ಬೆಂಗಳೂರು: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಮಯಗಳನ್ನು ಉಲ್ಲಂಘಿಸಿ ಕಾನೂನುಬಾಹಿರ ಮತ್ತು ಅಕ್ರಮವಾಗಿ ಎಂಜಿನಿಯರಿಂಗ್ ಸೀಟುಗಳನ್ನು ಹಂಚಿಕೆ ಮಾಡಿ ಪ್ರವೇಶ ಕಲ್ಪಿಸಿದ್ದ ಆರೋಪದಡಿಯಲ್ಲಿ ಬಿಎಂಎಸ್ ಎಜುಕೇಷನ್ ಟ್ರಸ್ಟ್ ಹಾಗೂ ಟ್ರಸ್ಟಿ ರಾಗಿಣಿ ನಾರಾಯಣ್ ಅವರ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಈ ಹಗರಣ ಸಂಬಂಧ ರಮೇಶ್ ನಾಯಕ್ ಎಂಬ ವಕೀಲರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಎಸಿಜೆಎಂ 37ನೇ ನ್ಯಾಯಾಲಯದ ಸೂಚನೆ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರಿಗೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬುಲ್ ಟೆಂಪಲ್ ರಸ್ತೆಯಲ್ಲಿರುವ ಬಿಎಂಎಸ್ ಶೈಕ್ಷಣಿಕ ಟ್ರಸ್ಟ್ ಅಧೀನದಲ್ಲಿ ಅನುದಾನಿತ ಹಾಗೂ ಅನುದಾನೇತರ ನಾಲ್ಕು ಎಂಜಿನಿಯರಿಂಗ್ ಕಾಲೇಜುಗಳೀವೆ. ಆದರೆ ಬಿಎಂಎಸ್ ಶೈಕ್ಷಣಿಕ ಟ್ರಸ್ಟ್ ನ ರಾಗಿಣಿ ನಾರಾಯಣ ಅವರು ನಿಯಮಗಳನ್ನು ಉಲ್ಲಂಘಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುತ್ತಿದ್ದಾರೆ. ಸಂಸ್ಥೆಯ ನಾಲ್ಕು ಎಂಜಿನಿಯರಿಂಗ್ ಕಾಲೇಜುಗಳಲ್ಲಿ 2009ರಿಂದ ಇದುವರೆಗೂ ಕಾಲೇಜು ಮೆರಿಟ್ ಪಟ್ಟಿ ಬಗ್ಗೆ ಪ್ರಕಟಣಾ ಫಲಕದಲ್ಲಿ ಪ್ರಕಟಣೆ ಹೊರಡಿಸಿಲ್ಲ ಹಾಗೂ ನಿಯಮಾವಳಿಗಳನ್ನು ಪಾಲಿಸಿಲ್ಲ. ಪ್ರವೇಶ ಶುಲ್ಕ, ಟ್ಯೂಷನ್ ಫೀ ಕುರಿತಾದ ನಿಯಮಗಳನ್ನು ಪಾಲಿಸಿಲ್ಲ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ನಾಲ್ಕು ಕಾಲೇಜುಗಳಲ್ಲಿ 2021–22 ಹಾಗೂ 2022–23ರಲ್ಲಿ ಬಿ.ಇ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆಯಲ್ಲಿ ಎನ್ ಆರ್ ಐ ಹಾಗೂ ವಿದೇಶಿ ಪ್ರಜೆಗಗಳ ಕೋಟಾ ಅಡಿಯಲ್ಲಿ ಸೀಟುಗಳ ಹಂಚಿಕೆಯ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ. ಬಿಎಂಎಸ್ ಶೈಕ್ಷಣಿಕ ಟ್ರಸ್ಟ್ 2021–22ನೇ ಸಾಲಿನಲ್ಲಿ ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆಯಲ್ಲಿ ಎಐಸಿಟಿಇ ಹಾಗೂ ಯುಜಿಸಿ ನಿಯಮಗಳ ಉಲ್ಲಂಘನೆ ಮಾಡಿ ಸೀಟು ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಯಾವುದೇ ಪ್ರಕಟಣೆಗಳನ್ನೂ ಹೊರಡಿಸಿರುವುದಿಲ್ಲ. ಅಕ್ರಮವಾಗಿ ಸೀಟು ಹಂಚಿಕೆ ಮಾಡಿ ಕೋಟ್ಯಂತರ ರೂಪಾಯಿ ಹಣವನ್ನು ಸಂಗ್ರಹಿಸಲಾಗಿದೆ ಎಂಬ ದೂರು ಆಧರಿಸಿ ಎಫ್ ಐ ಆರ್ ದಾಖಲಿಸಲಾಗಿದೆ.