ಮಹಾತ್ಮಾ ಗಾಂಧಿ ಮರಿಮೊಮ್ಮಗ ತುಷಾರ್‌ ಗಾಂಧಿ ಬಂಧನಕ್ಕೆ ಬಿಜೆಪಿ ಆಗ್ರಹ

Most read

ತಿರುವನಂತಪುರ: ಬಿಜೆಪಿ ಮತ್ತು ಆರ್‌ ಎಸ್‌ ಎಸ್‌ ವಿರುದ್ಧ ನೀಡಿರುವ ಹೇಳಿಕೆಯನ್ನು ಹಿಂಪಡೆಯಲು ನಿರಾಕರಿಸಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಮರಿಮೊಮ್ಮಗ ತುಷಾರ್‌ ಗಾಂಧಿ ಅವರನ್ನು ಬಂಧಿಸಬೇಕು ಎಂದು ಸಂಘ ಪರಿವಾರ ಆಗ್ರಹಪಡಿಸಿದೆ.

ಕೇರಳದ ತಿರುವನಂತಪುರದ ನಯ್ಯಟ್ಟಿಂಕರದಲ್ಲಿ ಗಾಂಧಿವಾದಿ ಪಿ. ಗೋಪಿನಾಥನ್ ನಾಯರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ್ದ ತುಷಾರ್ ಗಾಂಧಿ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್ ಎರಡೂ ಅಪಾಯಕಾರಿ ಹಾಗೂ ಕಪಟತನವಿರುವ ಶತ್ರುಗಳು. ಆರ್‌ಎಸ್‌ಎಸ್ ಎಂದರೆ ವಿಷವಿದ್ದಂತೆ ಎಂದು ಆರೋಪಿಸಿದ್ದರು.

ತುಷಾ‌ರ್ ಅವರ ಈ ಹೇಳಿಕೆ ಖಂಡಿಸಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರು, ಅವರಿದ್ದ ಕಾರನ್ನು ತಡೆದು, ಘೋಷಣೆ ಕೂಗಿದ್ದರು. ಕೊಚ್ಚಿ ಬಳಿಯ ಅಲುವದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ತುಷಾರ್, ‘ನಾನು ಒಮ್ಮೆ ನೀಡಿದ ಹೇಳಿಕೆಯನ್ನು ಹಿಂಪಡೆಯುವುದಿಲ್ಲ. ವಿಷಾದವನ್ನೂ ವ್ಯಕ್ತಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ಹೇಳಿಕೆ ನಂತರ ನಡೆದ ಬೆಳವಣಿಗೆಗಳು ಈ ದೇಶದ್ರೋಹಿಗಳನ್ನು ಬಯಲಿಗೆಳಯಲು ಇನ್ನಷ್ಟು ಪ್ರೇರೇಪಿಸಿ, ಬಲಿಷ್ಠಗೊಳಿಸಿವೆ. ಈ ಎರಡೂ ಸಂಸ್ಥೆಗಳ ವಿರುದ್ಧ ಕೈಗೊಳ್ಳಬೇಕಾದ ಹೋರಾಟವು ಸ್ವಾತಂತ್ರ್ಯ ಹೋರಾಟಕ್ಕಿಂತ ಅತ್ಯಗತ್ಯವಾಗಿದೆ. ‘ಸಂಘ’ ಎಂಬುದು ನಮ್ಮೆಲ್ಲರ ಸಮಾನ ಶತ್ರುವಾಗಿದೆ. ಅದರ ಮುಖವಾಡವನ್ನು ಕಳಚಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಮುತ್ತಜ್ಜನ ಕೊಲೆಗಾರರ ವಂಶದವರು ಮಹಾತ್ಮಾ ಗಾಂಧಿ ಅವರ ಭಾವಚಿತ್ರದ ಬಳಿ ಹೋಗಿ ಬಂದೂಕು ಇಟ್ಟು ಗುಂಡು ಹಾರಿಸುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ತುಷಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ‘ಮಹಾತ್ಮಾ ಗಾಂಧಿ ಅವರ ಮರಿ ಮೊಮ್ಮಗನಾಗಿ ಹುಟ್ಟಿರುವುದನ್ನೇ ಬಂಡವಾಳ ಮಾಡಿಕೊಳ್ಳಲು ಇವರು ಯತ್ನಿಸುತ್ತಿದ್ದಾರೆ. ಪ್ರತಿಮೆ ಅನಾವರಣಕ್ಕೆ ತುಷಾ‌ರ್ ಅವರನ್ನು ಆಹ್ವಾನಿಸಿದವರಿಗೆ ಅವರ ಹಿನ್ನೆಲೆಯ ಪರಿಚಯವಿದ್ದಿರಲಿಲ್ಲ ಎಂದೆನಿಸುತ್ತದೆ ಎಂದಿದೆ. ತುಷಾರ್ ಹೆಸರಿನ ಮುಂದೆ ‘ಗಾಂಧಿ’ ಎಂಬ ಉಪನಾಮ ಇದ್ದ ಮಾತ್ರಕ್ಕೆ ರಾಷ್ಟ್ರಪಿತ ಸ್ಥಾನಮಾನ ಸಿಗುತ್ತದೆ ಎಂದು ಭಾವಿಸಿರುವುದೇ ಭ್ರಮೆ. ಪಕ್ಷದ ವಿರುದ್ಧ ನೀಡಿದ ಹೇಳಿಕೆಗಾಗಿ ಇವರನ್ನು ಬಂಧಿಸಬೇಕು’ ಎಂದು ಬಿಜೆಪಿ ಮುಖಂಡ ವಿ. ಮುರಳೀಧರನ್ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪ್ರತಿಕ್ರಿಯಿಸಿ ತುಷಾರ್ ಗಾಂಧಿ ಮೇಲೆ ಸಂಘ ಪರಿವಾರದ ದಾಳಿ ಖಂಡನೀಯ. ಪ್ರಜಾಪ್ರಭುತ್ವ ಸಮಾಜದಲ್ಲಿ ವಾಕ್ ಸ್ವಾತಂತ್ರ್ಯ ಹತ್ತಿಕ್ಕುವ ಯಾವುದೇ ಕೃತ್ಯ ಎಸಗಲು ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

More articles

Latest article