ಜಾತಿ ಸಮೀಕ್ಷೆ; ಚರ್ಚೆಗೆ ಇದೇ 17 ರಂದು ವಿಶೇಷ ಸಂಪುಟ ಸಭೆ; ಅಂತಿಮ ನಿರ್ಧಾರ ಸಾಧ್ಯತೆ

Most read

ಬೆಂಗಳೂರು: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ (ಜಾತಿ ಗಣತಿ ವರದಿ)ಯನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದ್ದರೂ ಈ ಕುರಿತು ವಿಸ್ತೃತವಾಗಿ ಚರ್ಚಿಸಲು ಇದೇ 17 ರಂದು ವಿಶೇಷ ಸಂಪುಟ ಸಭೆಯನ್ನು ಕರೆಯಲಾಗಿದೆ ಎಂದು ಹಿಂದುಳಿದ ವರ್ಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ಸಂಪುಟ ಸಭೆಯ ಬಳಿಕ ಆವರು ಮಾಹಿತಿ ನೀಡಿ. ಒಟ್ಟು 50 ಸಂಪುಟಗಳ ವರದಿಯನ್ನು ಎರಡು ಬಾಕ್ಸ್‌ಗಳಲ್ಲಿ ತರಲಾಗಿದೆ ಎಂದರು.

ಈ ಸಮೀಕ್ಷೆಯಡಿಯಲ್ಲಿ ಒಟ್ಟು 6.35 ಕೋಟಿ ಜನರ ಸಮೀಕ್ಷೆ ಮಾಡಬೇಕೆಂಬ ಗುರಿ ಇತ್ತು. 5.98 ಕೋಟಿ ಜನರನ್ನು ಒಳಗೊಂಡ 1.35 ಕೋಟಿ ಕುಟುಂಬಗಳು ಸಮೀಕ್ಷೆಗೆ ಒಳಪಟ್ಟಿವೆ. ಶೇ. 97.4‌ ಜನರ ಮಾಹಿತಿ ಲಭ್ಯವಾಗಿದೆ. ಕೇವಲ 37 ಲಕ್ಷ ಜನ ‌ಮಾತ್ರ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ ಎಂದು ತಂಗಡಗಿ ಹೇಳಿದರು. ಜಿಲ್ಲಾಧಿಕಾರಿಗಳು, ಆಯುಕ್ತರು, ಅಧಿಕಾರಿಗಳು, ಜಿಲ್ಲಾ ಪಂಚಾಯತ್‌ ಸಿಇಒಗಳು, ಹಿಂದುಳಿದ ವರ್ಗದ ಅಧಿಕಾರಿಗಳು,‌ ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು, ಶಿಕ್ಷಕರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. 54 ಮಾನದಂಡದಡಿಯಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆ ಮಾಡಲು ತಜ್ಞರ ತಂಡವೇ ಇತ್ತು. ರೂ.192 ಕೋಟಿ ವೆಚ್ಚದಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದರು.

ವರದಿಯ ಮುಖ್ಯಾಂಶಗಳ ಪ್ರತಿಯನ್ನು ಎಲ್ಲ ಸಚಿವರಿಗೂ ಕೊಡಲಾಗಿದೆ. ಇದೇ 17 ರಂದು ನಡೆಯುವ ವಿಶೇಷ ಸಂಪುಟ ಸಭೆಗೆ ಅಧ್ಯಯನ ಮಾಡಿಕೊಂಡು ಬರಬೇಕು ಎಂದು ಸೂಚಿಸಲಾಗಿದೆ. ಅಂದು ವಿಸ್ತೃತ ಚರ್ಚೆಯ ಬಳಿಕ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು ಎಂದು ತಂಗಡಗಿ ತಿಳಿಸಿದರು. ಇಂದಿನ ಸಂಪುಟ ಸಭೆಯಲ್ಲಿ ಯಾವುದೇ ಸಚಿವರು ಆಕ್ಷೇಪ ವ್ಯಕ್ತಪಡಿಸಲಿಲ್ಲ. ಹೊರಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆಲವು ಸಮುದಾಯಗಳ ಸಚಿವರು ಮೌನವಾಗಿದ್ದರು. ರಾಹುಲ್‌ ಗಾಂಧಿ ಸೂಚನೆ ಇದ್ದಿದ್ದರಿಂದ ಯಾವುದೇ ಸಚಿವರು ಆಕ್ಷೇಪ ವ್ಯಕ್ತಪಡಿಸುವ ಧೈರ್ಯ ತೋರಿಸಲಿಲ್ಲ ಎಂದು ತಿಳಿದು ಬಂದಿದೆ.

More articles

Latest article