ತಮಿಳುನಾಡು ಮಾದರಿಯಲ್ಲಿ ಕರ್ನಾಟಕವೂ ಕನ್ನಡ ಲಿಪಿಯ ರೂಪಾಯಿ ಚಿಹ್ನೆಯನ್ನು ರೂಪಿಸಬೇಕು; ಕರವೇ ಅಧ್ಯಕ್ಷ ನಾರಾಯಣಗೌಡ ಆಗ್ರಹ

Most read

ಬೆಂಗಳೂರು: ತಮಿಳುನಾಡು ಸರ್ಕಾರದ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ರೂಪಾಯಿ ಚಿಹ್ನೆಯನ್ನು ಕನ್ನಡ ಲಿಪಿಗೆ ಅನುಗುಣವಾಗಿ ಬದಲಾಯಿಸಬೇಕು ಮತ್ತು ಬಳಕೆಗೆ ತರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ  ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಆಗ್ರಹಪಡಿಸಿದ್ದಾರೆ.

ತಮಿಳುನಾಡು ಸರ್ಕಾರ ರೂಪಾಯಿ ಚಿಹ್ನೆಯನ್ನು ತಮಿಳಿನಲ್ಲಿಯೇ ಸಿದ್ಧಪಡಿಸಿ ಅದನ್ನು ಬಳಸಲು ಆರಂಭಿಸಿದೆ. ತಮಿಳಿಗರ ಸ್ವಾಭಿಮಾನದ ರಾಜಕಾರಣಕ್ಕೆ ಇದು ಸಾಕ್ಷಿ. ತಮಿಳಿಗರು ತಮ್ಮ ಮೇಲೆ ಇನ್ನೊಂದು ನುಡಿ ಹೇರಿಕೆಯಾಗುವುದನ್ನು ಎಂದೂ ಸಹಿಸುವುದಿಲ್ಲ. ತಮಿಳುನಾಡು ಸರ್ಕಾರದ ಈ ನಡೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಗತಿಸುತ್ತದೆ ಎಂದು ಎಕ್ಸ್‌ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ನಮ್ಮ‌ ಅಸ್ಮಿತೆ ಇರುವುದು ಕನ್ನಡ ಲಿಪಿಯಲ್ಲಿ, ಇನ್ಯಾವುದೋ ದೇವನಾಗರಿ ಲಿಪಿಯಲ್ಲಿ ಅಲ್ಲ. ಹೀಗಾಗಿ ರೂಪಾಯಿಗೊಂದು ಕನ್ನಡದ ಚಿಹ್ನೆ ಸಿದ್ಧಪಡಿಸಬೇಕು ಎಂದೂ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಎಲ್ಲ ಪರೀಕ್ಷೆಗಳೂ ಕನ್ನಡದಲ್ಲೇ ನಡೆಯಬೇಕು ಎಂದು ಇತ್ತೀಚಿಗಷ್ಟೇ ಆಗ್ರಹಪಡಿಸಲಾಗಿತ್ತು. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾದ್ದರಿಂದ ಕರ್ನಾಟಕ ಸರ್ಕಾರದ ಸೇವೆಗೆ ನೇಮಕ ಆಗುವ ಅಧಿಕಾರಿಗಳು ಕನ್ನಡವನ್ನೇ ಬಳಸಬೇಕು, ಕನ್ನಡದ ಜ್ಞಾನವೇ ಅವರಿಗೆ ಅತಿಮುಖ್ಯ ಅರ್ಹತೆ.‌ ಹೀಗಾಗಿ ಕನ್ನಡದಲ್ಲೇ ಕೆಪಿಎಸ್‌ ಸಿ ನಡೆಸುವ ಪರೀಕ್ಷೆಗಳು ಮತ್ತು‌ ಕರ್ನಾಟಕ ಸರ್ಕಾರದ ಸೇವೆಗೆ ನಡೆಯುವ ಇತರ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳೂ ಕನ್ನಡದಲ್ಲೇ ನಡೆಯಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದೆ.

ವಿಶೇಷ ಏನೆಂದರೆ ನಮ್ಮ ಆಗ್ರಹವನ್ನು ಮರಾಠಿ ನುಡಿಗೆ ಅನ್ವಯಿಸಿ ಮಹಾರಾಷ್ಟ್ರ ಸರ್ಕಾರ ಕಾಯ್ದೆ ರೂಪಿಸಿ ಜಾರಿ ಮಾಡಿದೆ. ಮಹಾರಾಷ್ಟ್ರ ಸರ್ಕಾರದ ಸೇವೆಗೆ ಸಿಬ್ಬಂದಿ ನೇಮಕಕ್ಕೆ ನಡೆಯುವ ಪೂರ್ವಭಾವಿ ಮತ್ತು‌ ಮುಖ್ಯ ಪರೀಕ್ಷೆಗಳನ್ನು ಮರಾಠಿಯಲ್ಲೇ ನಡೆಸುವ ಕಾಯ್ದೆ ಜಾರಿಯಾಗಿದೆ. ಇದರ ಪರಿಣಾಮವಾಗಿ ಮರಾಠಿ ಮಾಧ್ಯಮದಲ್ಲಿ ಓದುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ. ಮರಾಠಿ ನುಡಿ ಬಳಸುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಈ ನಿರ್ಧಾರಕ್ಕೆ ಮಹಾರಾಷ್ಟ್ರ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ ಎಂದು ನಾರಾಯಣಗೌಡರು ತಿಳಿಸಿದ್ದಾರೆ.

ಮಹಾರಾಷ್ಟ್ರ ಸರಕಾರದ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಕೂಡಲೇ ಸೂಕ್ತ ಕಾನೂನು ರೂಪಿಸಿ ಕೆಪಿಎಸ್‌ ಸಿ ಸೇರಿದಂತೆ ಕರ್ನಾಟಕ ಸರ್ಕಾರದ ಸೇವೆಗೆ ನೇಮಕವಾಗುವ ಅಧಿಕಾರಿ, ನೌಕರರ ಆಯ್ಕೆಗೆ ನಡೆಯುವ ಎಲ್ಲ ಪರೀಕ್ಷೆಗಳನ್ನೂ ಕನ್ನಡದಲ್ಲೇ ನಡೆಸುವ ತೀರ್ಮಾನ ಕೈಗೊಳ್ಳಬೇಕು ಎಂದು ಮತ್ತೊಮ್ಮೆ ಆಗ್ರಹಿಸುತ್ತೇನೆ. ತಮ್ಮ ನುಡಿ, ಸಂಸ್ಕೃತಿಯನ್ನು ರಕ್ಷಿಸಲು ನೆರೆಯ ರಾಜ್ಯಗಳು ಕೈಗೊಳ್ಳುತ್ತಿರುವ ತೀರ್ಮಾನಗಳನ್ನು ನೋಡಿಯಾದರೂ ರಾಜ್ಯ ಸರ್ಕಾರ ಕನ್ನಡ ಅಸ್ಮಿತೆ ಉಳಿಸಲು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಅವರು ವಿನಮ್ರವಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

More articles

Latest article