ಪಾಲ್ಘರ್: ಮದುವೆ ಆಮಂತ್ರಣ ಪತ್ರಿಕೆ ನೆರವಿನಿಂದ ಪೊಲೀಸರು ದರೋಡೆ ಪ್ರಕರಣವೊಂದನ್ನು ಭೇದಿಸಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದ ದರೋಡೆ ಪ್ರಕರಣವನ್ನು ಭೇದಿಸಲು ಮದುವೆ ಆಮಂತ್ರಣ ಪತ್ರಿಕೆ ಸಹಾಯ ಮಾಡಿದೆ. ಸಂತ್ರಸ್ತನ ಸಹೋದರನೇ ಅಪರಾಧದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಮಾರ್ಚ್ 28ರಂದು ಜವ್ಹಾರ್ನ ವಾವರ್ ಗ್ರಾಮದ ಬಳಿ ದರೋಡೆ ನಡೆದಿತ್ತು.
ಮೊಖಡಾ ತಾಲೂಕಿನ ಖೋಡಾಲಾ ನಿವಾಸಿ ಬೋರು ಖಂಡು ಬಿನ್ನಾರ್ ಎಂಬುವರು ಪಿಕಪ್ ವ್ಯಾನ್ ನಲ್ಲಿ ಪ್ರಯಾಣಿಸುತ್ತಿದ್ದಾಗ, ಮೂವರು ಅಪರಿಚಿತ ವ್ಯಕ್ತಿಗಳು ತಮ್ಮ ಮೋಟಾರ್ಬೈಕ್ ಕೆಟ್ಟುಹೋಗಿದೆ ಎಂಬ ನೆಪದಲ್ಲಿ ಅವರನ್ನು ಅಡ್ಡಗಟ್ಟಿದ್ದರು. ವ್ಯಾನ್ ನಿಲ್ಲಿಸಿ ಸಹಾಯಕ್ಕೆ ಹೋದಾಗ ದರೋಡೆಕೋರರು ಖಂಡು ಬಿನ್ನಾರ್ ಮತ್ತು ವ್ಯಾನ್ ಚಾಲಕನ ಕಣ್ಣಿಗೆ ಮೆಣಸಿನ ಪುಡಿ ಎಸೆದು, ಚಾಲಕನ ಸೀಟಿನ ಹಿಂದೆ ಇಟ್ಟಿದ್ದ ರೂ.6,85,500 ಹಣವನ್ನು ದೋಚಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಲಾಸಾಹೇಬ್ ಪಾಟೀಲ್ ತಿಳಿಸಿದ್ದಾರೆ.
ಓಡಿಹೋಗುವ ಮೊದಲು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ದರೋಡೆಕೋರರು ಬೆದರಿಕೆ ಹಾಕಿದ್ದರು ಎಂದೂ ಅವರು ತಿಳಿಸಿದ್ದಾರೆ.
ಅಪರಾಧ ಸ್ಥಳದಲ್ಲಿ ತನಿಖೆ ನಡೆಸಿದಾಗ, ಪೊಲೀಸರಿಗೆ ಮೆಣಸಿನ ಪುಡಿಯನ್ನು ಸುತ್ತಿಡಲಾಗಿದ್ದ ಮದುವೆಯ ಆಮಂತ್ರಣ ಪತ್ರಿಕೆ ಸಿಕ್ಕಿದೆ. ಆಹ್ವಾನ ಪತ್ರಿಕೆಯಲ್ಲಿ ಹೆಸರು ಉಲ್ಲೇಖಿಸಲಾಗಿದ್ದ ವ್ಯಕ್ತಿ ದರೋಡೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ನಂತರ, ಇತರ ಮೂವರು ಅಪರಾಧಿಗಳನ್ನು ಸಹ ಬಂಧಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಅಧಿಕಾರಿಯ ಪ್ರಕಾರ, ಬಂಧಿಸಲಾದ ನಾಲ್ವರಲ್ಲಿ ಹಣ ಕಳೆದುಕೊಂಡ ವ್ಯಕ್ತಿಯ ಸಹೋದರ ದರೋಡೆಯ ರೂವಾರಿ ಎಂದು ತಿಳಿದುಬಂದಿದೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರಿದ್ದ ಮೊಖಡಾ ನಿವಾಸಿ ಕಿರಣ್ ಅನಂತ ಲ್ಯಾಮ್ಟೆ ಮತ್ತಿತರ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇವರಿಂದ ದರೋಡೆ ಮಾಡಿದ ಸಂಪೂರ್ಣ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.