ಬಿಜೆಪಿಗೆ ಸ್ವಂತ ಶಕ್ತಿ ಇಲ್ಲ, ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದಿದೆ: ಸಿಎಂ ಸಿದ್ದರಾಮಯ್ಯ

Most read

ಬೆಂಗಳೂರು: ರೈತರ ಸಾಲ ಮನ್ನಾ  ಮಾಡಿ ಅಂದರೆ ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲ ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ ಇದೇ ಬಿಜೆಪಿ ಅದಾನಿ-ಅಂಬಾನಿಯ ಸಾಲ ಮನ್ನಾ ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಮೋದಿ  ಹಾಗೂ ರಾಜ್ಯದ ಬಿಜೆಪಿಯವರು ಸುಳ್ಳು ಸುಳ್ಳೇ ಟೀಕಿಸಿದರು. ಗ್ಯಾರಂಟಿಗಳಿಂದ ರಾಜ್ಯದ ಖಜಾನೆ ಖಾಲಿಯಾಗಿ ರಾಜ್ಯ ದಿವಾಳಿಯಾಗುತ್ತದೆ ಎಂದು ಆಪಾದಿಸಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ‘ಮೋದಿ ಕಿ ಗ್ಯಾರಂಟಿ’ ಎಂದು ಘೋಷಿಸಿದರು. ಗ್ಯಾರಂಟಿಗಳನ್ನು ವಿರೋಧಿಸಿದ ಬಿಜೆಪಿಯವರು ಚುನಾವಣೆಯನ್ನು ಎದುರಿಸಿದರು. 1980ರಲ್ಲಿ ಬಿಜೆಪಿ ಪ್ರಾರಂಭವಾದಾಗ ಕೇವಲ 2 ಸ್ಥಾನಗಳನ್ನು ಪಡೆದಿತ್ತು. ಆದರೆ ಈ ಲೋಕಸಭಾ ಚುನಾವಣೆಯಲ್ಲಿ  ಕಳೆದ ಬಾರಿಗಿಂತ ಕಡಿಮೆ ಸ್ಥಾನವನ್ನು ಪಡೆದಿದ್ದಾರೆ. ಕರ್ನಾಟಕದ ಇತಿಹಾಸವನ್ನು ಅವಲೋಕಿಸಿದರೆ, ಬಿಜೆಪಿಯನ್ನು ಜನರು ಆಶೀರ್ವಾದವೇ ಮಾಡಿಲ್ಲ. ನಾವು ಕಳೆದ ಬಾರಿ ಕಾಂಗ್ರೆಸ್ ಕಮ್ಮಿ ಗೆದ್ದಿದ್ದರೂ , ಈ ಬಾರಿ ಬಹುಮತ ಸಾಧಿಸಿದ್ದೇವೆ, ಮುಂದಿನ ಬಾರಿ ಬಿಜೆಪಿಯವರನ್ನು ಧೂಳಿಪಟ ಮಾಡುತ್ತೇವೆ ಎಂದು ಗುಡುಗಿದರು.

ಬಿಜೆಪಿ 2008 ರಿಂದ 2013 , 2019 ರಿಂದ 2023 ರವರೆಗೆ ಅಧಿಕಾರ ನಡೆಸಿದೆ.  ಆದರೆ ಒಮ್ಮೆಯೂ ಬಹುಮತ ನೀಡದೇ ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಯವರು ತಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿ, ಅದರಲ್ಲಿ ಶೇ.10 ರಷ್ಟು ಈಡೇರಿಸಲು ಸಾಧ್ಯವಾಗಲಿಲ್ಲ. ಇದೇ ಸದನದಲ್ಲಿ ಯಡಿಯೂರಪ್ಪನವರು ಭರವಸೆಗಳನ್ನು ಈಡೇರಿಸಲು, ಸಾಲ ಮನ್ನಾ ಮಾಡಲು ನಾವು ನೋಟ್ ಪ್ರಿಂಟ್ ಮೆಷಿನ್ ಇಟ್ಟಿಲ್ಲ ಎಂದಿದ್ದರು ಎಂದು ನೆನಪಿಸಿದರು.

ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸರ್ಕಾರದ ಸಾಧನೆಗಳಿಗೆ ಕನ್ನಡಿ ಹಿಡಿದಿದ್ದಾರೆ. ಸಂಪೂರ್ಣ ಸತ್ಯ ಹೇಳಿದಾರೆ. ವಂದನಾ ನಿರ್ಣಯದ ಮೇಲೆ ಸುಮಾರು ವಿರೋಧಪಕ್ಷದ ನಾಯಕರು ಸೇರಿದಂತೆ 16 ಜನ ಸದಸ್ಯರು ಸುಮಾರು 9ಗಂಟೆ 56 ನಿಮಿಷಗಳ ಕಾಲ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಸದಸ್ಯರ ಟೀಕೆಗಳು, ಸಲಹೆ ಸೂಚನೆಗಳನ್ನು ನಾನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳಿಗೆ ಸರಿದಾರಿ ತೋರಲು ಟೀಕೆಗಳು ಇರಬೇಕು.  ಸತ್ಯವನ್ನು ಮರೆಮಾಚಿ ಟೀಕೆ ಮಾಡಬಾರದು. ಇದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮಾರಕ. ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲಬೇಕು. ದಾಖಲಾತಿಗಳನ್ನು ಸದನದ ಮುಂದಿಡಬೇಕು. ಈ ರೀತಿಯನ್ನು ನಾನೆಂದಿಗೂ ಸ್ವಾಗತಿಸುತ್ತೇನೆ. ಸರ್ಕಾರದ ಕಳೆದೊಂದು ವರ್ಷದ ಸಾಧನೆಗಳನ್ನು ರಾಜ್ಯಪಾಲರ ಭಾಷಣದ ಮೂಲಕ ಪ್ರಸ್ತಾಪಿಸಲು ಸಾಧ್ಯವಿಲ್ಲದಿದ್ದರೂ , ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗಿದೆ.  ಇತ್ತೀಚೆಗೆ ಹೆಚ್ಚು ವಿದ್ಯಾವಂತರು , ವಿಚಾರವಂತರು ಕೆಳಮನೆ ಹಾಗೂ ಮೇಲ್ಮನೆಗೂ ಬರುತ್ತಿರುವುದರಿಂದ , ಚರ್ಚೆಗಳ ಮಟ್ಟ ಎತ್ತರಕ್ಕೆ ಹೋಗಬೇಕೇ ವಿನ: ಗುಣಮಟ್ಟ ಇಳಿಯಬಾರದು ಎಂದು ಹೇಳಿದರು.

ಚುನಾವಣೆ ಪೂರ್ವದಲ್ಲಿ 2022 ರಲ್ಲಿ                ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದೆವು.  2023ರಲ್ಲಿ ಜೂನ್ 11 ರಲ್ಲಿ ಶಕ್ತಿ ಯೋಜನೆಯನ್ನು ವಿಧಾನಸೌಧದಲ್ಲಿ , ಜುಲೈ ತಿಂಗಳಲ್ಲಿ ಅನ್ನಭಾಗ್ಯ, ಗೃಹಜ್ಯೋತಿಗಳನ್ನು ಜಾರಿ ಮಾಡಲಾಯಿತು. ಆಗಸ್ಟ್ 1 ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿಯನ್ನು ಜಾರಿ ಮಾಡಲಾಯಿತು. ಡಿಸೆಂಬರ್ ನಲ್ಲಿ ಶಿವಮೊಗ್ಗದಲ್ಲಿ ಯುವನಿಧಿಯನ್ನು ಪ್ರಾರಂಭಿಸಲಾಯಿತು. ಗ್ಯಾರಂಟಿ ಯೋಜನೆಗಳನ್ನು  ಒಂದು ವರ್ಷದ ಒಳಗೆಯೇ ಜಾರಿ ಮಾಡಲಾಯಿತು. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಸದನಕ್ಕೆ ತಿಳಿಸಿದರು.

More articles

Latest article