ಗಹನ ವಿಚಾರಗಳ, ವಿಡಂಬನಾತ್ಮಕ ನಿರೂಪಣೆಯ ʼಫೆಮಿನಿಚಿ ಫಾತಿಮಾʼ

Most read

ಈ ಮಲಯಾಳಂ ಸಿನಿಮಾದ ಎಸ್ಟಾಬ್ಲಿಷಿಂಗ್‌ ಶಾಟ್‌ ಇದೊಂದು ಕೇರಳದ, ಕಡಲ ಕಿನಾರೆಯ, ಕೆಳ ಮಧ್ಯಮ ವರ್ಗದ ಕಾಲೋನಿಯಲ್ಲಿ ಜರಗುವ ಕಥನವನ್ನು ಹೊಂದಿದೆ ಎಂದು ಸೂಚ್ಯವಾಗಿ ತಿಳಿಸುತ್ತದೆ.  ಫಾತಿಮಾ, ಆಕೆಯ ಗಂಡ ಅಶ್ರಫ್(‌ ಈತ ಮದರಸಾದಲ್ಲಿ ಶಿಕ್ಷಕ ಹಾಗೂ ಮಂತ್ರ-ಧೂಪಗಳ ವೈದ್ಯನೂ ಆಗಿರುತ್ತಾನೆ. “ಉಸ್ತಾದ್”‌ ಎಂದು ಈತನನ್ನು ಗೌರವದಿಂದ ಜನ ಕರೆಯುತ್ತಿರುತ್ತಾರೆ), ಅತ್ತೆ ಮತ್ತು ಮೂರು ಮಕ್ಕಳೊಡನೆ ಸಣ್ಣ ಮನೆಯೊಂದರಲ್ಲಿ ಬಾಳನ್ನು ನಡೆಸುತ್ತಿರುತ್ತಾಳೆ.

ಒಂದು ಸಣ್ಣ ಸಂಗತಿಯನ್ನು ಇರಿಸಿಕೊಂಡು ಒಂದು ಸರಳ ನಿರೂಪಣೆಯ, ಕೌಟುಂಬಿಕ-ಸಾಮಾಜಿಕ ವಾಸ್ತವತೆಯ ಸಿನಿಮಾವನ್ನು ತಮ್ಮ ಪ್ರಥಮ ಪ್ರಯತ್ನದಲ್ಲಿ ಕಟ್ಟಿಕೊಟ್ಟಿದ್ದಾರೆ ಯುವ ನಿರ್ದೇಶಕ ಫಾಸಿಲ್‌ ಮೊಹಮ್ಮದ್.‌  ಫಾತಿಮಾಳ ದೊಡ್ಡ ಮಗ ರಾತ್ರಿ ಮಲಗಿದ್ದಾಗ ಹಾಸಿಗೆಯ ಮೇಲೆ ಮೂತ್ರ ಮಾಡಿರುತ್ತಾನೆ.  ಅದನ್ನು ಶುಚಿಗೊಳಿಸಿ ಫಾತಿಮಾ ಬಿಸಿಲಿನಲ್ಲಿ ಒಣಗುವುದಕ್ಕೆ ಹಾಕಿರುವಾಗ ನಾಯಿಯೊಂದು ಅದರ ಮೇಲೆ ಮೂತ್ರ ಮಾಡಿಬಿಡುತ್ತದೆ. ಆ ಹಾಸಿಗೆ ಮನೆಯಿಂದ ಹೊರಗಡೆ ಹೋಗುತ್ತದೆ. ನಂತರ ಎರಡು ಹಾಸಿಗೆಗಳು ಬರುತ್ತವೆ- ಒಂದು ಹೊಸದು ಮತ್ತು ಇನ್ನೊಂದು ನೆರೆಮನೆ ಹೆಂಗಸು ನೀಡಿದ್ದು. ಬಡ್ಡಿಯ ಜೊತೆ ಕಂತುಗಳ ಮೂಲಕ ಕಟ್ಟಬೇಕಾಗಿರುವುದರಿಂದ, ಬಡ್ಡಿ ವ್ಯವಹಾರ ಇಸ್ಲಾಂ ಮತದಲ್ಲಿ ನಿಷೇಧವಿರುವುದರಿಂದ, ಅಶ್ರಫ್‌ ಹೊಸ ಹಾಸಿಗೆಯನ್ನು ನಿರಾಕರಿಸುತ್ತಾನೆ.  ನೆರೆಮನೆಯಾಕೆ ನೀಡಿದ ಹಾಸಿಗೆಯ  ಮೇಲೆ ಆ ಮನೆಯವರ ಮಂದಿ ಅಸುನೀಗಿರುವುದರಿಂದ ಆತ ಅದರ ಬಳಕೆಗೆ ಅಡ್ಡಗಾಲು ಹಾಕುತ್ತಾನೆ.  ಹಾಸಿಗೆಯ ಅನುಪಸ್ಥಿತಿಯಿಂದ ಫಾತಿಮಾಳ ಬೆನ್ನು ನೋವು ಮುಂದುವರೆಯುತ್ತದೆ! ಬೆನ್ನು ನೋವು ಬರೀ ದೇಹವನ್ನಷ್ಟೇ ಅಲ್ಲ, ಆಕೆಯ ಅದುಮಿಟ್ಟ ಮಾನಸಿಕ ವೇದನೆಯನ್ನು ಹಾಗೂ ಸಂಸಾರದ ಸಾರಥ್ಯದ ಭಾರವನ್ನೂ ಸೂಚಿಸುತ್ತದೆ!

ಅಶ್ರಫ್‌ ಪಿತೃಪ್ರಾಧಾನ್ಯವನ್ನೇ ಉಸಿರಾಡುತ್ತಿರುತ್ತಾನೆ! ಆತ ವಿಶ್ರಮಿಸುತ್ತಿರುವಾಗ ಫ್ಯಾನಿನ ಸ್ವಿಚ್‌ ಕೈಗೆಟಕುವಂತಿದ್ದರೂ, ಅದನ್ನು ಹಾಕಲು ಫಾತಿಮಾಳನ್ನೇ ಕರೆಯುತ್ತಾನೆ.  ಹಾಗೆಯೇ ಹೊರಗೆ ಹೋಗುವಾಗ ಆತನ ಚಪ್ಪಲಿಗಳನ್ನು ಆಕೆಯೇ ತಂದುಕೊಡಬೇಕಾಗಿರುತ್ತದೆ.ʼದಿ ಗ್ರೇಟ್‌ ಇಂಡಿಯನ್‌ ಕಿಚನ್‌ ʼಮಲಯಾಳಂ ಸಿನಿಮಾದಲ್ಲಿ ಪ್ರೊಟೊಗಾನಿಸ್ಟ್‌ ತನ್ನ ಮಾವನಿಗೆ ಇದೇ ರೀತಿಯ ಸೇವೆಯನ್ನು ಮಾಡುತ್ತಿರುತ್ತಾಳೆ. ಆದರೆ ಆಶ್ರಫ್‌ನ ಪಿತೃಪ್ರಧಾನ ನಡವಳಿಕೆಯಲ್ಲಿ ಹಿಂಸೆಯಿರುವುದಿಲ್ಲ.  ಫಾತಿಮಾ ತನ್ನ ಗಂಡನ ಇಂತಹ ಅನೇಕ ನಡವಳಿಕೆಗಳ ಬಗೆಗೆ ಚಕಾರ ಎತ್ತದಿದ್ದರೂ, ಇತರ ಕೆಲವು ಉಸ್ತಾದರಂತೆ ತನಗೂ ನಾಲ್ಕನೇ ಮಗು ಆಗಬೇಕೆಂದು ಆಶ್ರಫ್‌ ಒಂದರ್ಥದಲ್ಲಿ ಪಟ್ಟುಹಿಡಿದಾಗ ಆಕೆ ನಿರಾಕರಿಸುತ್ತಾಳೆ!

ನಂತರ ಫಾತಿಮಾ ಎದುರು ಮನೆಯ ಗೆಳತಿಯ ವ್ಯಾಪಾರಕ್ಕೆ ಸಹಾಯಹಸ್ತವನ್ನು ನೀಡುತ್ತಾಳೆ.  ಹೊಸ ಹಾಸಿಗೆಯನ್ನು ಖರೀದಿಸುವ ನಿಟ್ಟಿನಲ್ಲಿ ಒಂದು ಚೀಟಿ ವ್ಯವಹಾರಕ್ಕೆ ಕೈ ಹಾಕುತ್ತಾಳೆ.  ಸ್ಮಾರ್ಟ್‌ಫೋನನ್ನು ಬಳಸಲು ಕಲಿಯುತ್ತಾಳೆ. ಕೊನೆಗೆ ಅಶ್ರಫ್‌ ತನ್ನ ಚಪ್ಪಲಿಯನ್ನು ತಾನೇ ತಂದು ಹಾಕಿಕೊಳ್ಳಬೇಕಾದ, ಊಟವನ್ನು ತಾನೇ ಬಡಿಸಿಕೊಳ್ಳಬೇಕಾದ, ಫ್ಯಾನಿನ ಸ್ವಿಚ್ಚನ್ನು ತಾನೇ ಹಾಕಿಕೊಳ್ಳಬೇಕಾದ ಸಂದರ್ಭಗಳು ಬರುತ್ತವೆ.   ಯಾವುದೇ ಅತಿರೇಕ ನಡವಳಿಕೆಗೆ ಲಗ್ಗೆ ಹಾಕದೆ ಫಾತಿಮಾ ಪಿತೃಪ್ರಾಧಾನ್ಯಕ್ಕೆ ಸೆಡ್ಡು ಹೊಡೆಯುತ್ತಾಳೆ.  ಇಂತಹ ಪ್ರತಿರೋಧದ ಹಿಂದೆ ಆರ್ಥಿಕ ಶಕ್ತಿ ಹೇಗೆ ಕೆಲಸ ಮಾಡುತ್ತದೆ ಎಂಬ ಎಳೆಯನ್ನು ಬಹಳ ಸೂಕ್ಷ್ಮವಾಗಿ ಸಿನಿಮಾದಲ್ಲಿ ಬಿಂಬಿಸಲಾಗಿದೆ.

ಈ ಸಿನಿಮಾದಲ್ಲಿ ಬೈನರಿ ನೆಲೆಯ ಅಭಿವ್ಯಕ್ತಿಯಿಲ್ಲ.  ಒಂದು ದೃಶ್ಯದಲ್ಲಿ, ಒಂದು ಪ್ರಸಂಗದಲ್ಲಿ ಹಿರಿಯ ಉಸ್ತಾದ್‌ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂಬರ್ಥದ ಮಾತನ್ನು ಅಶ್ರಫ್‌ನೊಡನೆ ಮಾತನಾಡುವಾಗ ಹೇಳುತ್ತಾನೆ! ಪಕ್ಕದ ಮನೆಯ ಹುಡುಗಿಯೊಬ್ಬಳು ತನ್ನ ಬ್ಲಾಗ್‌ಗಾಗಿ ಬೀಚ್‌ನಲ್ಲಿ ವೀಡಿಯೊ ಮಾಡುವಾಗ ಹಿಜಾಬನ್ನು ಧರಿಸಿರುತ್ತಾಳೆ. ಮತೀಯ ಅಸ್ಮಿತೆಯ ಜೊತೆಜೊತೆಗೆ ಆಧುನಿಕವಾಗಿಯೂ ಬಾಳನ್ನು ನಡೆಸಬಹುದು ಎಂಬುದನ್ನು ಇದು ಸೂಕ್ಷ್ಮವಾಗಿ ವೀಕ್ಷಕರಿಗೆ ರವಾನಿಸುತ್ತದೆ.  ಸಾಂಪ್ರದಾಯಿಕತೆ ಮತ್ತು ಆಧುನಿಕತೆಯ ನಡುವೆ ರೊಚ್ಚಿನ ಸೆಣಸಾಟವೂ ಇಲ್ಲಿಲ್ಲ.  ಬದಲಾವಣೆಯೆಂಬುದನ್ನು ಒಳಹರಿವಾಗಿ ಸಿನಿಮಾದಲ್ಲಿ ದಾಟಿಸಲಾಗಿದೆ. ಮೆಲೊಡ್ರಾಮವನ್ನು ಮ್ಯೂಟ್‌ ಮಾಡಲಾಗಿದೆ! ವಿಡಂಬನಾತ್ಮಕ ರೀತಿಯಲ್ಲಿ ಸಾಮಾಜಿಕ ಜಡ್ಡುಗಟ್ಟಿದ ಮೌಲ್ಯಗಳನ್ನು ಪ್ರಶ್ನಿಸಲಾಗಿದೆ.

ಕೇರಳದ ಮಲ್ಲಪುರಂ ಜಿಲ್ಲೆಯ ಪುನ್ನಾನಿಯಲ್ಲಿ ಈ ಸಿನಿಮಾದ ಶೂಟಿಂಗ್‌ ನಡೆಯಿತು.  ಇದು ನಿರ್ದೇಶಕ  ಫಾಸಿಲ್‌ ಮೊಹಮ್ಮದ್‌ ಅವರ ಹುಟ್ಟೂರು. ಕಥೆ ಮತ್ತು ಎಡಿಟಿಂಗ್‌ ಕೂಡ ಇವರದ್ದೇ.   ಶಮ್ಲಾ ಹಂಝಾ ಮತ್ತು ಕುಮಾರ್‌ ಸುನಿಲ್‌ ಕ್ರಮವಾಗಿ ಫಾತಿಮಾ ಮತ್ತು ಅಶ್ರಫ್‌ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇಬ್ಬರೂ ಸುಲಲಿತವಾಗಿ ನಟಿಸಿದ್ದಾರೆ.  ತಾಂತ್ರಿಕ ಸಿಬ್ಬಂದಿಯ ಕೊಡುಗೆಯೂ ಈ ಸಿನಿಮಾದ ಯಶಸ್ಸಿನಲ್ಲಿದೆ. ಕಳೆದ ವರ್ಷ ತಿರುವನಂತಪುರದಲ್ಲಿ ಜರುಗಿದ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇದಕ್ಕೆ ಹಲವು ಪುರಸ್ಕಾರಗಳು ಲಭಿಸಿದವು.  ಇತ್ತೀಚೆಗೆ ಜರುಗಿದ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ(ಆವೃತ್ತಿ -16) ಈ ಚಲನಚಿತ್ರ ಏಷಿಯನ್‌ ಸ್ಪರ್ಧಾ ವಿಭಾಗದ ವಿಶೇಷ ಜ್ಯೂರಿಯಿಂದ ಶ್ಲಾಘನೆಗೆ ಒಳಗಾಯಿತು( ಈ ಬರಹಗಾರ ಕೂಡ ಅಲ್ಲೇ ವೀಕ್ಷಿಸಿದ್ದು). ಗಹನ ವಿಚಾರಗಳನ್ನು ಒಂದು ಸರಳ ಕಥೆ ಮತ್ತು ನಿರೂಪಣೆಯೊಂದಿಗೆ, ವಿಡಂಬನಾತ್ಮಕ ಲೇಪನದೊಡನೆ ಕಟ್ಟಿಕೊಟ್ಟಿರುವುದು ಈ ಸಿನಿಮಾದ ದೊಡ್ಡ ಪ್ಲಸ್‌ ಪಾಯಿಂಟ್.‌ ಫೆಮಿನಿಚಿ ಎಂಬ ಪದವನ್ನು ವಿಡಂಬನೆ ಮತ್ತು ತೆಳು ಅರ್ಥ/ಧಾಟಿಯಲ್ಲಿ ಕೂಡ ಬಳಸಲಾಗುತ್ತದೆ.  ಆದರೆ ಇಲ್ಲಿ ಅದು ನೈಜಾರ್ಥದಲ್ಲಿ, ಸಶಕ್ತವಾಗಿ ಪ್ರಕಟಗೊಂಡಿದೆ.

ಮ ಶ್ರೀ ಮುರಳಿ ಕೃಷ್ಣ

ಲೇಖಕರು

ಇದನ್ನೂ ಓದಿ- http://“ದಿ ಗರ್ಲ್ ವಿಥ್ ದಿ ನೀಡಲ್” ಶಿಶು ಹಂತಕಿಯ ಕಾರ್ಯ; ಬೆಚ್ಚಿ ಬೀಳಿಸುವ ಕ್ರೌರ್ಯ https://kannadaplanet.com/the-girl-with-the-needle-film-review/

More articles

Latest article