ನಾನು ಡಿಗ್ರಿ ಓದಲೆಂದು ನನ್ನೂರಿಲ್ಲಿರುವ(ಶಿವಮೊಗ್ಗ) ಸಹ್ಯಾದ್ರಿ ಕಾಲೇಜಿಗೆ ಸೇರಿದೆ. ಕಾಲೇಜಿಗೆ ಹೋದ ಮೊದಲ ದಿನವೇ ಪರಿಚಯ ಆದ ಗೆಳೆಯ ಅಜಿತ್ ಎಸ್ ಸಿಂಗ್.
ನಾನು ನಿರೀಕ್ಷೆ ಮಾಡಿದ ರೀತಿಯಲ್ಲಿಯೇ ನನಗೆ ಗೆಳೆಯ ಸಿಕ್ಕ ಎನ್ನುವ ಖುಷಿಯಾಯಿತು. ಯಾಕೆಂದರೆ ಅವನಿಗೆ ರಂಗಭೂಮಿ ಹುಚ್ಚು ನನಗೆ ಡ್ಯಾನ್ಸ್ ಮಾಡುವ ಹುಚ್ಚು. ಹೀಗೆ ಬಿ.ಎ ಯಲ್ಲಿ ಕಳೆದ ಮೂರು ವರ್ಷವು ಅಜಿತ್-ಮನು ಎಂದರೇ ಯಾವುದೇ ಕಾರ್ಯಕ್ರಮ ಮಾಡೋದಕ್ಕು ಸೈ ಎನ್ನುವಷ್ಟು ಹೆಸರು ಮಾಡಿದ್ವಿ.
ಹೀಗಿರುವಾಗ ಅಜಿತನ ಆ್ಯಕ್ಟಿಂಗ್ ಹುಚ್ಚು ಹೆಚ್ಚಾಗಿ ಒಂದು ಸಿನಿಮಾ ಮಾಡೋಣ ಅಂತ ತೀರ್ಮಾನ ಮಾಡಿದ್ವಿ. ಹೇಗೋ ಕಷ್ಟ ಪಟ್ಟು ಇಷ್ಟ ಪಟ್ಟು ಒಂದು ಸಿನಿಮಾ ಮಾಡಿದ್ವಿ. ಆ ಸಿನಿಮಾದ ಹೆಸರು “ಅದೇ ಗುಂಗು”. ಈ ಹೆಸರು ಕೊಟ್ಟಿದ್ದು ಅವನೆ.
ನಾವು ಓದುವಾಗ ಸಹ್ಯಾದ್ರಿ ಕಾಲೇಜಿನಲ್ಲಿ ಡ್ಯಾನ್ಸ್ ಅಂದ್ರೆ ಮನು, ಆ್ಯಕ್ಟಿಂಗ್ ಅಂದ್ರೆ ಅಜಿತ್ ಅನ್ನುವ ಮಟ್ಟಿಗೆ ಬಂದ್ವಿ. ಶಿವಮೊಗ್ಗದ ಹಲವಾರು ರಂಗತಂಡಗಳ ಜೊತೆ ಸೇರಿ ಅಜಿತ್ ಆ್ಯಕ್ಟಿಂಗ್ ಕ್ಯಾರಿಯರ್ ಶುರು ಮಾಡಿದ. ಅವನು ಅಭಿನಯಿಸಿದ ಮೊದಲ ನಾಟಕ ” ಊರು ಭಂಗ”. ಆ ನಾಟಕದ ಅಭಿನಯಕ್ಕೆ ಅತ್ಯತ್ತಮ ನಟ ಪ್ರಶಸ್ತಿ ಬರುತ್ತದೆ. ಈಗಲೂ ಆ ನಾಟಕದ ದೃಶ್ಯ ಇನ್ನೂ ಕಣ್ಣು ಮುಂದೆ ಇದೆ.
ಆಗಿನಿಂದ ಇಂದಿನ ತನಕವೂ ರಂಗಭೂಮಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾನೆ. ಅಜಿತ್ ನ ಎಲ್ಲರೂ ಗುರುತಿಸುವುದು ಅಜಿತ್ ಸಿಂಹ ಅಂತ. ಈಗಾಗಲೇ ಇನ್ಸ್ಟಾಗ್ರಾಂನಲ್ಲಿ ಅಜಿತ್ ಸಿಂಹ ಅಂತಾನೆ ಗುರುತಿಸಿಕೊಂಡು ಸಾವಿರಾರು ಅಭಿಮಾನಿಗಳನ್ನು ಗಳಿಸಿದ್ದಾನೆ. ಮೊದಲೆಲ್ಲ ಸಿನಿಮಾ ಡೈಲಾಗ್ಗಳಿಗೆ ರೀಲ್ಸ್ ಮಾಡುತ್ತಿದ್ದವ, ಈಗ ಅವನೇ ಡೈಲಾಗ್ ಬರೆದು ರೀಲ್ಸ್ ಮಾಡುತ್ತಾನೆ. ಅವನ ರೀಲ್ಸ್ಗಾಗಿ ಕರ್ನಾಟಕದ ಹಲವಾರು ಜನ ಅಭಿಮಾನಿಗಳಿದ್ದಾರೆ. ಅವರ ರೀಲ್ಸ್ ವಿಡಿಯೋಗಳು ಲಕ್ಷಾಂತರ ವಿವ್ಸ್ ಪಡೆದದ್ದಲ್ಲದೆ, ಲಕ್ಷಾಂತರ ಜನರ ವಾಟ್ಸ್ಯಪ್ ಸ್ಟೇಟಸ್ ಸಹ ಆಗಿದೆ.
ಇದರ ನಡುವೆಯೇ ಮೈಸೂರು ರಂಗಾಯಣದಲ್ಲಿ ಒಂದು ವರ್ಷ ಅಭಿನಯದ ಕೋರ್ಸ್ ಸಹ ಮಾಡಿದ್ದಾನೆ. ಇಷ್ಟೆಲ್ಲ ಮಾಡಲು ಅವನಿಗೆ ಬೆಂಬಲ ಕೊಟ್ಟಿದ್ದು ಅವನ ಕುಟುಂಬ ಮತ್ತು ರಿಪ್ಪನ್ಪೇಟೆಯ ಸ್ನೇಹಿತರು ಸಾಕಷ್ಟು ಸಲ ಹೇಳಿದ್ದಾನೆ.
ನನ್ನ ಗೆಳೆಯ ಅಜಿತ್ “Ajith cinmha” ಎಂಬ ಯೂಟ್ಯೂಬ್ ಚಾನೆಲ್ನಲ್ಲಿ “ಏರಿಸೀಮೆ” ಎಂಬ ಹೊಸ ಕಿರುಚಿತ್ರದ ಮೂಲಕ ಮತ್ತೆ ಜನರ ಮನಸ್ಸನ್ನು ಗೆಲ್ಲಲು ಬಂದಿದ್ದಾನೆ. 16 ನಿಮಿಷವಿರುವ ಈ ಕಿರುಚಿತ್ರ ಬಿಡುಗಡೆಗೊಂಡು ಕರ್ನಾಟಕದ ಜನರ ಮತ್ತು ಅವನ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ. ಚಿತ್ರದ ಶೀರ್ಷಿಕೆಯೆ ಇಷ್ಟು ಅದ್ಬುತವಾಗಿರುವಾಗ ಸಿನಿಮಾ ಹೇಗಿರಬಹುದು ಎಂಬ ಕುತೂಹಲದಲ್ಲಿ ಸಿನಿಮಾವನ್ನು ನೋಡಿದೆ. ಒಂದು ತೆಳುವಾದ ಕತೆಯಾದರೂ ಯಾವುದೇ ಗೊಂದಲವಿಲ್ಲದೆ ನೋಡಿಸಿಕೊಳ್ಳುತ್ತದೆ.
ಚಿತ್ರದಲ್ಲಿ ನಮ್ಮ ಮಲೆನಾಡಿನ ಸೌಂದರ್ಯ, ಬಡತನ, ಹಸಿವು, ಸಂತೋಷ, ದುಃಖ, ಕ್ರೌರ್ಯ, ಆಕ್ರೋಶ ಎಲ್ಲವೂ ಇದೆ.
ಅಜಿತ್ ನನ್ನ ಗೆಳೆಯ ಅನ್ನುವದಕ್ಕಿಂದ, ನಾನು ಅವನ ಅಭಿಮಾನಿಯಾಗಿ ಸಿನಿಮಾ ನೋಡಿದ್ದು. ಅವನು ಯಾವುದೇ ಕೆಲಸವನ್ನು ಮಾಡಿದರೇ ಎಷ್ಟು ಶಿಸ್ತಿನಿಂದ ಮಾಡುತ್ತಾನೆ ಎಂಬುದು ಹತ್ತಿರದಿಂದ ನೋಡಿದ ನನಗೆ ಈ ಸಿನಿಮಾದ ಬಗ್ಗೆಯೂ ಅಷ್ಟೇ ಶಿಸ್ತಿನ ನಿರೀಕ್ಷೆ ಇತ್ತು. ನನ್ನ ನಿರೀಕ್ಷೆಯನ್ನು ಇನ್ನಷ್ಟು ಬಲಗೊಳಿಸಿದ್ದಾನೆ. ಏರಿಸೀಮೆ ಚಿತ್ರದ ಇಡೀ ಚಿತ್ರತಂಡ ಅಜಿತ್ನ ಜೊತೆ ಸಂಪೂರ್ಣ ಬೆಂಬಲ ಕೊಟ್ಟಿರುವುದು ಕಾಣುತ್ತದೆ.
ನಿರ್ದೇಶಕ ಅಹನ್ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇಡೀ ಚಿತ್ರದ ತಕ್ಕತ್ತು ಅಜಿತ್ನ ಆಕ್ಟಿಂಗ್ ಜೊತೆಗೆ ಅದರ ಮ್ಯೂಸಿಕ್. ತಾಳ್ಮೆಯಿಂದ ಚಿತ್ರ ನಮ್ಮನ್ನು ಸಂಪೂರ್ಣ ಹಿಡಿದಿಟ್ಟು ಕೊಳ್ಳಲು ಕಾರಣ ಅದರ ಮ್ಯೂಸಿಕ್. ಪವನ್ ಸಾಲಿಯನ್ ಅವರ ಸಾಹಿತ್ಯವನ್ನು, ಸಿಂಚನ ಮೂರ್ತಿ ಅವರ ಧ್ವನಿಯನ್ನು, ಸಂಗೀತ ನಿರ್ದೇಶಕರಾದ ಸತ್ಯ ರಾಧಕೃಷ್ಣರವರು ಬಹಳ ಅತ್ಯತ್ತಮವಾಗಿ ಬಳಸಿದ್ದಾರೆ. ಇವರೆಲ್ಲರ ಬಗ್ಗೆ ಹೇಳಿದ ಮೇಲೆ ಚಿತ್ರದ ಛಾಯಗ್ರಾಹಕ ಕೌಶಿಕ್ ರಾಮಕೃಷ್ಣ ಇವರನ್ನು ಮರೆಯುವುದು ಹೇಗೆ. ಒಬ್ಬ ಕಲಾವಿದನನ್ನು ತನ್ನ ಕ್ಯಾಮೆರಾದ ಫ್ರೆಮ್ನಲ್ಲಿ ಎಷ್ಟು ಅದ್ಬುತವಾಗಿ ತೋರಿಸಬಹುದು ಅಷ್ಟನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇವೆಲ್ಲದರ ಜೊತೆಗೆ ಬಹಳ ಮುಖ್ಯವಾಗಿ ಗುರುತಿಸಬೇಕಾದ್ದು, ಚಿತ್ರದ ಕೊನೆಯಲ್ಲಿ ಬರುವ ಅನಿಮೇಷನ್. ದೇವಶ್ರೀ ಅವರು ಮಾಡಿದ ಅನಿಮೇಷನ್ ಇಡೀ ಚಿತ್ರದ ಕಥೆಯನ್ನೆ ಹೇಳುವ ರೀತಿ ಇದೆ.
ಅಜಿತ್ನ ಜೊತೆ ಅಜಯ್ ಅಪ್ಪು, ರಮೇಶ್ ಬೆನಕಲ್, ಮತ್ತು ಶ್ರೀವತ್ಸ ಬೈರಿ ಅಭಿನಯದಲ್ಲಿ ಸಾತ್ ಕೊಟ್ಟಿದ್ದಾರೆ.
ಈ ಸಿನಿಮಾ ಗೆಲ್ಲಲು ಕನ್ನಡಿಗರು ಹೇಗೆ ಜೊತೆ ನಿಂತಿದ್ದಾರೋ ಹಾಗೇಯೇ ಈ ಸಿನಿಮಾ ತಯಾರಿ ಆಗಲು ರಿಪ್ಪನ್ಪೇಟೆಯ ಸುರೇಶ್ ಎಸ್ ಆರ್ ಅವರು ಜೊತೆ ನಿಂತಿದ್ದಾರೆ. ಯುವ ಮನಸ್ಸುಗಳಿಗೆ, ಯುವ ಕಲಾವಿದರಿಗೆ ನಿರ್ಮಾಪಕರಾಗಿ ಸುರೇಶ್ ಅವರು ಬೆಂಬಲವಾಗಿ ನಿಂತಿದ್ದಾರೆ. ಈ ಸಿನಿಮಾ ಗೆಲ್ಲಬೇಕು ಎಂಬುದು ಒಬ್ಬ ಗೆಳೆಯನಾಗಿ, ಅಭಿಮಾನಿಯಾಗಿ ನನ್ನ ಹಂಬಲ.
ಚಿತ್ರದ ನೋಡದೆ ಇದ್ದವರು ಈ ಕೂಡಲೇ ನೋಡಿ. ಅಜಿತ್ ಸಿಂಹ ಯೂಟ್ಯೂಬ್ನಲ್ಲಿ ಇದೆ.
- ಮನೋಜ್ ಆರ್ ಕಂಬಳಿ