ಬೆಂಗಳೂರು: ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸೋಲಿಸಿದವರು ಯಾರು ಎಂಬ ಪ್ರಶ್ನೆ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ನಾಂದಿಯಾಯಿತು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಅಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಪರಸ್ಪರ ರಾಜೀನಾಮೆ ನೀಡುವ ಸವಾಲು ಹಾಕುವ ಹಂತವೂ ತಲುಪಿತ್ತು.
ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪರಿಶಿಷ್ಟರ ಅಭಿವೃದ್ಧಿ ವಿಷಯದಲ್ಲಿ ಬಿಜೆಪಿಗೆ ಬದ್ಧತೆ ಇಲ್ಲ ಎಂದು ಟೀಕಿಸಿದರು. ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಡಿ. ವೇದವ್ಯಾಸ ಕಾಮತ್, ಹರೀಶ್ ಪೂಂಜ, ಡಾ. ಚಂದ್ರು ಲಮಾಣಿ, ದೊಡ್ಡನಗೌಡ ಪಾಟೀಲ, ಸಿಮೆಂಟ್ ಮಂಜು, ಬಸನಗೌಡ ಪಾಟೀಲ ಯತ್ನಾಳ, ಮತ್ತಿತರರು ಅಂಬೇಡ್ಕರ್ ವಿಷಯ ಪ್ರಸ್ತಾಪಿಸಿ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಯಾರು? ಅವರ ನಿಧನದ ನಂತರ ಅಂತ್ಯಸಂಸ್ಕಾರಕ್ಕೆ ಮತ್ತು ಸ್ಮಾರಕ ನಿರ್ಮಾಣಕ್ಕೆ ದೆಹಲಿಯಲ್ಲಿ ಸ್ಥಳಾವಕಾಶ ನೀಡದೆ ಅವಮಾನಿಸಿದವರು ಯಾರು ಎಂದು ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದರು.
ಅಂಬೇಡ್ಕರ್ ಅವರನ್ನು ಸೋಲಿಸಿದ್ದು, ಸಾವರ್ಕರ್. ಈ ವಿಷಯವನ್ನು ಅಂಬೇಡ್ಕರ್ ಅವರೇ ಪತ್ರವೊಂರದರಲ್ಲಿ ತಿಳಿಸಿದ್ದಾರೆ ಎಂದು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದಾಗ ಪತ್ರ ತೋರಿಸುವಂತೆ ಬಿಜೆಪಿಯವರು ಆಗ್ರಹಿಸಿದರು. ಆಗ ಪ್ರಿಯಾಂಕ್ ಖರ್ಗೆ, ಪತ್ರ ತೋರಿಸುತ್ತೇನೆ. ಪತ್ರದಲ್ಲಿರುವುದು ನಿಜವಾದರೆ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ? ಪತ್ರದಲ್ಲಿ ಹಾಗೆ ಉಲ್ಲೇಖವಿಲ್ಲದಿದ್ದರೆ ರಾಜೀನಾಮೆ ನೀಡಲು ನಾನು ಸಿದ್ಧ ಎಂದು ಸವಾಲು ಹಾಕಿದರು.
ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಎಂದು ಯತ್ನಾಳ ಆರೋಪಿಸಿದರು. ಕಾಂಗ್ರೆಸ್‌ನವರೇ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಎಂದು ಕೆ.ಆರ್. ರಮೇಶ್ ಕುಮಾರ್ ಅವರು ಇದೇ ಸದನದಲ್ಲಿ ಹೇಳಿದ್ದರು ಎಂದು ಬೆಲ್ಲದ ಹೇಳಿದರು. ಸ್ವಲ್ಪ ಸಮಯದ ನಂತರ ಸಿಬ್ಬಂದಿಯಿಂದ ಬ್ಯಾಗ್ ತರಿಸಿಕೊಂಡ ಪ್ರಿಯಾಂಕ್ ಅವರು, ಮೂರು ಪುಟಗಳ ಪತ್ರವೊಂದನ್ನು ತೆಗೆದು ಪ್ರದರ್ಶಿಸಿದರು. 1952ರ ಜನವರಿ 18ರಂದು ಅಂಬೇಡ್ಕರ್ ಅವರು ತಮ್ಮ ಪರಿಚಯಸ್ಥರಿಗೆ ಬರೆದ ಪತ್ರದಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ತಮ್ಮ ಚುನಾವಣಾ ಸೋಲಿನಲ್ಲಿ ಹೇಗೆ ಪಾತ್ರ ವಹಿಸಿದ್ದಾರೆ ಎಂಬುದನ್ನು ವ್ಯಕ್ತಪಡಿಸಿದಾರೆ ಎಂದು ಪತ್ರದ ಸಾಲುಗಳನ್ನು ಉಲೇಖಿಸಿ ಸವಾಲು ಸ್ವೀಕರಿಸಿ ಚರ್ಚೆಗೆ ಬನ್ನಿ ಎಂದು ಬಿಜೆಪಿ ಸದಸ್ಯರಿಗೆ ಪಂಥಾಹ್ವಾನ ನೀಡಿದ್ದರು.
ಬಿಜೆಪಿ ಸದಸ್ಯರು ಸಚಿವ ಪ್ರಿಯಾಂಕ್ ಅವರನ್ನು ಉದ್ದೇಶಿಸಿ ಏರಿದ ಧ್ವನಿಯಲ್ಲಿ ಮಾತನಾಡಲು ಆರಂಭಿಸಿದರು. ‘ನಮ್ಮನ್ನು ಹೆದರಿಸಲು ಬರಬೇಡಿ. ಇದು ಸದನ, ಆರ್‌ಎಸ್‌ಎಸ್ ಕಚೇರಿ ಅಲ್ಲ ಎಚ್ಚರಿಕೆʼ ಎಂದು ಪ್ರಿಯಾಂಕ್ ತಿರುಗೇಟು ನೀಡಿದರು.
ತಮ್ಮ ಪತ್ರದಲ್ಲಿ, ಡಾ. ಅಂಬೇಡ್ಕರ್ ಅವರು ಸಾವರ್ಕರ್ ತಮ್ಮ ಸೋಲಿಗೆ ಕಾರಣವೆಂದು ನಂಬಿದ ಅಂಶಗಳನ್ನು ವಿವರಿಸಿದ್ದಾರೆ. ಸಾವರ್ಕರ್ ಅವರ ಪ್ರಭಾವ ಮತ್ತು ರಾಜಕೀಯ ಕೌಶಲವನ್ನು ತಮ್ಮ ಪತ್ರದಲ್ಲಿ ಎತ್ತಿ ತೋರಿಸಿದ್ದರು ಎಂದು ಖರ್ಗೆ ಹೇಳಿದರು.
ಸದನದಿಂದ ಹೊರಹಾಕಬೇಕಾಗುತ್ತದೆ: ಸದನದಲ್ಲಿ ಇರಲು ಇಷ್ಟವಿಲ್ಲದಿದ್ದರೆ ಹೊರ ನಡೆಯಿರಿ. ಇಲ್ಲದಿದ್ದರೆ ತೆಗೆದು ಬಿಸಾಕಬೇಕಾಗುತ್ತದೆ ಎಂದು ಯು.ಟಿ. ಖಾದರ್ ಗಲಾಟೆ ಮಾಡುತ್ತಿದ್ದ ಸದಸ್ಯರಿಗೆ ಎಚ್ಚರಿಕೆ ನೀಡಿದರು. ಅಂಬೇಡ್ಕರ್ ಅವರ ವಿಷಯದಲ್ಲಿ ಸದನದಲ್ಲಿ ದೀರ್ಘ ಕಾಲ ಗದ್ದಲ ಮುಂದುವರಿಯಿತು. ವಿರೋಧ ಮತ್ತು ಆಡಳಿತ ಪಕ್ಷದ ಸದಸ್ಯ ಮಾತಿನ ಚಕಮಕಿ ಜೋರಾಯಿತು. ಗದ್ದಲ ನಿಯಂತ್ರಣಕ್ಕೆ ಬಾರದಿದ್ದಾಗ ಸಿಟ್ಟಾದ ಖಾದರ್ ಮೇಲಿನಂತೆ ಎಚ್ಚರಿಕೆ ನೀಡಿದರು. ಕೆಲ ಸಮಯದ ಬಳಿಕ ಪರಿಸ್ಥಿತಿ ತಿಳಿಯಾಯಿತು