ದು, ಇಲ್ಲಿ ಸಿಕ್ಕಿದ ಸ್ಯ್ಟಾಂಡ್, ಪಾಪ್ಯುಲಾರಿಟಿ ಅಥವಾ ಜನಮನ್ನಣೆ ಕಡಿಮೆಯದಲ್ಲ. ತಮ್ಮಲ್ಲಿರುವ ಪ್ರತಿಭೆಯನ್ನು ಆಸಕ್ತಿಯ ವಿಷಯಗಳಲ್ಲಿ ತೊಡಗಿಸಿಕೊಂಡು, ಸಣ್ಣ ಮಟ್ಟದಲ್ಲಿ ಆರಂಭಿಸಿ ಸ್ಟಾರ್ಟಪ್ ಗಳಾಗಿ ನಂತರ ಸ್ಟಾರ್ ಗಿರಿ ಪಡೆದ ಎಷ್ಟೋ ಮಂದಿ ಇತರರಿಗೂ ಸ್ಪೂರ್ತಿ ನೀಡಿದ್ದಾರೆ. ತಮ್ಮ ಉತ್ಪನ್ನಗಳು, ಸೇವೆಗಳಿಂದ ಗಮನ ಸೆಳೆದು ಬ್ರಾಂಡ್ ಕ್ರಿಯೇಟ್ ಮಾಡಿಕೊಂಡು ಮಾರ್ಕೆಟಿಂಗ್ ತಂತ್ರಗಳ ಮೂಲಕ ದುಡ್ಡು ಸಂಪಾದನೆ ಜೊತೆಗೆ ವ್ಯಾಪಕ ಶ್ರೇಣಿಯ ಗ್ರಾಹಕರ ಚಿತ್ತಗೈಯ್ಯಲು ಇದೇ ಸಾಮಾಜಿಕ ಮಾಧ್ಯಮಗಳು ನೆರವಾಗಿವೆ.
ಹಾಸ್ಯದ ವಿಡಿಯೋಗಳು, ಸಂಗೀತ, ಕಲೆ ಮತ್ತು ಇತರ ರೀತಿಯ ವಿಷಯಗಳು ಲಕ್ಷಾಂತರ ಜನರನ್ನು ತಲುಪುತ್ತವೆ. ಇದು ಸೃಜನಶೀಲತೆಯನ್ನು ವ್ಯಕ್ತಪಡಿಸಲು ಮತ್ತು ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಜನರು ತಮ್ಮ ಕಲೆ, ಬರವಣಿಗೆ, ಅಡುಗೆ, ನೃತ್ಯ, ಛಾಯಾಗ್ರಹಣ, ಸಾಹಸ ಮತ್ತು ಇತರ ಪ್ರತಿಭೆಗಳನ್ನು ಜಗತ್ತಿಗೆ ತೋರಿಸಲು ಮತ್ತು ಇತರರಿಂದ ಪ್ರಶಂಸೆಯನ್ನು ಪಡೆಯಲು ಅನುವಾಯಿತು. ಬಹುಮುಖಿಯಾಗಿ, ನಿರಂತರವಾಗಿ ವಿಕಸನಗೊಳ್ಳುತ್ತಿರುವ ಸಾಮಾಜಿಕ ಮಾಧ್ಯಮವು ಕ್ರಿಯಾತ್ಮಕ, ವೃತ್ತಿಪರ ಬೆಳವಣಿಗೆಯ ಜೊತೆ ಸಾಮಾಜಿಕ ನಡೆಗೂ ಸಾಥಿಯಾಯಿತು .
ಹೆಚ್ಚಿನ ಸಂಖ್ಯೆಯಲ್ಲಿ ಇದರಿಂದಾದ ಒಳಿತನ್ನು ಜನರು ತಾವಾಗೇ ಲೈವ್ ಬಂದು ಕೂಡ ಮಾತನಾಡಿರುವುದಿದೆ. ತಮಗನಿಸಿದ್ದನ್ನು ನೇರಪ್ರಸಾರದಲ್ಲಿ ಹೇಳಿಕೊಂಡು ಶೇರ್ ಮಾಡಿಕೊಳ್ಳಬಹುದಾಗಿದೆ. ಒಬ್ಬರಿಂದ ಮತ್ತೊಬ್ಬರು ಹಲವಾರು ವಿಷಯಗಳಿಗೆ ಸಂಬಂಧಿಸಿ ಉತ್ತೇಜನ ಪಡೆದದ್ದಿದೆ, ಕಷ್ಟಗಳಿಗೆ, ಕಲಿಕೆಗೆ ಇತ್ಯಾದಿಗಳಿಗೆ ಸಹಾಯವನ್ನೂ ಮಾಡಿರುವ ನಿದರ್ಶನಗಳಿವೆ. ರೈತರ ವ್ಯವಸಾಯ, ಬೆಳೆ ಪದ್ಧತಿ, ಸಾಮಾಜಿಕ ಅರಿವು ಮೂಡಿಸುವಂಥ ಕೆಲಸಗಳು, ನಿಯೋಜನೆಗಳು, ಚಿತ್ರಕಲೆಗಳು, ಕ್ರಿಯೇಟಿವ್ ಕಂಟೆಂಟ್ಸ್, ವೀಡಿಯೋಸ್ ಸೇರಿದಂತೆ ಒಡಮೂಡುವ ಪರಿಕಲ್ಪನೆಗಳಿಗೆ ಇಲ್ಲಿ ಸ್ಥಾನಮಾನ ನೀಡಲಾಗಿದೆ.
ಆರೋಗ್ಯ ಮನುಷ್ಯರ ಜೀವನಕ್ಕೆ ಅತ್ಯವಶ್ಯಕವಾದ್ದು. ಇದಕ್ಕೆ ಪೂರಕವಾದ ಯೋಜನೆಗಳು, ಉಚಿತ ತಪಾಸಣೆ, ಇನ್ನಿತರ ಮಾಹಿತಿ ಕುರಿತು ಶೇರ್ ಮಾಡಿದರೆ ಎಲ್ಲರಿಗೂ ಮಾಹಿತಿ ತಿಳಿಯುವುದಲ್ಲದೇ ಜನರನ್ನು ಸಂಪರ್ಕಿಸಿಕೊಳ್ಳುವುದು ಸುಲಭವಾಗಿದೆ. ಹೆಚ್ಚು ಹೆಚ್ಚು ಜನಪರ ಸಂದೇಶಗಳು, ಕಾರ್ಯಕ್ರಮಗಳ ಪ್ರಾಯೋಜನೆಗೆ ಇಲ್ಲಿ ಅವಕಾಶ ನೀಡಲಾಗಿದೆ. ಯಾವುದೇ ಅಪಘಾತ ಅಥವಾ ತುರ್ತು ಪರಿಸ್ಥಿತಿ ಸಂದರ್ಭಗಳಿದ್ದಾಗ, ಜಾಗೃತಿ ಅಭಿಯಾನಗಳು, ರಕ್ತದಾನ ಶಿಬಿರಗಳು, ಪರಿಸರಕ್ಕೆ ಸಂಬಂಧಪಟ್ಟ ಜಾಥಾ ಹಾಗೂ ಇತರೆ ಕಾರ್ಯಕ್ರಮಗಳು ಹೀಗೆ ಸಾಕಷ್ಟು ತಕ್ಷಣಕ್ಕೆ ವಿಷಯ ಶೇರ್ ಮಾಡಲು, ಯಾವುದೇ ಶುಲ್ಕ ಪಾವತಿಸದೆ, ಬಹುಜನರನ್ನು ಸಂಪರ್ಕಿಸಿಕೊಳ್ಳುವಲ್ಲಿ ಫೇಸ್ ಬುಕ್ ಮಹತ್ತರ ಪಾತ್ರವಹಿಸಿದೆ.
ಕಾನೂನು ವಿಚಾರಗಳಿಗೂ ಇಲ್ಲಿ ಮನ್ನಣೆ ದೊರಕಿದೆ. ಸುಪ್ರೀಂ ಕೋರ್ಟ್ ತೀರ್ಪುಗಳು, ವಿಶ್ಲೇಷಣೆಗಳು, ತಿದ್ದುಪಡಿಗಳ ಕುರಿತು ಚರ್ಚೆ ಹೀಗೆ ಹಲವು ರೀತಿಯ ಕಾನೂನು ಸಲಹೆಗಳು, ಇನ್‌ಫಾರ್ಮೇಶನ್ಸ್ ಇಲ್ಲಿ ಸಿಗುವುದು. ಪತ್ರಿಕೆ ಓದುವ ಅಭ್ಯಾಸವಿಲ್ಲದವರು ಈ ಜಾಲತಾಣಗಳಿಂದ ಬರುವ ಅಪ್ಡೇಟ್ಸ್ ಗಳಿಂದ ತಿಳಿದುಕೊಳ್ಳುವಂತಾಗಿದೆ. ಇನ್ ಸ್ಟಾಂಟ್ ಪೋಸ್ಟ್ಸ್ ಹಾಗೂ ಮಾಹಿತಿಗಳು ಫೀಡ್ ಆಗುತ್ತಲಿರುವ ಕಾರಣ ಜನರಿಗೆ ವಿಚಾರಗಳು ಬಹುಬೇಗನೆ ಗೊತ್ತಾಗುವುದು. ರಾಜಕೀಯ ವಿಚಾರಗಳೂ ಇದರಲ್ಲಿ ಪ್ರಮುಖವಾಗಿವೆ. ಜನಪ್ರತಿನಿಧಿಗಳು, ಅಧಿಕಾರಿಗಳ ಅಧಿಕೃತ ಖಾತೆಗಳು ಸಾಮಾಜಿಕ ಜಾಲತಾಣಗಳಲ್ಲಿರುವುದರಿಂದ ಜನರಿಗೆ ಹತ್ತಿರವಾಗಿ ಸರಳವಾಗಿ ಅವರನ್ನು ಸಂದರ್ಶಿಸಬಹುದು.
ಸಮಾಜದ ಅಂಚಿನಲ್ಲಿ ಅಡಕವಾದ, ಮರೆಯಾಗಿ ಹೋದ ಜನರ ಜಾನಪದ ಕಲೆಗಳು, ಕೃಷಿ ಪದ್ಧತಿಗಳು, ಸಮಾಜಮುಖಿ ಚಿಂತನೆಗಳನ್ನೂ ಗುರುತಿಸಿ ಒಂದು ಪೋಸ್ಟ್ ಮೂಲಕ ಬೆಳಕಿಗೆ ಅನಾವರಣಗೊಳಿಸಲು ಸಾಧ್ಯವಾಗಿದ್ದು ಇದೇ ಸೋಷಿಯಲ್ ಮೀಡಿಯಾದ ಪ್ರಭಾವದಿಂದ. ಸತ್ಯ, ನ್ಯಾಯದ ಪರ ದನಿ ಎತ್ತಲು ಮುಕ್ತ ಅವಕಾಶವಿರುವ ಇದರಲ್ಲಿ ಎಷ್ಟೋ ಗೊತ್ತಿರದ ಸಂಗತಿಗಳನ್ನು ಬಯಲಿಗೆಳೆದಿದ್ದು ಇದೇ ಸೋಷಿಯಲ್ ಮೀಡಿಯಾ. ಇದಕ್ಕೊಂದು ಉತ್ತಮ ಉದಾಹರಣೆ ಇತ್ತೀಚಿಗೆ ಸದ್ದು ಮಾಡಿದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೊ. ಜನರಿಗೆ ನಿಜದ ಪರಿಚಯವಾಗಲು ಯಾವುದೇ ಮೂಲೆಯಲ್ಲಿದ್ದರೂ ಇಂತಹ ಒಂದು ಫೋಟೋ, ಪೋಸ್ಟರ್, ವೀಡಿಯೊ ಕ್ಲಿಪ್ಪಿಂಗ್ಸ್ ಸಾಕು.
ಯಾವುದೇ ಸಾಮಾಜಿಕ ಪ್ರತಿಭಟನೆ, ಆಂದೋಲನದ ಮುಖೇನ ಸಾಮಾಜಿಕ ಸಮಸ್ಯೆಗಳನ್ನು ಎತ್ತಿಹಿಡಿಯಲು, ಗಮನ ಸೆಳೆಯಲು ಕರೆಕೊಡಬಹುದಾಗಿದೆ. ಹೀಗೊಂದು ಪ್ರಬಲ ಸಾಧನವಾಗಿ ಪ್ರಶ್ನಿಸುವ, ವಿಶ್ವಾಸಾರ್ಹ ಸಮುದಾಯ ನಿರ್ಮಾಣ ಹಾಗೂ ಜನ ಬೆಂಬಲದ ಮೌಲ್ಯಗಳನ್ನು ಇಲ್ಲಿ ಬಿತ್ತರಿಸಬಹುದಾಗಿದೆ. ಹಾಗೇ ಸುಮ್ಮನೆ ಹಾಕಿದ ಪೋಸ್ಟ್ ಆದರೂ ಅದರಿಂದ ಎಚ್ಚೆತ್ತು ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿ ಪರಿವರ್ತಿತವಾದ ನೈಜ ಘಟನೆಗಳೂ ನಡೆದಿವೆ. ಹೀಗೆ ಸಾಮಾಜಿಕ ಪ್ರಜ್ಞೆಯ ಪ್ರತೀಕವಾಗಿ ಸೋಷಿಯಲ್ ಮೀಡಿಯಾಗಳು ಅನುಕೂಲಕಾರಿ. ಸಾಮಾಜಿಕ ಚಟುವಟಿಕೆಗಳಿಗೆ ಇಲ್ಲಿ ಪುಷ್ಠಿ ನೀಡಲಾಗಿದೆ. ಸೆಕೆಂಡುಗಳಲ್ಲಿ ಮಾಹಿತಿ ತಲುಪುತ್ತದಾದ್ದರಿಂದ ಇವು ಯಶಸ್ವಿಯಾಗಿವೆ.
ಸೋಷಿಯಲ್ ಮೀಡಿಯಾ ತನ್ನದೇ ಆದ ಮಿತಿಗಳನ್ನೂ ಹೊಂದಿದೆ. ಸಾಮಾಜಿಕ ಮಾಧ್ಯಮಗಳನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅವು ಅನೇಕ ಅನುಕೂಲಗಳನ್ನು ನೀಡುತ್ತವೆ. ಆದರೆ, ಅವುಗಳ ಅತಿಯಾದ ಮತ್ತು ಅವ್ಯವಸ್ಥಿತ ಬಳಕೆ ಅಪಾಯಕಾರಿ. ಆದ್ದರಿಂದ, ಜಾಣ್ಮೆಯಿಂದ ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಅಭ್ಯಾಸ ಅಗತ್ಯವಾಗಿದೆ. ಹೀಗೆ ಮಾಡುತ್ತಾ ಹೋದರೆ, ಈ ಮಾಧ್ಯಮಗಳು ನಮ್ಮ ಸಮಾಜದ ಪ್ರಗತಿಗೆ ಅನುಕೂಲಕರವಾಗುತ್ತವೆ.
ಶ್ರವಂತಿ ಆರ್, ಆನೇಕಲ್
ಪತ್ರಿಕೋದ್ಯಮ ವಿದ್ಯಾರ್ಥಿನಿ
ಇದನ್ನೂ ಓದಿ- ಕೋಮುವಾದಕ್ಕೆ ಉತ್ತರ ನೀಡುವ ‘ಸತ್ಯೊಲು’ಎಂಬ ಜನಪದ ಸತ್ಯ