ರೂ.2 ಲಕ್ಷ ಲಂಚ: ಈಶಾನ್ಯ ಸೆನ್ ಠಾಣೆ ಎಸಿಪಿ, ಎಎಸ್ಐ ಬಂಧನ

Most read

ಬೆಂಗಳೂರು: ಖಾಸಗಿ ಕಂಪನಿಯೊಂದರ ವೆಬ್ ಸೈಟ್ ಹ್ಯಾಕಿಂಗ್ (Website Hacing) ಮಾಡಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ರೂ. 2 ಲಕ್ಷ ಪಡೆಯುತ್ತಿದ್ದ ಈಶಾನ್ಯ ವಿಭಾಗದ ಸೆನ್ ಪೊಲೀಸ್ ಠಾಣೆಯ ಎಸಿಪಿ ತನ್ವೀರ್ ಎಸ್.ಆರ್. ಮತ್ತು ಸಹಾಯಕ ಸಬ್ ಇನ್ಸ್ಪೆಕ್ಟರ್ (ASI) ಕೃಷ್ಣಮೂರ್ತಿ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ.

ಅದ್ವಿ ಗ್ರೂಪ್ ಆಪ್ ಕಂಪನೀಸ್ ಎಂಬ ಉದ್ಯಮ ಸಮೂಹದ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿದ್ದ ದುಷ್ಕರ್ಮಿಗಳು, ಅದರಲ್ಲಿ ತಪ್ಪು ಮಾಹಿತಿ ಪ್ರಕಟಿಸಿದ್ದರು. ಇದರಿಂದ ಕಂಪನಿಯ ಗೌರವಕ್ಕೆ ಧಕ್ಕೆಉಂಟಾಗಿತ್ತು ಮತ್ತು ನಷ್ಟವಾಗುತ್ತಿತ್ತು. ಈ ಸಂಬಂಧ ಕಂಪನಿಯ ಮಾಲೀಕ ಮಧುಸೂದನ್ ಬಿ.ಎಸ್. ಅವರು ಈಶಾನ್ಯ ವಿಭಾಗದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಎಫ್ ಐ ಆರ್ ದಾಖಲಿಸಿದ್ದರೂ, ಆರೋಪಿಗಳನ್ನು ಬಂಧಿಸಿರಲಿಲ್ಲ.

ಆರೋಪಿಗಳನ್ನು ಬಂಧಿಸುವಂತೆ ಮಧುಸೂದನ್ ಅವರು ಮನವಿ ಮಾಡಿದ್ದರು. ಆರೋಪಿಗಳನ್ನು ಬಂಧಿಸಲು ರೂ.4 ಲಕ್ಷ ಲಂಚ ನೀಡುವಂತೆ ಎಸಿಪಿ ಮತ್ತು ಎಎಸ್ಐ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 2 ಲಕ್ಷ ರೂ. ನೀಡಿದರೆ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದ್ದರು. ಮಧುಸೂದನ್ ಅವರು ಈ ಕುರಿತು ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ ಘಟಕ-2 ಕ್ಕೆ ದೂರು ಸಲ್ಲಿಸಿದ್ದರು. ಲಂಚದ ಹಣವನ್ನು ಎಎಸ್ಐ ಬಳಿ ನೀಡುವಂತೆ ಎಸಿಪಿ ತನ್ವೀರ್ ಸೂಚಿಸಿದ್ದರು. ಮಂಗಳವಾರ ರಾತ್ರಿ ಆರ್.ಟಿ. ನಗರದ ಸ್ಥಳವೊಂದಕ್ಕೆ ಬಂದು ಹಣ ತಲುಪಿಸುವಂತೆ ಕೃಷ್ಣಮೂರ್ತಿ ಸೂಚಿಸಿದ್ದರು. ಅದರಂತೆ ಅಲ್ಲಿಗೆ ತಲುಪಿದ ದೂರುದಾರರು ಹಣ ಕೊಟ್ಟರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದರು. ಎಸಿಪಿ ತನ್ವೀರ್ ಅವರನ್ನು ತಡರಾತ್ರಿ ವೇಳೆಗೆ ಬಂಧಿಸಿದರು.

ಇಬ್ಬರೂ ಆರೋಪಿಗಳನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ವಿಭಾಗದ ಬೆಂಗಳೂರು ನಗರ ಘಟಕ-2 ರ ಎಸ್ಪಿ ಕೆ. ವಂಶಿಕೃಷ್ಣ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ ಪಿ ಎಚ್.ಜೆ. ತಿಪ್ಪೇಸ್ವಾಮಿ, ಇನ್ ಸ್ಪೆಕ್ಟರ್ಗಳಾದ ವಿಜಯ್ ಕೃಷ್ಣ, ಪ್ರಶಾಂತ್, ಅಂಜನ್ ಕುಮಾರ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

More articles

Latest article