ಮಂಡ್ಯ: ಮಂಡ್ಯದ ಪ್ರತಿಷ್ಠಿತ ವಾಣಿಜ್ಯ ರಸ್ತೆಯಾಗಿರುವ 100 ಅಡಿ ರಸ್ತೆಗೆ ಡಾ. ಬಿ ಆರ್ ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. 100 ಅಡಿ ರಸ್ತೆ ಎಂದೇ ಕರೆಸಿಕೊಳ್ಳುತ್ತಿದ್ದ ಈ ರಸ್ತೆ ಇನ್ನು ಮುಂದೆ ಅಂಬೇಡ್ಕರ್ ಹೆಸರಿನಲ್ಲಿ ಕರೆಸಿಕೊಳ್ಳಲಿದೆ.
1975 ರಲ್ಲೇ ರಸ್ತೆಗೆ ಡಾ. ಬಿ ಆರ್ ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡಲು ಅಂದಿನ ನಗರಸಭೆಯು ನಿರ್ಣಯ ಮಾಡಿ ಅಂಗೀಕರಿಸಿತ್ತು. ಆದರೆ ರಾಜಕೀಯ ಪಕ್ಷಗಳ ಇಚ್ಛಾಶಕ್ತಿಯ ಕೊರತೆಯಿಂದ ಅಧಿಕೃತವಾಗಿ ನಾಮಕರಣ ಮಾಡಲು ಸಾಧ್ಯವಾಗಿರಲಿಲ್ಲ.
ದಲಿತ ಪರ ಸಂಘಟನೆಗಳು ಸೇರಿದಂತೆ ಹಲವಾರು ಸಂಘಸಂಸ್ಥೆಗಳು, ಪ್ರಗತಿಪರರು ಈ ರಸ್ತೆಗೆ ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡಿ ಠರಾವು ಹೊರಡಿಸಬೇಕೆಂದು ಆಗ್ರಹಿಸಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದು ಸಾದ್ಯವಾಗಿರಲಿಲ್ಲ.
ಕೊನೆಗೂ ನಿನ್ನೆ ಸೋಮವಾರ ಏಪ್ರಿಲ್ 14, ಅಂಬೇಡ್ಕರ್ ಜಯಂತಿಯಂದು ಕಾವೇರಿ ಶಾಲೆಯಿಂದ, ಗೌರಿಶಂಕರ ಸಮುದಾಯ ಭವನದವರಗೆ ಇರುವ ಜೋಡಿ ರಸ್ತೆಗೆ ಅಂಬೇಡ್ಕರ್ ರಸ್ತೆ ಎಂದು ಮಂಡ್ಯದ ಸಮಾನ ಮನಸ್ಕರ ವೇದಿಕೆ, ದಲಿತ ಮತ್ತು ಪ್ರಗತಿಪರ ಸಂಘಟನೆಗಳು ನಾಮಪಲಕ ಅಳವಡಿಸಿವೆ.
ಸಮಾನ ಮನಸ್ಕರ ವೇದಿಕೆ ಸಂಚಾಲಕ ಲಕ್ಷ್ಮಣ್ ಚೀರನಹಳ್ಳಿ, ಎಂ.ವಿ.ಕೃಷ್ಣ , ಶಂಕರಪ್ಪ ಗೌಡ ನರಸಿಂಹಮೂರ್ತಿ ಮುಂತಾದವರ ನೇತೃತ್ವದಲ್ಲಿ ಈ ರಸ್ತೆಯ ಎರಡು ಕಡೆ ಅಂಬೇಡ್ಕರ್ ಹೆಸರಿನ ನಾಮಪಲಕ ಅಳವಡಿಸಿ ಈ ದಿನವನ್ನು ಅರ್ಥಪೂರ್ಣವಾಗಿಸಿದ್ದಾರೆ.
ಈ ನಡುವೆ ಈ ರಸ್ತೆಗೆ ಕೆಂಪೇಗೌಡರ ಹೆಸರಿಡಬೇಕೆಂದು ಕೆಲವು ಮುಖಂಡರು ನಗರಸಭೆಗೆ ಕಳೆದ ವರ್ಷ ಮನವಿ ಸಲ್ಲಿಸಿದ್ದರು. ಮತ್ತು ಈ ವಿಷಯವಾಗಿ ನಗರಸಭೆಯ ಅದಿವೇಶನದಲ್ಲಿ ಪರ ವಿರೋದದ ಚರ್ಚೆ ನಡೆದು ವಿಷಯ ನೆನಗುದಿಗೆ ಬಿದ್ದಿತ್ತು.