ದೇಶದಲ್ಲೇ ಮೊದಲ ಬಾರಿಗೆ ಎಸ್​ ಸಿ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಗೊಳಿಸಿದ ತೆಲಂಗಾಣ; ಸಿಎಂ ರೇವಂತ್‌ ರೆಡ್ಡಿ ಕ್ರಮಕ್ಕೆ ಶ್ಲಾಘನೆ

Most read

ತೆಲಂಗಾಣ: ಮಹತ್ವದ ಬೆಳವಣಿಗೆಯೊಂದರಲ್ಲಿ ತೆಲಂಗಾಣ ಸರ್ಕಾರವು ಎಸ್​ ಸಿ ಒಳಮೀಸಲಾತಿಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ. ಒಳ ಮೀಸಲಾತಿ ಜಾರಿಗೊಳಿಸಿದ ಮೊಟ್ಟ ಮೊದಲ ರಾಜ್ಯ ಎಂಬ ಕೀರ್ತಿಗೆ ತೆಲಂಗಾಣ ರಾಜ್ಯ ಭಾಜನವಾಗಿದೆ. ಏಪ್ರಿಲ್‌ 14, ಅಂಬೇಡ್ಕರ್‌ ಜಯಂತಿಯಂದು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಮುಖ್ಯಮಂತ್ರಿ ರೇವಂತ್‌ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ (ಎಸ್‌ ಸಿ) ಒಳಮೀಸಲಾತಿ ಅನುಷ್ಠಾನ ಕುರಿತು ಆದೇಶ ಹೊರಡಿಸಿದೆ.

ತೆಲಂಗಾಣ ರಾಜ್ಯದಲ್ಲಿ ಎಸ್‌ಸಿ ಪಟ್ಟಿಯಲ್ಲಿ 59 ಉಪಜಾತಿಗಳಿದ್ದು, ಹಿಂದುಳಿದಿರುವಿಕೆ, ಜನಸಂಖ್ಯೆ ಆಧಾರದಲ್ಲಿ ಅವನ್ನು ಮೂರು ಗುಂಪುಗಳನ್ನಾಗಿ  ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.  ಇತಿಹಾಸ ನಿರ್ಮಿಸಿದ್ದಕ್ಕೆ ನಾವೆಲ್ಲರೂ ಹೆಮ್ಮೆಪಡುತ್ತೇವೆ. ಭಾರತ ರತ್ನ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಶುಭ ದಿನದಂದು, ತೆಲಂಗಾಣ ರಾಜ್ಯ ಸರ್ಕಾರವು ಎಸ್‌ ಸಿ ಉಪ ಜಾತಿಗಳ ವರ್ಗೀಕರಣದ ಬಹುದಿನಗಳ ಬೇಡಿಕೆಯನ್ನು ಪರಿಹರಿಸುವ ಸಾಮಾಜಿಕ ನ್ಯಾಯದ ಒಂದು ಮಹಾನ್ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಅತ್ಯುತ್ತಮ ಗೌರವ ಸಲ್ಲಿಸಿದೆ ಎಂದು ರೇವಂತ್ ರೆಡ್ಡಿ ಕೆಸ್‌ ನಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರದಲ್ಲಿನ ಎಲ್ಲಾ ಉದ್ಯೋಗ ಖಾಲಿ ಹುದ್ದೆಗಳನ್ನು ಈಗ ಹೊಸ ಒಳಮೀಸಲಾತಿ ಪ್ರಕಾರ ಭರ್ತಿ ಮಾಡಲಾಗುವುದು. 2026 ರ ಜನಗಣತಿಯಲ್ಲಿ ಎಸ್‌ ಸಿ ಜನಸಂಖ್ಯೆ ಹೆಚ್ಚಾದರೆ, ಮೀಸಲಾತಿ ಪಾಲನ್ನು ಅದಕ್ಕೆ ಅನುಗುಣವಾಗಿ ಪರಿಷ್ಕರಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ತೆಲಂಗಾಣ ಪರಿಶಿಷ್ಟ ಜಾತಿಗಳ ಕಾಯ್ದೆಗೆ, ರಾಜ್ಯಪಾಲರು ಏಪ್ರಿಲ್ 8 ರಂದು ಅಂಕಿತ ಹಾಕಿದ್ದರು. ಏ.14 ರಂದು ಗೆಜೆಟ್‌ ಅಧಿಸೂಚನೆ ಹೊರಬಿದ್ದಿದೆ. ಬೇರೆ ಯಾವುದೇ ಪಕ್ಷ  ಮಾಡಲಾಗದ ಕೆಲಸವನ್ನು ಕಾಂಗ್ರೆಸ್‌ ಪಕ್ಷ ಮಾಡಿದೆ. ಎಲ್ಲಾ ಪಕ್ಷಗಳು ಎಸ್‌ ಸಿ ವರ್ಗೀಕರಣಕ್ಕೆ ಮೌಖಿಕ ಬೆಂಬಲ ನೀಡಿದ್ದವಾದರೂ ಯಾವುದೇ ಪಕ್ಷ ಅನುಷ್ಠಾನಕ್ಕೆ ತಂದಿರಲಿಲ್ಲ.

ಕರ್ನಾಟಕದಲ್ಲೂ ಒಳಮೀಸಲಾತಿ ಕೂಗು:

 ಒಳಮೀಸಲಾತಿ ನೀಡುವಂತೆ ಕರ್ನಾಟಕದಲ್ಲೂ ಬೇಡಿಕೆ ಹೆಚ್ಚುತ್ತಿದೆ. ಈ ಬಗ್ಗೆ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡಲು ಸುಪ್ರಿಂಕೋರ್ಟ್ ತೀರ್ಪು ನೀಡಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಮೀಸಲಾತಿಯೊಳಗಡೆಯೇ ಒಳ ಮೀಸಲಾತಿ ದಗಿಸಲು ಸುಪ್ರೀಂ ಕೋರ್ಟ್‌ ಇತ್ತೀಚಿಗೆ ಒಪ್ಪಿಗೆ ನೀಡಿತ್ತು.

More articles

Latest article