ರೇವಾ: ಕಳೆದ ವರ್ಷ ಅಕ್ಟೋಬರ್ನಲ್ಲಿ ನವವಿವಾಹಿತೆಯನ್ನು ಆಕೆಯ ಪತಿಯೊಂದಿಗೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಧ್ಯಪ್ರದೇಶದ ರೇವಾ ನ್ಯಾಯಾಲಯ ಎಂಟು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜತೆಗೆ ಪ್ರತಿಯೊಬ್ಬ ಅಪರಾಧಿಗೂ ತಲಾ ರೂ. 2,30,000 ದಂಡ ವಿಧಿಸಿದೆ.
ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಪದ್ಮಾ ಜಾತವ್ ಅವರು, ಎಂಟು ಆರೋಪಿಗಳಾದ ರಾಮಕಿಶನ್, ಗರುಡ್ ಕೋರಿ, ರಾಕೇಶ್ ಗುಪ್ತಾ, ಸುಶೀಲ್ ಕೋರಿ, ರಜನೀಶ್ ಕೋರಿ, ದೀಪಕ್ ಕೋರಿ, ರಾಜೇಂದ್ರ ಕೋರಿ ಮತ್ತು ಲವ್ಕುಶ್ ಕೋರಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಿಕಾಸ್ ದ್ವಿವೇದಿ ತಿಳಿಸಿದ್ದಾರೆ.
ದಾಖಲೆಯಲ್ಲಿರುವ ಸಾಕ್ಷ್ಯಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಿದ ನಂತರ, ಎಂಟು ಅಪರಾಧಿಗಳು ತಮ್ಮ ಜೀವನಪರ್ಯಂತ ಜೈಲಿನಲ್ಲಿಯೇ ಇರುತ್ತಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ ಎಂದು ಅವರು ಹೇಳಿದ್ದಾರೆ.
ಪ್ರಾಸಿಕ್ಯೂಷನ್ ಪ್ರಕಾರ, ಅಪರಾಧಿಗಳು ನವವಿವಾಹಿತ ದಂಪತಿಯನ್ನು ಅಪಹರಿಸಿದ್ದರು. ಅವರಲ್ಲಿ ಆರು ಮಂದಿ ಅಪರಾಧಿಗಳು ಮಹಿಳೆಯ ಪತಿಯ ಮುಂದೆಯೇ ಅತ್ಯಾಚಾರ ಮಾಡಿದ್ದರು. ಮದ್ಯ ಸೇವಿಸಿದ್ದ ಅಪರಾಧಿಗಳು ಸರದಿಯಂತೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದರು. ಗುಧ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ 2024ರ ಅಕ್ಟೋಬರ್ 21ರಂದು ಈ ಘಟನೆ ನಡೆದಿದೆ ಎಂದು ಪ್ರಾಸಿಕ್ಯೂಶನ್ ತಿಳಿಸಿದೆ.
ಜಿಲ್ಲಾ ಕೇಂದ್ರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಬೆಟ್ಟದ ಮೇಲಿರುವ ದೇವಸ್ಥಾನದಿಂದ ಮನೆಗೆ ಹಿಂದಿರುಗುತ್ತಿದ್ದಾಗ ದಂಪತಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ನಂತರ ಪರಾರಿಯಾಗಿದ್ದರು ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಆರೋಪಿಗಳನ್ನು ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್- 70 (ಸಾಮೂಹಿಕ ಅತ್ಯಾಚಾರ) ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಅವರಲ್ಲಿ ಆರು ಮಂದಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದರೆ, ಇತರ ಇಬ್ಬರು ಅಪರಾಧ ಎಸಗಲು ಅವರಿಗೆ ನೆರವು ನೀಡಿದ್ದರು ಎಂದು ವರದಿ ತಿಳಿಸಿದೆ. ಸಂತ್ರಸ್ತರು 19 ರಿಂದ 20 ವರ್ಷ ವಯಸ್ಸಿನವರಾಗಿದ್ದು, ಘಟನೆಯ ಸಮಯದಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.