ಬೆಂಗಳೂರು: ರಾಜ್ಯಪಾಲರು ರಾಜ್ಯ ಸರ್ಕಾರದ ಅಭಿವೃದ್ಧಿ ಮತ್ತು ಸಾಧನೆಗಳ ಬಗ್ಗೆ ಹೇಳಿರುವುದೆಲ್ಲಾ ಸತ್ಯ. ಸಿಎಂ

Most read

ಬೆಂಗಳೂರು: ರಾಜ್ಯಪಾಲರ ಭಾಷಣ ಕುರಿತುವಿರೋಧ ಪಕ್ಷದ ನಾಯಕರಾದಿಯಾಗಿ 14 ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರು ಮಾತನಾಡಿದ್ದಾರೆ. ರಾಜ್ಯಪಾಲರು ಒಂದು ಗಂಟೆಗೂ ಮೀರಿ ಸುದೀರ್ಘವಾಗಿ ಮಾತನಾಡಿ ಸರ್ಕಾರದ ಸಾಧನೆಗಳನ್ನು ಓದಿ ಹೇಳಿದ್ದಾರೆ. ವಾಸ್ತವವನ್ನು ಸದನಕ್ಕೆ ತಿಳಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ವಾಸ್ತವಾಂಶಗಳನ್ನು ಸದನದ ಸದಸ್ಯರಿಗೆ ತಿಳಿಸುತ್ತೇನೆ. ನಮ್ಮ ಸರ್ಕಾರ ಜನರ ಆಶೀರ್ವಾದದಿಂದ 2023 ಮೇ 22 ರಂದು ಅಧಿಕಾರಕ್ಕೆ ಬಂದಿತು. ನಮ್ಮ ಪಕ್ಷ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದು 2 ವರ್ಷಗಳಾಗುತ್ತಿದೆ. ಇದು ಸರ್ಕಾರ ಬಂದ ನಂತರ ರಾಜ್ಯಪಾಲರ ಎರಡನೇ ಭಾಷಣವಾಗಿದೆ.

ಬಿಜೆಪಿಯ ಅಶೋಕ್ ಹಾಗು ಸುನೀಲ್ ಕುಮಾರ್ ಅವರು ಮಾತನಾಡುವಾಗ ಕರಿಮಣಿ ಮಾಲೀಕ ಯಾರು ಎಂದು ಪ್ರಶ್ನಿಸಿದ್ದಾರೆ. ನನ್ನ ಹಾಗೂ ಬಹುತೇಕ ಸದಸ್ಯರ ಪ್ರಕಾರ ಇದು ಅರ್ಥಹೀನ ಮಾತುಗಳು. ನಾನು ಹಿರಿಯ ಸದಸ್ಯರಿಂದ ಇಂಥ ಮಾತುಗಳನ್ನು ನಿರೀಕ್ಷೆ ಇರಲಿಲ್ಲ.  ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕರಿಮಣಿ ಮಾಲೀಕ ಯಾರು ಎನ್ನುವುದು ಕೀಳು ಅಭಿರುಚಿಯ ಪ್ರಯೋಗ.  ನಿಮ್ಮ ಪಕ್ಷದಲ್ಲಿ ಭಿನಾಭಿಪ್ರಯಗಳಿಲ್ಲವೇ? ನಿಮ್ಮ ಭಿನ್ನಾಭಿಪ್ರಾಯಗಳು ಯಾವ ಮಟ್ಟಕ್ಕೆ ಹೋಗಿವೆ ಎಂಬ ಚರ್ಚೆ ಬೇಡ. ಅಭಿರುಚಿ ಹೀನ ಎಂದಷ್ಟೇ ಹೇಳಿದ್ದೇನೆ. ನಿಮಗೆ ಸರಿಯಿದ್ದರೆ ಓಕೆ. ಜನ ಅಂತಿಮವಾಗಿ ತೀರ್ಮಾನ ಮಾಡುತ್ತಾರೆ ಎಂದರು.

ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸದನಕ್ಕೆ ದೊಡ್ಡ ಸುಳ್ಳು ಹೇಳಿದ್ದಾರೆ. ಆರ್.ಎಸ್.ಎಸ್ ಬೈಠಕ್ ನಲ್ಲಿದ್ದಾರೋ, ಸದನದಲ್ಲಿದ್ದಾರೋ ಗೊತ್ತಿಲ್ಲ. ಕೃಷ್ಣ ಭಾಗ್ಯ ಜಲ ನಿಗಮಕ್ಕೆ ಕೇಂದ್ರ ಸರ್ಕಾರ 2 ಸಾವಿರ ಕೋಟಿ ಕೊಟ್ಟಿದೆ. ಕರ್ನಾಟಕ ನೀರಾವರಿ ನಿಗಮಕ್ಕೆ 3300 ಕೋಟಿ, ವಿಶ್ವೇಶ್ವರಯ್ಯ ಜಲನಿಗಮ ಸೇರಿ ಕರ್ನಾಟಕ ನೀರಾವರಿಗೆ ಒಟ್ಟು 10 ಸಾವಿರ ಕೋಟಿ ರೂಪಾಯಿ ರಾಜ್ಯದ ನೀರಾವರಿ ನಿಗಮಕ್ಕೆ ಕೊಟ್ಟಿದೆ ಎಂದು ಹೇಳಿದ್ದಾರೆ. ಮಾಹಿತಿ ಕೊರತೆಯೋ ಉದ್ದೇಶಪೂರ್ವಕ ಟೀಕೆಗಾಗಿ ಹೇಳಿದ್ದಾರೋ ಗೊತ್ತಿಲ್ಲ. ವಾಸ್ತವ ಏನೆಂದರೆ 24-1-2025 ರಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸ್ಕೀಂ ಆಫ್ ಸ್ಪೆಶಲ್ ಅಸಿಸ್ಟೆನ್ಸ್ ಕೊಟ್ಟಿದ್ದು, 50 ವರ್ಷಗಳ ಕಾಲ ಬಡ್ಡಿ ರಹಿತವಾಗಿ ವಿಶೇಷ ನೆರವು ನೀಡಿದೆ. ಮುಳವಾಡ ಏತ ನೀರಾವರಿಗೆ ₹200 ಕೋಟಿ, ಮಹಾಲಕ್ಷ್ಮಿ ಮಲಪ್ರಭಾ ಯೋಜನೆಗೆ ₹200 ಕೋಟಿ, ಭ್ರದಾ ಮೇಲ್ದಂಡೆಗೆ 300 ಕೋಟಿ ಒಟ್ಟು ₹1,030 ಕೋಟಿ  ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಕೊಟ್ಟಿರುವುದು ನಮ್ಮ ಪಾಲಿನ ಅನುದಾನವಲ್ಲ. ಬದಲಿಗೆ ಅವರು ಕೊಟ್ಟಿರುವುದು ಬಡ್ಡಿ ರಹಿತ ಸಾಲ ಮಾತ್ರ. ವಿರೋಧಪಕ್ಷದವರಿಗೆ ಮಾತನಾಡಲು ಏನೂ ಸಿಗದೆ ಸುಳ್ಳು ಮಾಹಿತಿಯನ್ನು ಸದನಕ್ಕೆ ನೀಡಿದ್ದಾರೆ ಎಂದರು.

ರಾಜ್ಯ ಸರ್ಕಾರ ಗ್ಯಾರಂಟಿ ಜಾರಿ ಮಾಡಿದರೆ ಆರ್ಥಿಕವಾಗಿ ದಿವಾಳಿಯಾಗುತ್ತದೆ. ಅಭಿವೃದ್ಧಿಗೆ ಹಣವಿರುವುದಿಲ್ಲ ಎಂದು ನೀವು ಮಾತ್ರವಲ್ಲ ದೇಶದ ಪ್ರಧಾನಿಗಳು ಕೂಡ ಟೀಕಿಸಿದ್ದರು. ಆದರೆ ನೀವೇ ಲೋಕಸಭಾ ಚುನಾವಣೆಯಲ್ಲಿ ಮೋದಿ ಕಿ ಗ್ಯಾರಂಟಿ ಎಂದು ಘೋಷಣೆ ಮಾಡಿದ್ದೀರಿ. ಗ್ಯಾರಂಟಿಗಳನ್ನು ನಿರಂತರವಾಗಿ ವಿರೋಧಿಸಿದವರೆ ಈ ಕೆಲಸ ಮಾಡಿದ್ದೀರಿ. ಅನೇಕ ರಾಜ್ಯಗಳಲ್ಲಿ ಇದನ್ನು ನಕಲು ಮಾಡಿದ್ದೀರಿ. ಬಿಜೆಪಿಯವರು ವ್ಯಕ್ತಿ ಪೂಜೆಯನ್ನು ಕಲಿತಿದ್ದಾರೆ. ನಾವು ವ್ಯಕ್ತಿ ಪೂಜೆ ಮಾಡುವುದಿಲ್ಲ. ಆದ್ದರಿಂದ ಸಿದ್ದರಾಮಯ್ಯ ಗ್ಯಾರಂಟಿ ಎಂದು ಘೋಷಣೆ ಮಾಡಿಲ್ಲ. ನಾವು ರಾಜ್ಯದ ಜನರ ಗ್ಯಾರಂಟಿ ಎಂದು ಘೋಷಿಸಿದ್ದೇವೆಎಂದು ಹೇಳಿದರು.

ಕೇಂದ್ರ ಸರ್ಕಾರದ Indian institute of Public Administration ಸಂಸ್ಥೆಯ ಅಧ್ಯಕ್ಷರಾದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಸಚಿವ  ಜಿತೇಂದ್ರ ಸಿಂಗ್ ಪ್ರಶಂಸೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದಾರೆ. ಎನ್.ಡಿ.ಎ – ಬಿಜೆಪಿ ಸರ್ಕಾರದ ಸಚಿವರುಗಳು, ಅಧಿಕಾರಿಗಳು ನನ್ನೊಂದಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚಿಸಿದ್ದು ಏಕೆ? ಇಲ್ಲಿ ನೀವು ವಿರೋಧಿಸುತ್ತಿದ್ದೀರಿ. ಗ್ಯಾರಂಟಿ ಯೋಜನೆಗಳನ್ನು ನೀವು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಕಲು ಮಾಡಿದ್ದೀರಿ ಎಂದು ತಿರುಗೇಟು ನೀಡಿದರು.

ಸರ್ಕಾರದ ತಪ್ಪುಗಳಿದ್ದರೆ, ಸರ್ಕಾರದ ಖಜಾನೆಗೆ ತೊಂದರೆಯಿದ್ದರೆ ಆಡಳಿತ ಪಕ್ಷದವರ ಗಮನಕ್ಕೆ ತರುವುದು ವಿರೋಧ ಪಕ್ಷದ ಕೆಲಸ. ಆ ಕೆಲಸ ಮಾಡಬೇಕು.  ಗ್ಯಾರಂಟಿ ಯೋಜನೆಗಳಿಗೆ ಫೆಬ್ರವರಿ ವರೆಗೆ ನಮ್ಮ ಸರ್ಕಾರ ಬರೋಬ್ಬರಿ ₹76,509 ಕೋಟಿ ನೀಡಲಾಗಿದೆ. ಇದು ಸತ್ಯ ಎನ್ನುವುದು ಸದನದಲ್ಲಿರುವ ಪ್ರತಿಯೊಬ್ಬರಿಗೂ ಸ್ಪಷ್ಟವಾಗಿ ಗೊತ್ತಿದೆ. ನಮ್ಮ ಸರ್ಕಾರ ದಿವಾಳಿಯಾಗಿದ್ದರೆ 76,509 ಕೋಟಿ ಕೊಡಲು ಸಾಧ್ಯವಿತ್ತೆಎಂದು ಪ್ರಶ್ನಿಸಿದರು.

1.26 ಕೋಟಿ ಕುಟುಂಬಗಳಿಗೆ  ಯೋಜನೆಗಳು ತಲುಪುತ್ತಿದ್ದು, ಕೊಟ್ಟ ಮಾತಿನಂತೆ ನಡೆದಿದ್ದೇವೆ. ಯಾವ ಕಾರಣಕ್ಕೂ ಯಾವ ಕಾರ್ಯಕ್ರಮವನ್ನೂ ನಿಲ್ಲಿಸುವುದಿಲ್ಲ. ಸಾಲಮನ್ನಾ ಮಾಡಿ ಅಂದರೆ ಹಣ ಎಲ್ಲಿಂದ ತರುವುದು ಎಂದು ಹೇಳಿದ ಬಿಜೆಪಿ, ಅದಾನಿಯವರಿಗೆ 17 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದೀರಿ. ಇದು ನ್ಯಾಯವೇ? ರಾಜಕೀಯ ದುರುದ್ದೇಶ ಬಿಟ್ಟು ಮಾತನಾಡಬೇಕೆಂದು ವಿರೋಧ ಪಕ್ಷದವರಿಗೆ ಮನವಿ ಮಾಡುತ್ತೇನೆ ಎಂದರು.

ಕರ್ನಾಟಕ 2025-26 ನೇ ಸಾಲಿಗೆ 5 ಲಕ್ಷ ಕೋಟಿ ರೂಪಾಯಿ ತೆರಿಗೆ ಕೊಡುತ್ತಿದೆ.  ನಮಗೆ ತೆರಿಗೆ ಪಾಲು ಅಂದಾಜು 51 ಸಾವಿರ ಕೋಟಿ ವಾಪಸ್ಸು ಬರಬೇಕಾಗುತ್ತದೆ. ಹಾಗೆಂದು ಕೇಳಿದರೆ ಕೇಂದ್ರ ಸರ್ಕಾರದ್ದು ಮಾತನಾಡಬಾರದೆಂದು ವಿಪಕ್ಷ ನಾಯಕ ಅಶೋಕ್ ಪ್ರಶ್ನಿಸುತ್ತಾರೆ.  ರಾಜ್ಯಕ್ಕೆ 15 ನೇ ಹಣಕಾಸು ಯೋಜನೆಯಡಿ  ಅನುದಾನದಲ್ಲಿ ಆಗಿರುವ ಅನ್ಯಾಯವನ್ನು ನಾವು ಪ್ರಶ್ನಿಸಬಾರದಂತೆ. ಅನ್ಯಾಯ ಸರಿ ಮಾಡಿ ಎಂದು ಕೇಳಬಾರದಾ ಎಂದರು.

ಎಸ್ ಸಿ ಎಸ್ ಪಿ/ ಟಿ ಎಸ್.ಪಿ ಕಾಯ್ದೆ ಬಂದ ನಂತರ ರಾಜ್ಯದಲ್ಲಿ ₹26,127 ಕೋಟಿ ವೆಚ್ಚ  ಮಾಡಲಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಒಟ್ಟು 5 ವರ್ಷಗಳಲ್ಲಿ ನೀಡಿದ್ದ ₹35,464 ಕೋಟಿ ಅನುದಾನದಲ್ಲಿ  ₹29,452 ಕೋಟಿ ವೆಚ್ಚ ಮಾಡಿದ್ದಾರೆ.  ನಾವು ಅಧಿಕಾರದಲ್ಲಿದ್ದ ನಾಲ್ಕು ವರ್ಷಗಳಲ್ಲಿ ₹1,80,000 ಕೋಟಿ ವೆಚ್ಚ ಮಾಡಿದ್ದೇವೆ. ದಲಿತರ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿಲ್ಲ. ದಲಿತ ಸಮುದಾಯಕ್ಕೆ ಗುಜರಾತ್ ಬಿಜೆಪಿ ಸರ್ಕಾರ 2.38% ರಷ್ಟು, ಮಹಾರಾಷ್ಟ್ರ 3.6% ಹಾಗೂ ಕೇಂದ್ರ ಸರ್ಕಾರ ಕೇವಲ 2.87% ಮಾತ್ರ ಹಣ ಬಜೆಟ್ ನಲ್ಲಿ ತೆಗೆದಿಟ್ಟಿದೆ. ಆದರೆ ಕಾಂಗ್ರೆಸ್ ಸರ್ಕಾರ ಶೇ7.46 ರಷ್ಟು ಹಣ ಮೀಸಲಿಟ್ಟು ಖರ್ಚು ಮಾಡಿದೆ. ಬಿಜೆಪಿ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾಯ್ದೆಯಡಿ 5 ವರ್ಷಗಳಲ್ಲಿ ₹35,464 ಕೋಟಿ ಅನುದಾನ ಹಂಚಿಕೆ ಮಾಡಿ ₹22,480 ಕೋಟಿ ವೆಚ್ಚ ಮಾಡಿದ್ದಾರೆ ಎಂದು ತಿಳಿಸಿದರು.

ಈ ಕಾಯ್ದೆ ಬಂದದ್ದಕ್ಕೆ ಜನಸಂಖ್ಯೆಗೆ ಅನುಸಾರವಾಗಿ ಹಣ ವೆಚ್ಚ ಮಾಡಬೇಕು. 17.15% ಪ.ಜಾತಿ, ಪ.ವರ್ಗ 6.95% ಎರಡೂ ಸೇರಿ 24.1% ಇದ್ದಾರೆ. ಯೋಜನೆಯ ಹಣದಲ್ಲಿ 24.1%  ಕೂಡಲೇಬೇಕು. ಮೊದಲು ಅಷ್ಟು ಖರ್ಚು ಮಾಡುತ್ತಿರಲಿಲ್ಲ. ಒಂದು ವೇಳೆ ಹಣವನ್ನು ಖರ್ಚು ಮಾಡದೆ ಹೋದರೆ ಅಧಿಕಾರಿಯ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಈ ವರ್ಷ ಖರ್ಚು ಮಾಡಲು ಸಾಧ್ಯವಾಗದಿದ್ದರೆ ಮುಂದಿನ ವರ್ಷಕ್ಕೆ ಅದು ಸೇರಿಕೊಳ್ಳುತ್ತದೆ. ₹39,121 ಕೋಟಿ ಕಳೆದ ವರ್ಷ ಮೀಸಲಿಟ್ಟಿದ್ದು, ಈ ಸಾಲಿಗೆ ₹42,018 ಕೋಟಿ ಮೀಸಲಿಡಲಾಗಿದೆ. ಈ ಕಾಯ್ದೆಯನ್ನು ಸಂವಿಧಾನದ ಆಶಯಗಳನ್ನು ಈಡೇರಿಸಲೆಂದು ರೂಪಿಸಲಾಗಿದೆ. ಕೇಂದ್ರ ಸರ್ಕಾರ ಇಂದಿನವರೆಗೆ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾಯ್ದೆಯನ್ನು ಜಾರಿ ಮಾಡಿಲ್ಲ.  ಕಳೆದ ಸಾಲಿನಲ್ಲಿ ಕರ್ನಾಟಕದಲ್ಲಿ 3,71,273 ಕೋಟಿ ರೂ.ಗಳ ಬಜೆಟ್ ನಲ್ಲಿ ₹27,674 ಕೋಟಿ ಎಸ್.ಸಿ.ಎಸ್.ಪಿ ಗಾಗಿಯೇ ಅಂದರೆ ಶೇ. 7.46% ಮೀಸಲಿಟ್ಟಿದೆ. ಗುಜರಾತ್‌ನ ಬಜೆಟ್ ಗಾತ್ರ  ₹3,70,000 ಕೋಟಿ, ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಗಾಗಿ ಶೇ 2.38% ಮೀಸಲಿಟ್ಟಿದ್ದಾರೆ. ಮಹಾರಾಷ್ಟ್ರದ ಬಜೆಟ್ ₹6,12,293 ಕೋಟಿ ಇದ್ದರೆ, 18,765 ಕೋಟಿ ಇಟ್ಟಿದ್ದಾರೆ. ಇದು ಬಜೆಟ್‌ನ 3.6% ಇದೆ ಎಂದರು.

ಬೆಂಗಳೂರು ಅಭಿವೃದ್ಧಿಗೆ ಉಚ್ಚ ನ್ಯಾಯಾಲಯದವರು ಬಿಜೆಪಿ ಅಧಿಕಾರದಲ್ಲಿದ್ದಾಗ ಏನೇನು ಹೇಳಿದ್ದರು ಎಂದು ತಿಳಿಸಬೇಕಾ? 1,700 ಕೋಟಿ ವೈಟ್ ಟಾಪಿಂಗ್ ಗೆ, 15 ಲಕ್ಷ ರೂಪಾಯಿಗಳನ್ನು ಪ್ರತಿ ವಾರ್ಡ್‌ಗೆ ಗುಂಡಿ ಮುಚ್ಚಲು, ಡಾಂಬರೀಕರಣಕ್ಕೆ 700 ಕೋಟಿ ನೀಡಲಾಗಿದೆ. ಈ ವರ್ಷಕ್ಕೆ 3000 ದ ಜೊತೆಗೆ ನಾಲ್ಕು ಸಾವಿರ ಸೇರಿಸಿ 7000 ಕೋಟಿಗಳನ್ನು ಮುಂದಿನ ವರ್ಷಕ್ಕೆ ವೆಚ್ಚ ಮಾಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

More articles

Latest article