ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸುವುದು ದೇಶದ ಸಂವಿಧಾನದ ಮೇಲಿನ ದಾಳಿ ನಡೆಸಿದಂತೆ ಎಂದು ಕಾಂಗ್ರೆಸ್ನ ಸಂಸದೀಯ ಸಮಿತಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಇದು ಸಮಾಜವನ್ನು ಶಾಶ್ವತವಾಗಿ ಧೃವೀಕರಣ ಸ್ಥಿತಿಯಲ್ಲಿಡಲು ಬಿಜೆಪಿ ಮಾಡಿದ ತಂತ್ರ ಎಂದು ಅವರು ಕಿಡಿಕಾರಿದ್ದಾರೆ.
ಲೋಕಸಭೆಯಲ್ಲಿ ಮಸೂದೆಗೆ ಅಂಗೀಕಾರ ಲಭಿಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ಲೊಖಸಭೆಯಲ್ಲಿ ಮಸೂದೆಯನ್ನು ಬಲವಂತವಾಗಿ ಮಂಡಿಸಲಾಗಿದೆ ಎಂದು ಆರೋಪಿಸಿದ್ದಾರೆ. ಸಂವಿಧಾನ ಸದನದಲ್ಲಿ ಕಾಂಗ್ರೆಸ್ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನವನ್ನು ಅಪವಿತ್ರಗೊಳಿಸುವ ಒಂದು ದೇಶ ಒಂದು ಚುನಾವಣೆ ಮಸೂದೆ ಜಾರಿಗೆ ಬರುತ್ತಿದ್ದು, ಅದನ್ನೂ ಒಟ್ಟಾಗಿ ವಿರೋಧಿಸಬೇಕು ಎಂದು ಕರೆ ನೀಡಿದ್ದಾರೆ.
ಶಿಕ್ಷಣ, ನಾಗರಿಕ ಹಕ್ಕು ಹಾಗೂ ಸ್ವಾತಂತ್ರ್ಯ, ಒಕ್ಕೂಟ ವ್ಯವಸ್ಥೆ ಅಥವಾ ಚುನಾವಣೆ ಪ್ರಕ್ರಿಯೆ ಆಗಿರಲಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶವನ್ನು ಪ್ರಪಾತಕ್ಕೆ ತಳ್ಳುತ್ತಿದೆ. ಸಂವಿಧಾನ ಕೇವಲ ಪುಸ್ತಕದಲ್ಲಿ ಮಾತ್ರ ಉಳಿದಿದೆ. ಅದನ್ನೂ ಅವರು ನಾಶ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸೋನಿಯಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿ ಸರ್ಕಾರದ ವೈಫಲ್ಯ ಮತ್ತು ಭಾರತವನ್ನು ಕಣ್ಗಾವಲು ರಾಜ್ಯವನ್ನಾಗಿ ಪರಿವರ್ತಿಸುವ ಉದ್ದೇಶವನ್ನು ಬಹಿರಂಗಪಡಿಸಲು ನಾವೆಲ್ಲರೂ ನ್ಯಾಯಯುತವಾಗಿ ಹೋರಾಡುವುದನ್ನು ಮುಂದುವರಿಸುವುದು ಅತ್ಯಗತ್ಯ ಎಂದು ಸಂಸದರಿಗೆ ಕರೆ ನೀಡಿದ ಅವರು, 2004-2014ರ ಅವಧಿಯ ನಮ್ಮ ಉಪಕ್ರಮಗಳನ್ನು ಪ್ರಧಾನಿ ಮೋದಿ ತಮ್ಮದೇ ವೈಯಕ್ತಿಕ ಸಾಧನೆಗಳೆಂದು ಮರುಬ್ರಾಂಡ್, ಮರುಪ್ಯಾಕ್, ಮಾರುಕಟ್ಟೆ ಮಾಡಿದ್ದಾರೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಸಂಸತ್ತಿನ ಎರಡೂ ಸದನಗಳ ಕಾರ್ಯನಿರ್ವಹಣೆಯ ಕುರಿತು ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಸಮಸ್ಯೆಗಳನ್ನು ಎತ್ತಲು ಅವಕಾಶ ನೀಡದಂತೆ ಆಡಳಿತ ಪಕ್ಷಗಳು ಆಗಾಗ್ಗೆ ಗೊಂದಲ ಸೃಷ್ಟಿಸುತ್ತಿವೆ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಎಲ್ಲಾ ಸಂಸದರು ಸಭೆಯಲ್ಲಿ ಉಪಸ್ಥಿತರಿದ್ದರು.