ನವದೆಹಲಿ: ಅನ್ನದಾತರ ವಿರುದ್ಧ ಎರಡು ರೈತ ವಿರೋಧಿ ಪಕ್ಷಗಳು ಕೈಜೋಡಿಸಿವೆ. ದೇಶದ 62 ಕೋಟಿ ರೈತರು, ಇಂತಹ ರೈತ ವಿರೋಧಿ ಪಕ್ಷಗಳನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಶಂಭು ಮತ್ತು ಖನೌರಿ ಗಡಿಯ ಪ್ರತಿಭಟನಾ ಸ್ಥಳಗಳಿಂದ ರೈತರನ್ನು ಬಲವಂತವಾಗಿ ಸ್ಥಳಾಂತರಿಸಿದ ಪೊಲೀಸರ ಕ್ರಮವನ್ನು ಖಂಡಿಸಿರುವ ಅವರು, ಮೊದಲು ಪಂಜಾಬ್ ಸರ್ಕಾರವು ರೈತರನ್ನು ಮಾತುಕತೆಗೆ ಆಹ್ವಾನಿಸಿತ್ತು. ನಂತರ ಪ್ರತಿಭಟನಾ ಸ್ಥಳದಿಂದ ಬಲವಂತವಾಗಿ ತೆರವುಗೊಳಿಸಿತು ಎಂದು ಆರೋಪಿಸಿದ್ದಾರೆ.
ರೈತ ನಾಯಕರಾದ ಸರ್ವಾನ್ ಸಿಂಗ್ ಪಂಧೇರ್ ಮತ್ತು ಜಗಜಿತ್ ಸಿಂಗ್ ದಲ್ಲೇವಾಲ್ ಅವರನ್ನು ಬಂಧಿಸಿರುವುದನ್ನು ಖರ್ಗೆ ಖಂಡಿಸಿದ್ದಾರೆ. ಮಧ್ಯಪ್ರದೇಶದಲ್ಲಿ ರೈತರ ವಿರುದ್ಧ ಬಿಜೆಪಿ ಸರ್ಕಾರದ ಗೋಲಿಬಾರ್, ಲಖೀಂಪುರ ಖೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಚಿವನ ಮಗ ಕಾರು ಹರಿಸಿರುವ ಘಟನೆ ಮತ್ತು 2015ರಲ್ಲಿ ಅರವಿಂದ ಕೇಜ್ರವಾಲ್ ಅವರ ಸಮಾವೇಶದಲ್ಲಿ ರೈತ ನೇಣು ಬಿಗಿದುಕೊಂಡ ಘಟನೆಯನ್ನು ದೇಶ ಮರೆತಿಲ್ಲ ಎಂದು ಖರ್ಗೆ ನೆನಪಿಸಿದ್ದಾರೆ. ಈ ಎರಡೂ ಪಕ್ಷಗಳು ದೇಶದ ಅನ್ನದಾತರ ಕುಟುಂಬಗಳಿಗೆ ದ್ರೋಹ ಬಗೆದಿವೆ ಎಂದು ಅವರು ಟೀಕಿಸಿದ್ದಾರೆ.