ಭೋಪಾಲ್: ಇತ್ತೀಚೆಗೆ ದಾಮೋಹ್ ಜಿಲ್ಲೆಯ ಮಿಷನರಿ ಆಸ್ಪತ್ರೆಯಲ್ಲಿ ನಕಲಿ ಹೃದ್ರೋಗ ತಜ್ಞ ಎಂದು ಹೇಳಲಾದ ವ್ಯಕ್ತಿಯಿಂದ ಚಿಕಿತ್ಸೆ ಪಡೆದ 7 ಮಂದಿ ಮೃತಪಟ್ಟಿದ್ದ ವರದಿ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಮತ್ತೊಬ್ಬ ನಕಲಿ ವೈದ್ಯ ಪತ್ತೆಯಾಗಿದ್ದಾನೆ. ಈತನನ್ನು ಜಬಲ್ಪುರದ 48 ವರ್ಷದ ಶುಭಂ ಅವಸ್ಥಿ ಎಂದು ಗುರುತಿಸಲಾಗಿದೆ. ವಿಶೇಷ ಏನೆಂದರೆ ಶುಭಂ ರಾಜ್ಯ ಆಡಳಿತಾರೂಢ ಬಿಜೆಪಿಯ ಜಬಲ್ಪುರ್ ಘಟಕದ ವೈದ್ಯರ ಮೋರ್ಚಾದ ಸಹ ಸಂಚಾಲಕ ಆಗಿದ್ದ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
ನಕಲಿ ಆಯುಷ್ ಪ್ರಮಾಣಪತ್ರದಿಂದ ಶುಭಂ ಅವಸ್ಥಿ ಜಬಲ್ಪುರ್ ಗೋವಿಂದ್ ದಾಸ್ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಪಡೆದುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಶುಭಂ ಅವಸ್ಥಿಯನ್ನು ಈ ಹಿಂದೆಯೇ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಮಧ್ಯಪ್ರದೇಶದ ಬಿಜೆಪಿ ವೈದ್ಯ ಮೋರ್ಚಾ ತಿಳಿಸಿದೆ.
ಗೋವಿಂದ್ ದಾಸ್ ಜಿಲ್ಲಾ ಆಸ್ಪತ್ರೆಯಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಮೃತನ ಸ್ನೇಹಿತ ಶೈಲೇಂದ್ರ ಬಾರಿ ಎನ್ನುವರು, ಆಸ್ಪತ್ರೆಯಲ್ಲಿ ನಕಲಿ ವೈದ್ಯರಿದ್ದಾರೆ ಎಂಬ ಅನುಮಾನದ ಮೇಲೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಆದರೂ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿರಲಿಲ್ಲ. ನಂತರ ಶೈಲೇಂದ್ರ ಅವರು ಕೋರ್ಟ್ ಮೊರೆ ಹೋದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಮಿಷನರಿ ಆಸ್ಪತ್ರೆಯೊಂದರಲ್ಲಿ 7 ಜನರ ಸಾವಿಗೆ ಕಾರಣ ಎಂದು ಹೇಳಲಾಗಿದ್ದ ನಕಲಿ ವೈದ್ಯನೊಬ್ಬ ಇತ್ತೀಚೆಗೆ ಪತ್ತೆಯಾಗಿದ್ದ. ನರೇಂದ್ರ ವಿಕ್ರಮಾದಿತ್ಯ ಯಾದವ್, ಎನ್ನುವರು ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ‘ಡಾ. ಎನ್. ಜಾನ್ ಕ್ಯಾಮ್’ ಎಂಬ ನಕಲಿ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದ.