ಬೆಂಗಳೂರು: ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಮಂಡಿಸಿರುವ ವಿವಾದಾತ್ಮಕ ಜಾತಿ ಗಣತಿ (ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವರದಿಗೆ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇಂದು ಸುದ್ದಿಗೋಷ್ಠಿ ನಡೆಸಿದ ಒಕ್ಕಲಿಗರ ಸಂಘ ಈ ತಿಂಗಳ 17ರವರೆಗೆ ಕಾದು ನೋಡಿ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುವುದಾಗಿ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಅವರು, ಜಾತಿಗಣತಿ ವರದಿಯನ್ನು ಹಿಂಪಡೆಯಬೇಕು. ಒಕ್ಕಲಿಗ ಸಮುದಾಯ ಯಾವುದೇ ಕಾರಣಕ್ಕೂ ವರದಿಯನ್ನು ಒಪ್ಪುವುದಿಲ್ಲ. ಒಂದು ವೇಳೆ ವರದಿ ಜಾರಿಗೊಳಿಸಿದರೆ ಸರ್ಕಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಕರ್ನಾಟಕ ಬಂದ್ ರೀತಿಯ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ವರದಿಯಿಂದ ಅನ್ಯಾಯಕ್ಕೊಳಗಾಗಿರುವ ಲಿಂಗಾಯತ ಮೊದಲಾದ ಸಮುದಾಯಗಳ ಜತೆ ಚರ್ಚಿಸಿ ಹೋರಾಟ ರೂಪಿಸಲಾಗುತ್ತದೆ. ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಸಂಘದ ಎಲ್ಲ ನಿರ್ದೇಶಕರೂ ತಿಳಿಸಿದರು.
ಕಾಂತರಾಜು ವರದಿ ಸಮರ್ಪಕವಾಗಿಲ್ಲ. 10 ವರ್ಷಗಳ ಹಿಂದೆ ಸಮೀಕ್ಷೆ ಮಾಡಿದ ವರದಿಯನ್ನು ಈಗ ಜಾರಿಗೊಳಿಸಲು ಮುಂದಾಗಿದೆ. ಈ ವರದಿಯಲ್ಲಿ ಒಕ್ಕಲಿಗ ಜನಾಂಗದ ಜನಸಂಖ್ಯೆ ಕೇವಲ 61 ಲಕ್ಷ ಎಂದು ತೋರಿಸಲಾಗಿದೆ. ರಾಜ್ಯದ 224 ಕ್ಷೇತ್ರದಲ್ಲಿ ಒಕ್ಕಲಿಗರು ಕೇವಲ 61 ಲಕ್ಷ ಮಾತ್ರ ಇರಲು ಸಾಧ್ಯವೇ ಇಲ್ಲ. ಒಂದೊಂದು ತಾಲೂಕಿನಲ್ಲೂ 60 ಸಾವಿರದಿಂದ 1 ಲಕ್ಷಕ್ಕೂ ಹೆಚ್ಚು ಒಕ್ಕಲಿಗ ಜನರಿದ್ದಾರೆ. ಆದರೆ ಈ ವರದಿಯಲ್ಲಿ ನಮ್ಮ ಜನಾಂಗವನ್ನ 6ನೇ ಸ್ಥಾನಕ್ಕೆ ತಳ್ಳಲಾಗಿದೆ. ಬೇರೆ ಜನಾಂಗಗಳಿಗೆ ಮೀಸಲಾತಿ ನೀಡುವ ಉದ್ದೇಶದಿಂದಲೇ ಒಕ್ಕಲಿಗರಿಗೆ ಅನ್ಯಾಯ ಎಸಗಲಾಗಿದೆ ಎಂದು ಸಂಘದ ನಿರ್ದೇಶಕರು ಆಪಾದಿಸಿದರು.